ರಾಯಚೂರಿನಲ್ಲಿ ಎಸ್ಎಫ್ಐ ಹೋರಾಟ :
ರಾಯಚೂರು: ಹೆಚ್ಚುವರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (Graduate school teachers )( ಜಿಪಿಎಸ್ಟಿಆರ್) ಹಾಗೂ ಪ್ರೌಢಶಾಲಾ ಶಿಕ್ಷಕರ (ಹೆಚ್ ಎಸ್ ಟಿ ಆರ್ ) ಹುದ್ದೆಗಳನ್ನು ಹೆಚ್ಚಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ( ಎಸ್ಎಫ್ಐ) ಹಾಗೂ ಅಥಿತಿ ಶಿಕ್ಷಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರದ ಬಸವ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಮೆರವಣಿಗೆ ಮಾಡಿ ಸರ್ಕಾರದ ವಿರುದ್ದ ಘೋಷಣೆ ಹಾಕಿ ಡಿಸಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಶಿಕ್ಷಕರ ನೇಮಕಾತಿ ಆದೇಶ ಇ.ಪಿ. 230 ಪಿ.ಬಿ.ಎಸ್. 2024 ಬೆಂಗಳೂರು ದಿನಾಂಕ 7.10.2024 ರಂದು 5,267 ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿರುವುದು ಉತ್ತಮ ಬೆಳವಣಿಗೆ. ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಈಗಾಗಲೇ ಸುಮಾರು 20,000 ಪಿಎಸ್ ಟಿ ಶಿಕ್ಷಕರು ಸೇವಾ ನಿವೃತ್ತಿ ಹೊಂದಿದ್ದಾರೆ ಹಾಗೂ 2025- 26ನೇ ಸಾಲಿನಲ್ಲಿ 40,000 ಪಿಎಸ್ ಟಿ ಶಿಕ್ಷಕರು ಸೇವಾ ನಿವೃತ್ತಿ ಹೊಂದಲಿದ್ದು, ಬಹುತೇಕ 1996-97ನೇ ಸಾಲಿನ ಅಂದಿನ ಶಿಕ್ಷಣ ಸಚಿವರು ಗೋವಿಂದಗೌಡರ ಅವಧಿಯಲ್ಲಿ ತುಂಬಿಕೊಂಡಿದ್ದ ಎಲ್ಲಾ ಶಿಕ್ಷಕರು ಮುಂದಿನ 2 ವರ್ಷಗಳಲ್ಲಿ ಸಂಪೂರ್ಣವಾಗಿ ನಿವೃತ್ತಿಯಾಗಲಿದ್ದಾರೆ. ಆದರೆ ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದಿರುವುದು ತಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಬಿ.ಎಡ್. ಕಾಲೇಜುಗಳು ಇಲ್ಲದಿರುವುದನ್ನು ಗಮನಿಸಬಹುದು.
ಶೇ.45.80 ರಷ್ಟು ಶಿಕ್ಷಕರ ಹುದ್ದೆ ಖಾಲಿ :
ಈ ಹಿನ್ನೆಲೆಯಲ್ಲಿ 48,000 ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಪೈಕಿ 22 ಸಾವಿರ ಅಂದರೆ ಶೇ.45.80ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರಲ್ಲಿ ಅರ್ಧದಷ್ಟು ಶಿಕ್ಷಕರನ್ನೂ ನೇಮಕ ಮಾಡಿಕೊಂಡಿಲ್ಲ. 2024ರ ಶೈಕ್ಷಣಿಕ ಸಾಲಿನಲ್ಲಿ 25,000 ಶಾಲೆಗಳಲ್ಲಿ ಒಬ್ಬರಿಬ್ಬರು ಶಿಕ್ಷಕರಿದ್ದಾರೆ. ತಾವುಗಳು ಇದನ್ನೆಲ್ಲಾ ಪರಿಗಣಿಸಿ ಹೆಚ್ಚುವರಿಯಾಗಿ ಕನಿಷ್ಠ 10,000ಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿಕೊಳ್ಳುವುದು ಅಗತ್ಯವಿದೆ. ಕರ್ನಾಟಕವನ್ನು ಶೈಕ್ಷಣಿಕವಾಗಿ ಏಕಮುಖ ರೀತಿ ನೋಡಲು ಸಾಧ್ಯವಿಲ್ಲದ ಪರಿಸ್ಥಿತಿ ಇನ್ನೂ ಮುಂದುವರೆದಿದೆ. ಆದ್ದರಿಂದ ಸರ್ಕಾರ ಶಿಕ್ಷಕರ ನೇಮಕಾತಿಗಾಗಿ ಈಗಾಗಲೇ ಕರೆದಿರುವ ಮತ್ತು ಮುಂದೆ ಕರೆಯಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ವಲ್ಪ ಬದಲಾವಣೆಯನ್ನು ತರುವುದು ಜರೂರಿದೆ. ಈಗಾಗಲೇ ಚರ್ಚೆಯಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ನೇಮಕಾತಿ, ದೈಹಿಕ ಶಿಕ್ಷಕರ ನೇಮಕಾತಿ(ವಿಶೇಷ ಕ್ಷೇತ್ರದ ಶಿಕ್ಷಕರ)ಯನ್ನು ಪರಿಗಣಿಸಿದಾಗ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಷಯವಾಗಿದೆ.
ಆದರೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಪರಿಗಣಿಸಿದರೆ, ಈಗ ಕರೆದಿರುವ ಶಿಕ್ಷಕರ ಹುದ್ದೆಗಳ ಭರ್ತಿ ಸಾಕಾಗುವುದಿಲ್ಲ ಎನ್ನುವುದು ಸದರಿ ನೇಮಕಾತಿಯ ಅಧಿಸೂಚನೆಗೆ ಸಂಬಂಧಿಸಿದಂತೆ (Graduate school teachers ) ಬಿ.ಎಡ್. ಪದವಿ ಮಾನದಂಡದ ಮೇಲೆ ನೇಮಕ ಮಾಡಿಕೊಳ್ಳುವ 6 ರಿಂದ 8ನೇ ತರಗತಿಗೆ ಶಿಕ್ಷಕರ ನೇಮಕಾತಿಯಲ್ಲಿ ಕೇವಲ 78 ಹುದ್ದೆ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಇಲ್ಲಿ ನೇಮಕಾತಿಗಳಲ್ಲಿ ಅಜಗಜಾಂತರ ವ್ಯತ್ಯಾಸಗಳು ಇರುವುದನ್ನು ಈ ಸಂದರ್ಭದಲ್ಲಿ ಇಲಾಖೆ ಮತ್ತು ಸಚಿವರಾದ ತಾವುಗಳು ಗಂಭೀರವಾಗಿ ಗಮನಿಸಬೇಕಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 5,000 GPSTR & HSTR ಹುದ್ದೆಗಳನ್ನು ತುಂಬಿಕೊಳ್ಳುವ ಅಗತ್ಯವಿದೆ. ಹಾಗಾಗಿ ಸರ್ಕಾರ ಚರ್ಚೆಯಲ್ಲಿ ಇಟ್ಟಿರುವ 5,267 ಹುದ್ದೆಗಳ ಪೈಕಿ GPSTR ನೇಮಕಾತಿ ಹುದ್ದೆಗಳನ್ನು ಇನ್ನೂ 5,000 ಕ್ಕೆ ಹೆಚ್ಚಿಸಿ ಒಟ್ಟು 10,267ಕ್ಕು ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವಂತೆ ಈ ಕೂಡಲೇ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್ಐ) ಒತ್ತಾಯಿಸಿದೆ.
ಬೇಡಿಕೆಗಳು ಈಡೇರಿಸಿ :
ಹೈ.ಕರ್ನಾಟಕದಲ್ಲಿ 14,107 ಶಿಕ್ಷಕರ ಹುದ್ದೆ ಖಾಲಿ ಇವೆ. ಕನಿಷ್ಟ 10,000 ಅಧಿಕವಾಗಿ ಪ್ರಾಥಮಿಕ ಮತ್ತು ಪ್ರೌಢ(ಮಾಧ್ಯಮಿಕ) ಶಿಕ್ಷಕರ ನೇಮಕಾತಿಯನ್ನು ಹೆಚ್ಚಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ GPSTR 10,000 & HSTR 3,500 ಸೇರಿದಂತೆ ಒಟ್ಟು 14,107 ಹುದ್ದೆಗಳು ಖಾಲಿ ಇದ್ದು, ಅಂದರೆ ಡಿ.ಎಡ್ ಪದವಿದರರಿಗೆ PSTR 4,424 ಹುದ್ದೆಗಳು, ