ಸರ್ಕಾರಿ ಅಂಗವಿಕಲ ನೌಕರರ ಸಂಘ ಆಗ್ರಹ
ರಾಯಚೂರು : 7ನೇ ವೇತನ ಆಯೋಗದ (7th Pay Commission ) ಶಿಫಾರಸ್ಸಿನಂತೆ ಶೇ 6 ರಷ್ಟು ರಾಜ್ಯ ಸರ್ಕಾರಿ ಅಂಗವಿಕಲ ನೌಕರರಿಗೆ ಪ್ರಯಾಣ ಭತ್ಯೆಯ ಆದೇಶ ಸರ್ಕಾರವು ಕೂಡಲೇ ಹೊರಡಿಸುವುದು, ಮತ್ತು ಅಂಗವಿಕಲ ಸರ್ಕಾರಿ ನೌಕರರಿಗೆ ವೇತನಾ ಆಯೋಗ ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಬೇಡಿಕೆಗಳ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ವಿಶೇಷ ಚೇತನ ನೌಕರರಿಗೆ ಕೆಲವೊಂದು ವಿಶೇಷ ಸೇವಾ ಸೌಲಭ್ಯಗಳು ಮುಂಬಡ್ತಿ ಹಾಗೂ ಅವರು ಕಾರ್ಯನಿರ್ವಹಿಸುತ್ತಿರುವ ಕಚೇರಿ ಸ್ಥಳಗಳಲ್ಲಿ ಅಂಗವಿಕಲರ ಸ್ನೇಹಿ ವಾತಾವರಣ ಇಲ್ಲದೇ ಪರದಾಡುವಂತಾಗಿದೆ. ನೌಕರರಿಗೆ 2016ರ ಅಂಗವಿಕಲ ವ್ಯಕ್ತಿಗಳ ಕಾಯ್ದೆಯನ್ವಯ ದಕ್ಕಬೇಕಾದ ಸಾಂವಿಧಾನಾತ್ಮಕ ಹಕ್ಕುಗಳನ್ನು ಅನುಷ್ಠಾನಗೊಳಿಸಲು ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಪರಿಗಣಿಸಿ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು.
7ನೇ ವೇತನ ಆಯೋಗದ ಶಿಫಾರಸ್ಸು ಯಥಾವತ್ತಾಗಿ ಜಾರಿಗೆ ತನ್ನಿ :
ರಾಜ್ಯದ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ( 7th Pay Commission )ರಾಜ್ಯ ಸರ್ಕಾರಿ ಅಂಗವಿಕಲ ನೌಕರರಿಗೆ ಪ್ರಯಾಣ ಭತ್ಯೆಯ ಆಯೋಗ (7th Pay Commission )ನೀಡಿದ ಎಲ್ಲಾ ಶಿಫಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಅಂಗವಿಕಲ ನೌಕರರಿಗೆ ಕೇಂದ್ರ ಸರ್ಕಾರ ಎ ಮತ್ತು ಬಿ ಹಾಗೂ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಬಡ್ತಿಯಲ್ಲಿ ಮೀಸಲಾತಿ ಜಾರಿಗೊಳಿಸಿದಂತೆ ಕರ್ನಾಟಕ ಸರ್ಕಾರ ಸಿ ಮತ್ತು ಡಿ ವೃಂದದ ಹುದ್ದೆಗಳಿಗೆ ಮಾತ್ರ ಬಡ್ತಿಯಲ್ಲಿ ಮೀಸಲಾತಿ ನೀಡಿರುತ್ತದೆ. ಅದೇ ರೀತಿಯಾಗಿ ಎ ಮತ್ತು ಬಿ ವೃಂದದ ಹುದ್ದೆಗಳಿಗೂ ಬಡ್ತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿ ಶೀಘ್ರವಾಗಿ ಆದೇಶವನ್ನು ಹೊರಡಿಸಬೇಕು. ರಾಜ್ಯದ ಶಾಲಾ ಕಾಲೇಜುಗಳಲ್ಲಿನ ಶಿಕ್ಷಕರು,ಉಪನ್ಯಾಸಕರು ಹಾಗೂ ಬೋದಕೇತರ ಅಂಗವಿಕಲ ನೌಕರರ ಸೇವಾವಧಿಯಲ್ಲಿ ಒಂದು ಬಾರಿ ನೀಡುವ ವರ್ಗಾವಣೆ ಪ್ರಕ್ರಿಯೆ ನಿಯಮವನ್ನು ಕೈಬಿಡುವುದು. ಹಾಗೂ ಅವರ ಪರಿಸ್ಥಿತಿಗನುಗುಣವಾಗಿ ಆದ್ಯತೆಯ ಮೇರೆಗೆ ಸೇವಾ ಅವಧಿಯಲ್ಲಿ ಎಷ್ಟು ಬಾರಿಯಾದರು ವರ್ಗಾವಣೆಯನ್ನು ಪಡೆಯಲು ಮುಕ್ತ ಅವಕಾಶವನ್ನು ಕಲ್ಪಿಸಬೇಕು.
