suddiduniya.com

2A Reservation :ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಗೆ ವಿರೋಧ

2A Reservation

ಬೆಳಗಾವಿ : ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ- 2ಎ ಮೀಸಲಾತಿ (2A Reservation )ನೀಡುವಂತೆ ಸಮುದಾಯದ ಮುಖಂಡರು ಬೆಳಗಾವಿಯಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

2ಎ ಮೀಸಲಾತಿಗೆ (2A Reservation )ಸೇರಿಸುವಂತೆ ಪಂಚಮಸಾಲಿ ಸಮುದಾಯದ ಜಗದ್ಗುರು ಬಸವಜಯ ಮೃತ್ಯಂಜಯ ಸ್ವಾಮೀಜಿ ನೇತ್ರತ್ವದಲ್ಲಿ ಸಮುದಾಯದವರು ಅನೇಕ ವರ್ಷಗಳಿಂದ ನಾನಾ ರೀತಿಯ ಹೋರಾಟ ಮಾಡುತ್ತಾ ಬಂದಿದ್ದಾರೆ. ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಸರಕಾರಕ್ಕೆ ಮತ್ತುಷ್ಟು ಒತ್ತಡ ಹೇರುವ ಹಿನ್ನಲೆಯಲ್ಲಿ ಗಂಭೀರ ಸ್ವರೂಪದ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ 2ಎ ಮೀಸಲಾತಿ (2A Reservation )ನೀಡಬೇಡಿ ಎಂದು ಹಿಂದುಳಿದ ಜಾತಿಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ 2002ರಿಂದ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಮತ್ತು ಪ್ರವರ್ಗ-3ಬಿ, ಎಂಬುದಾಗಿ ವಿಂಗಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರವರ್ಗ-1ಕ್ಕೆ ಶೇಕಡಾ 4, ಪ್ರವರ್ಗ-2ಎಗೆ ಶೇಕಡಾ 15, ಪ್ರವರ್ಗ-2ಬಿಗೆ ಶೇಕಡಾ 4, ಪ್ರವರ್ಗ-3ಎಗೆ ಶೇಕಡಾ 4, ಹಾಗೂ ಪ್ರವರ್ಗ-3ಬಿಗೆ ಶೇಕಡಾ 5 ರಷ್ಟು ಒಟ್ಟು ಮೀಸಲಾತಿಯ ಶೇಕಡಾ 32 ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನಿಗಧಿಪಡಿಸಲಾಗಿದೆ. 2002ರಿಂದ ಈವರೆವಿಗೂ ಅದೇ ರೀತಿ ಮೀಸಲಾತಿಯನ್ನು ಹಿಂದುಳಿದ ವರ್ಗಗಳು ರಾಜ್ಯದಲ್ಲಿ ಪಡೆಯುತ್ತಿವೆ.

ರಾಜ್ಯದಲ್ಲಿನ ಪಂಚಮಸಾಲಿ ಲಿಂಗಾಯತರು ಸರ್ಕಾರದ ಆದೇಶದ ಅನ್ವಯ ಪ್ರವರ್ಗ-3ಬಿ ಮೀಸಲಾತಿಯನ್ನು ಪಡೆಯುತ್ತಿದ್ದು, ಇತ್ತೀಚೆಗೆ ಈ ಸಮುದಾಯವನ್ನು ಪ್ರವರ್ಗ-30 ಯಿಂದ ಪ್ರವರ್ಗ-2ಎಗೆ ಬದಲಾಯಿಸಿ ಶೇಕಡಾ 15ರ ಮೀಸಲಾತಿಯಡಿಯಲ್ಲಿ ಪ್ರವರ್ಗ-2ಎ ನಲ್ಲಿ ಮೀಸಲಾತಿ (2A Reservation )ಕೊಡಲು ಒತ್ತಾಯಿಸಿ ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಿದ್ದು, ಧರಣಿ, ಹೋರಾಟ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡವನ್ನು ತರುತ್ತಿರುವುದು ನ್ಯಾಯಯೋಚಿತವಲ್ಲ,

2022-23ರಲ್ಲಿ ಬಿ.ಜೆ.ಪಿ ಸರ್ಕಾರದಲ್ಲಿ ಪ್ರವರ್ಗ-2ಬಿರಲ್ಲಿ ಬರುವ ಮುಸ್ಲಿಂರ ಶೇಕಡಾ 4ರ ಮೀಸಲಾತಿಯನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2ಡಿ ಎಂದು ಹೊಸದಾಗಿ ವರ್ಗಿಕರಿಸಿ ಪ್ರವರ್ಗ-2ಸಿಗೆ ಶೆಕಡಾ 2 ಮತ್ತು ಪ್ರವರ್ಗ-2ಡಿಗೆ ಶೇಕಡಾ 2ರಷ್ಟು ಮೀಸಲಾತಿಯನ್ನು ನೀಡಲಾಗಿರುತ್ತದೆ ಎಂದು ಆದೇಶವನ್ನು ಹೊರಡಿಸಲಾಗಿತ್ತು. ಈ ಹಿಂದೆ ಪ್ರವರ್ಗ-3ಎನಲ್ಲಿ ಬರುವ ಜಾತಿಗಳನ್ನು ಪ್ರವರ್ಗ-2ಸಿಗೆ ಸೇರಿಸಿ ಮತ್ತು ಪ್ರವರ್ಗ-3ಬಿ ನಲ್ಲಿ ಬರುವ ಜಾತಿಗಳನ್ನು ಪ್ರವರ್ಗ-2ಡಿಗೆ ಸೇರಿಸಿ ಈ ಹಿಂದೆ ಪ್ರವರ್ಗ-3ರ ಮೀಸಲಾತಿ ಶೇಕಡಾ 4 ಮತ್ತು ಹೊಸ ಆದೇಶದ ಮೀಸಲಾತಿ ಶೇಕಡಾ 2 ಒಟ್ಟು ಸೇರಿ ಪ್ರವರ್ಗ-2ಸಿಗೆ ಒಟ್ಟು ಶೇಕಡಾ 6 ಮತ್ತು ಪ್ರವರ್ಗ-2ಡಿಗೆ ಶೇಕಡಾ 7 ರಷ್ಟು ಮೀಸಲಾತಿಯನ್ನು ನಿಗಧಿಪಡಿಸಿ ಆದೇಶವನ್ನು ಹೊರಡಿಸಲಾಗಿರುತ್ತದೆ,

ಬಿ.ಜೆ.ಪಿ ಸರ್ಕಾರದ ಈ ಆದೇಶವನ್ನು ಮುಸ್ಲಿಂ ಸಮುದಾಯದವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ಅಂದಿನ ಬಿ.ಜೆ.ಪಿ ಸರ್ಕಾರದ ವಕೀಲರು ಸರ್ವೋಚ್ಚ ನ್ಯಾಯಾಲಯದಲ್ಲಿ 2002ರ ಆದೇಶವನ್ನು ಪಾಲನೆ ಮಾಡುವುದಾಗಿ ಹೇಳಿಕೆಯನ್ನು ನೀಡಿದ್ದು, ಬಿ.ಜೆ.ಪಿ ಸರ್ಕಾರದ ಆದೇಶವು ಜಾರಿಯಾಗಿರುವುದಿಲ್ಲ. ಇದರ ಜೊತೆಗೆ ಸರ್ಕಾರದ ಆದೇಶ ಸಂಖ್ಯೆ: ಹಿ.ವ.ಕ/35/22-2023 27.032023(ಹೊಸದಾಗಿ ಸೃಜಿಸಲಾಗಿರುವ ಪ್ರವರ್ಗ 2ಸಿ ಮತ್ತು ಪ್ರವರ್ಗ 2ಡಿ ಆದೇಶ) ರಾಜ್ಯ ಸರಕಾರ 2023 ಮಾರ್ಚ 27ರಂದು ಹೊರಡಿಸಿದ ಆದೇಶ (ಮುಸ್ಲಿಂ ಸಮುದಾಯಕ್ಕೆ ಆರ್ಥಿಕವಾಗಿ ದುರ್ಬಲ ವರ್ಗ(ಇ.ಡಬ್ಲ್ಯೂ.ಸಿ) ಗುಂಪಿಗೆ ಸೇರ್ಪಡೆ ಮಾಡಿದ ಆದೇಶ) ಪ್ರಶ್ನಿಸಿ ಎರಡು ಪ್ರಕರಣಗಳನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಸಾಲಟರಿ ಜನರಲ್‌ರವರು 2023 ಅಗಸ್ಟ್ 04ರಂದು ನಡೆದ ವಿಚಾರಣೆಯಲ್ಲಿ ಪರಿಷ್ಕೃತ ಪುನರ್‌ವರ್ಗೀಕರಣದ ಆದೇಶ 27.03.2023ರ ಆದೇಶವನ್ನು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಆಳವಡಿಸಿಕೊಳ್ಳಲಾಗುವುದಿಲ್ಲವೆಂದು ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಆದೇಶ  2023 ಮಾರ್ಚ 03ರನ್ನು ಮುಂದುವರಿಸಲಾಗುವುದು ಎಂದು ಹೇಳಿಕೆಯನ್ನು ದಾಖಲಿಸಿರುತ್ತಾರೆ. ಪ್ರಕರಣವು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ.

ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ 2ಎ ಕ್ಕೆ ಯಾವುದೇ ಸಮುದಾಯ ಹಾಗೂ ವರ್ಗಗಳನ್ನು ಸೇರ್ಪಡೆಕೊಳ್ಳಿಸಬಾರದೆಂದು ರಾಘವೇಂದ್ರ ಡಿ.ಜಿ ಎಂಬುವವರು ನ್ಯಾಯಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಕದ್ದಮೆ (ಪಿಐಎಲ್) ದಾಖಲಿಸಿದ್ದಾರೆ. ಯಾವುದೇ ಸಮುದಾಯಗಳನ್ನು ಪ್ರವರ್ಗ-2ಎಗೆ ಸೇರಿಸುವುದು ಅಥವಾ ಕೈ ಬಿಡುವುದನ್ನು ಉಚ್ಛ ನ್ಯಾಯಾಲಯದ ಮುಂದಿನ ಅನುಮತಿ ಇಲ್ಲದೇ ಹಾರಿಗೊಳಿಸುವುದಿಲ್ಲವೆಂದು ರಾಜ್ಯ ಸರ್ಕಾರ ಅಫೀಡೆಟ್ ಸಲ್ಲಿಸಿದೆ. ಪ್ರಕರಣವು ಉಚ್ಚ ನ್ಯಾಯಾಲದಲ್ಲಿ ಬಾಕಿ ಇರುತ್ತದೆ.

ಪಂಚಮಸಾಲಿ ಲಿಂಗಾಯತ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದುವರೆದ ಸಮುದಾಯವಾಗಿದೆ. ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ. ಚಿನ್ನಪ್ಪರೆಡ್ಡಿ ವರದಿ, ಈ ಎಲ್ಲಾ ವರದಿಗಳಲ್ಲಿ ಪಂಚಮಸಾಲಿ ಸಮುದಾಯವು ಮುಂದುವರಿದ ಸಮಾಜವೆಂದು ವರದಿ ಮಾಡಿವೆ. ಈ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಯಲ್ಲಿ (2A Reservation )ಸೇರಿಸಿದಲ್ಲಿ ಹಾಲಿ ಇರುವ ಪ್ರವರ್ಗ-2ಎರಲ್ಲಿ ಬರುವ ತೀರಾ ಹಿಂದುಳಿದ ಜಾತಿಗಳಾದ ಅಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಎಲ್ಲಾ ಹಿಂದುಳಿದ ಜಾತಿಗಳಿಗೆ ಮೀಸಲಾತಿಯಿಂದ ಅನ್ಯಾಯವಾಗುತ್ತಿದೆ.

ಯಾವುದೇ ಕಾರಣಕ್ಕೂ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಮೀಸಲಾತಿಗೆ (2A Reservation )ಸೇರಿಸಬಾರದು, ಒಂದು ವೇಳೆ ಪಂಚಮಸಾಲಿ ಲಿಂಗಾಯತ ಸಮುದಾಯವು ಪ್ರವರ್ಗ-2ಎ ಮೀಸಲಾತಿಗೆ ಸೇರಿದ್ದೇ ಆದಲ್ಲಿ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರವಾದ ಪ್ರತಿಭಟನೆ ಹಾಗೂ ಹೋರಾಟ ಮಾಡಲಾಗುವುದು ಎಂದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ವೇಳೆ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಣ್ಣಿಗೆರೆ ಆರ್‍.ವೆಂಕಟರಾಮಯ್ಯ, ಸುರೇಶ ಲಾತೂರ್,ಎಸ್.ಹನುಮಂತ ಪ್ರಸಾದ್, ಜಿ.ಕೆ.ಸತ್ಯ ಸೇರಿದಂತೆ ಅನೇಕರಿದ್ದರು.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!