ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ
ಲಿಂಗಸುಗೂರು : ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾಲಂಬಿಗಳಾಗಿ ಜೀವನ ನಡೆಸಲಿ ಎಂಬ ಉದ್ದೇಶ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ( rural development )ಗ್ರಾಮಾಭಿವೃದ್ಧಿ ಸಂಸ್ಥೆ ಹುಟ್ಟು ಹಾಕಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮೋಹನ್ ನಾಯ್ಕ ಹೇಳಿದರು.
ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ( rural development )ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಸುಗೂರು ತಾಲೂಕಿನಲ್ಲಿ ಕಳೆದ 11 ವರ್ಷಗಳಿಂದ ಧರ್ಮಸ್ಥಳ ಸಂಸ್ಥೆ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ 2477 ಮಹಿಳಾ ಸ್ವ ಸಹಾಯ ಸಂಘಗಳಿವೆ. 20406 ಸದಸ್ಯರಿದ್ದಾರೆ. ಸಂಘಗಳ ಮೂಲಕ 13 ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾರೆ. ( rural development )ಗ್ರಾಮೀಣ ಭಾಗ ಸುಧಾರಿಸಿದರೆ ಪಟ್ಟಣ ಅಭಿವೃದ್ಧಿಯಾಗಲು ಸಾಧ್ಯವೆಂದು ಮನಗಂಡಿರುವ ಡಾ.ವಿರೇಂದ್ರ ಹೆಗ್ಗಡೆಯವರು ವಿವಿಧ ಯೋಜನೆಗಳ ಮೂಲಕ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ದುರ್ಬಲ ವರ್ಗದವರನ್ನು ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದಾರೆ.
ತಾಲೂಕಿನಲ್ಲಿ 2035 ಕುಟಂಬಗಳು ಕೃಷಿ ಅಭಿವೃದ್ಧಿ ಯೋಜನೆಯ ಮೂಲಕ 20 ಕೋಟಿ ರೂಪಾಯಿ ಪಡೆದುಕೊಂಡು ಕೃಷಿ ಪ್ರಗತಿ ಹೊಂದಿದ್ದಾರೆ. 1045 ಕುಟಂಬಗಳು ಹೈನುಗಾರಿಕೆಗಾಗಿ ಆಕಳು, ಆಡು, ಕುರಿ ಸಾಕಾಣಿಕೆಗಾಗಿ 8 ಕೋಟಿ ರೂಪಾಯಿ ಪ್ರಗತಿ ನಿಧಿ ಪಡೆದುಕೊಂಡಿದ್ದಾರೆ.
6755 ಕುಟಂಬಗಳು ಸ್ವ-ಉದ್ಯೋಗ ಯೋಜನೆ ಮುಖಾಂತರ ಕೌಶಲ್ಯಾಭಿವೃದ್ಧಿ, ಟೈಲರಿಂಗ್, ಬ್ಯೂಟಿ ಪಾರ್ಲರ್, ಹಾಳೆ ತಟ್ಟೆ, ಅಗರಭತ್ತಿ ಸೇರಿದಂತೆ ಇನ್ನಿತರ ಸ್ವಯಂ ಉದ್ಯೋಗ ಮಾಡುತ್ತಾ ಆರ್ಥಿಕ ಗುಣಮಟ್ಟ ಹೆಚ್ಚಿಸಿಕೊಂಡು ಸ್ವಾಲಂಭಿಗಳಾಗಿದ್ದಾರೆ. 7998 ಕುಟಂಬಗಳು ಮೂಲಸೌಕರ್ಯ ಯೋಜನೆ ಮೂಲಕ ತಮ್ಮ ಮನೆಗಳ ದುರಸ್ಥಿ ಹಾಗೂ ಮನೆ ನಿರ್ಮಾಣ ಮಾಡಿದ್ದಾರೆ. 560 ಕುಟಂಬಗಳು ಪ್ರಗತಿನಿಧಿ ಮೂಲಕ ಸದಸ್ಯರ ಮಕ್ಕಳ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.
3123 ಕುಟಂಬಗಳು ಹಸಿರು ಇಂಧನ ಮೂಲಕ ಗ್ರೀನ್ ವೇ, ಕುಕ್ ಸ್ಟೌವ್, ಸೋಲಾರ್ ದೀಪ, ವಾಟರ್ ಹೀಟರ್, ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದಾರೆ. ಪಾಲುದಾರ ಸದಸ್ಯರ ತುರ್ತು ಚಿಕಿತ್ಸಾ ವೆಚ್ಚಗಳಿಗೆ ಅನುಕೂಲವಾಗಲೆಂದು 540 ಸದಸ್ಯರುಗಳಿಗೆ 53.75 ಲಕ್ಷ ರೂ ಆರೋಗ್ಯ ರಕ್ಷ ಮೊತ್ತ ನೀಡಲಾಗಿದೆ ಎಂದರು.