ರಾಜ್ಯದಲ್ಲಿ ವಿಕಲಚೇತನ ಅರ್ಹತೆಯುಳ್ಳ ವಿದ್ಯಾವಂತ ನಿರುದ್ಯೋಗಿಗಳಿಗೆ ಸಾಮಾಜಿಕ ನ್ಯಾಯದನ್ವಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದಿನಿಂದಲೂ ಮೀಸಲಿರಿಸಿದ್ದ ಭರ್ತಿ ಮಾಡದೇ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನಂತೆ ಕೂಡಲೇ ಭರ್ತಿ ಮಾಡಬೇಕು. ರಾಜ್ಯದ ನಿರುದ್ಯೋಗಿ ವಿಕಲಚೇತನರ ಜೀವನ ನಿರ್ವಹಣೆ ಹಾಗೂ ಸಾಮಾಜಿಕ ಭದ್ರತೆಗಾಗಿ ನೀಡುತ್ತಿರುವ ಪೋಷಣಾ ಭತ್ಯೆಯನ್ನು ತಿಂಗಳಿಗೆ ಕನಿಷ್ಠ 5000 ರೂಪಾಯಿಗಳನ್ನು ಮಂಜೂರು ಮಾಡಬೇಕು.
ವಿಶೇಷ ಚೇತನ ಕಾರ್ಯಕರ್ತರನ್ನು ಖಾಯಂಗೊಳಿಸಿ :
ಗ್ರಾಮೀಣ ಪುನರ್ವಸತಿ ಯೋಜನೆಯಡಿಯಲ್ಲಿ ಗೌರವ ಧನ ಆಧಾರದಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿಶೇಷ ಚೇತನ (ವಿಆರ್,ಎಂಆರ್ ಡಬ್ಲೂ, ಯುಆರ್ ಡಬ್ಲೂ) ಕಾರ್ಯಕರ್ತರನ್ನು ಖಾಯಂ ಗೊಳಿಸಿ ಅವರೊಹೆ ಉದ್ಯೋಗ ಭದ್ರತೆಯನ್ನು ನೀಡಬೇಕು ಇಲ್ಲವೇ ಕನಿಷ್ಠ ವೇತನ ಜಾರಿ ಮಾಡಿ ಅವರಿಗೆ ಜೀವನ ಭದ್ರತೆಯನ್ನು ಒದಗಿಸಲು ಮುಂದಾಗಬೇಕು. ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016ರ ಅನ್ವಯ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ವಿಕಲಚೇತನರಿಗೆ ಉಂಟು ಮಾಡುತ್ತಿರುವ ಶೋಷಣೆಯನ್ನು ತಪ್ಪಿಸಲು ಸೂಕ್ತವಾದ ಕಠಿಣ ಕ್ರಮಗಳ ಕ್ರಮಗಳನ್ನು ಕೈಗೊಳ್ಳಬೇಕು.ಕರ್ನಾಟಕದಲ್ಲಿ ವಿಕಲಚೇತನರಿಗೆ ಪ್ರಯಾಣದಲ್ಲಿ ನೀಡುತ್ತಿರುವ ರಿಯಾಯಿತಿ ಬಸ್ ಪಾಸ್ 100 ಕಿ.ಮೀಗೆ ಮಿತಿಗೊಳಿಸಿರುವುದನ್ನು ಕೈ ಬಿಟ್ಟು ಇಡೀ ರಾಜ್ಯದಾದ್ಯಂತ ಪ್ರಯಾಣಿಸಲು “ಶಕ್ತಿ” ಯೋಜನೆ ಮಾದರಿಯಲ್ಲಿ ಯೋಜನೆ ರೂಪಿಸಿ ಅಂಗವಿಕಲರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ಕೇಂದ್ರ ಸರ್ಕಾರದ ‘ಸುಗಮ್ಮ ಯೋಜನೆ’ಯಡಿ ರಾಜ್ಯ ಹಾಗೂ ಜಿಲ್ಲೆಯ ಖಾಸಗಿ ಹಾಗೂ ಎಲ್ಲಾ ಸಾರ್ವಜನಿಕ ಸರಕಾರಿ ಕಚೇರಿಗಳಲ್ಲಿ ವಿಕಲಚೇತನರ ಸ್ನೇಹಿ ವಾತಾವರಣದ ಮೂಲ ಸೌಕರ್ಯಗಳಾದ ರಾಂಫ್ಗಳು, ಲಿಫ್ಟ್ ಹಾಗೂ ವಿಶೇಷಚೇತನ ಸ್ನೇಹಿ ಶೌಚಾಲಯಗಳನ್ನು ಸುಧಾರಿತ ಆಧುನಿಕ ತಂತ್ರಜ್ಞಾನದ ಮಾನ ದಂಡಗಳ ಅನ್ವಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸಿ :
ರಾಜ್ಯದ ವಿಕಲಚೇತನ ಪ್ರತಿಭಾನ್ವಿತರು ಹಾಗೂ ನಿವೃತ್ತ ನೌಕರರನ್ನು ರಾಜ್ಯದ ವಿವಿಧ ಖಾಸಗಿ ಹಾಗೂ ಸರ್ಕಾರದ ನಿಗಮ, ಮಂಡಳಿ, ಪರಿಷತ್ತು, ವಿಶ್ವವಿದ್ಯಾಲಯ ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿನ ವಿವಿಧ ಸಮಿತಿಗಳಿಗೆ ಸದಸ್ಯರು ಹಾಗೂ ಅಧ್ಯಕ್ಷರ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವ ಕುರಿತು 2016ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮದನ್ವಯ ಶೇ 5 ರಷ್ಟು ಮೀಸಲಾತಿಯನ್ನು ಕಲ್ಪಿಸಲು ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು. ರಾಜ್ಯದಲ್ಲಿನ ಅಂಗವಿಕಲರ ಸಬಲೀಕರಣಕ್ಕಾಗಿ 2016 ರ ಅಧಿನಿಯಮ ಅನ್ವಯ ಅಂಗವಿಕಲರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದು. ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿಕಲಚೇತನರ ಸಂಪನ್ಮೂಲ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಆಯೋಜಿಸುತ್ತಿರುವ ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ರಾಜ್ಯದ ವಿಕಲಚೇತನರ ಸಂಘ ಸಂಸ್ಥೆಗಳಿಗೆ ಶೇ 5% ರಷ್ಟು ಪ್ರತ್ಯೇಕವಾಗಿ ಅನುದಾನವನ್ನು ಮೀಸಲಿಟ್ಟು ಬಿಡುಗಡೆ ಮಾಡಬೇಕು. ಅಂಗವಿಕಲ ರಾಜ್ಯ ಸರ್ಕಾರಿ ನೌಕರರು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲು ಸಂಘ ಸಂಸ್ಥೆಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡುವುದು. ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು.
2016 ರ ಅಂಗವಿಕಲ ವ್ಯಕ್ತಿಗಳ ಅಧಿನಿಯಮದಂತೆ 21 ವಿವಿಧ ಸ್ವರೂಪದ ಅಂಗವಿಕಲತೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಸೇರ್ಪಡೆಗೊಳಿಸಲಾಗಿದ್ದು ರಾಜ್ಯದಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಳವಾಗಿದೆ. ಇದಕ್ಕನುಗುಣವಾಗಿ ಶೇ 5 ರಿಂದ ಶೇ 15 ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಹೆಚ್ಚು ಅನುದಾನವನ್ನು ಮೀಸಲಿಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಸರಕಾರಿ ಅಂಗವಿಕಲ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.