ಮಹಿಳೆಯರಿಗೆ ಅರಿವು :
ಮಹಿಳೆಯರಿಗೆ ಆರೋಗ್ಯ, ನೈಮರ್ಲ್ಯ, ಉದ್ಯೋಗ, ಮಕ್ಕಳ ಶಿಕ್ಷಣ, ಕಾನೂನು ಅರಿವು ಮೂಡಿಸುವ ಹಿನ್ನಲೆಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 25 ಮಹಿಳಾ ಜ್ಞಾನವಿಕಾಸ ಕೇಂದ್ರಗಳಲ್ಲಿ 125 ಸ್ವ-ಸಹಾಯ ಸಂಘಗಳು, 1071 ಸದಸ್ಯರಿಗೆ ತರಭೇತಿ ನೀಡಲಾಗಿದೆ. ತಾಲೂಕಿನ ಹಟ್ಟಿ ಗ್ರಾಮದಲ್ಲಿ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಓರ್ವ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲಾಗಿದೆ.
ಕೇಂದ್ರ ಸರ್ಕಾರದ ಇ-ಗವರ್ನೆನ್ಸ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸಲು ರಾಜ್ಯಾದ್ಯಾಂತ ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರಯಲಾಗಿದ್ದು, ತಾಲೂಕಿನಲ್ಲಿ 35 ಸಿಎಸ್‍ಸಿ ಕೇಂದ್ರಗಳನ್ನು ತೆರಯಲಾಗಿದೆ ಎಂದರು. ವಿಶೇಷಚೇತನರಿಗೆ ಅನುಕೂಲವಾಗುವಂತೆ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪೆಟ್ಟು ಬೀಳುವಂತಾಗಿತ್ತು. ಇದನ್ನು ಮನಗಂಡ ಸಂಸ್ಥೆಯ ಜ್ಞಾನ ದೀಪ ಯೋಜನೆಯಡಿಯಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಶಿಕ್ಷಕರ ನಿಯೋಜನೆ ಮಾಡಲಾಗುತ್ತಿದೆ. ಶಾಲೆಗಳಿಗೆ ಪೀಠೋಪಕರಣಗಳ ಕೊರತೆ ನಿಗಿಸುವ ಕೆಲಸ ಸಂಸ್ಥೆ ಮಾಡುತ್ತಾ ಬಂದಿದೆ. ತಾಲೂಕಿನಲ್ಲಿ ಎಲ್ಲಾ ಧರ್ಮಗಳ ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಸುಕ್ಷೇತ್ರದಿಂದ 45.50 ಲಕ್ಷ ರೂಪಾಯಿಗಳಲ್ಲಿ 32 ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ.
ದುಶ್ಚಟಮುಕ್ತ ಸಮಾಜ :
ದುಶ್ಚಟಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಡಾ.ವಿರೇಂದ್ರ ಹೆಗ್ಗಡೆಯವರು ಜನಜಾಗೃತಿ ವೇದಿಕೆ ಮೂಲಕ ಮಧ್ಯವರ್ಜನ ಶಿಬಿರ ಹಮ್ಮಿಕೊಂಡು ತಾಲೂಕಿನ 240 ಮಧ್ಯವ್ಯಸನಿಗಳು ಮಧ್ಯಪಾನ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಶಂಶಾಲಂ ನಾಗಡದಿನ್ನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅನೇಕ ಯೋಜನೆಗಳ ಮೂಲಕ ಮಹಿಳಾ, ದುರ್ಬಲ, ನಿರ್ಗತಿಕರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಸರ್ಕಾರದ ಮಾಡದ ಕೆಲಸವನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯವಾದ್ದದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮಹಿಳೆಯರು ಹೆಚ್ಚು ಅರಿತುಕೊಂಡು ಆರ್ಥಿಕ ಸ್ವಾಲಂಬಿಗಳಾಗಬೇಕು ಎಂದರು.
ಸಮಾವೇಶದಲ್ಲಿ ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ವೀಲ್ಹಚೇರ್ ಹಾಗೂ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕ ಪರಶುರಾಮ ರೊಟ್ಟಿಗವಾಡ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷೆ ಶಶಿಕಲಾ ಭೋವಿ, ಪುರಸಭೆ ಸದಸ್ಯ ಮಹ್ಮದ ರಫಿ, ಸಂಗಮೇಶ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಸರೋಜಮ್ಮ ಪಾಟೀಲ್, ಉಪನ್ಯಾಸಕಿ ಶಾಂತಾ ಪಾಟೀಲ್‍್, ಯೋಜನಾಧಿಕಾರಿ ಅಡಿವೆಯ್ಯ ಸೇರಿದಂತೆ ಅನೇಕರಿದ್ದರು.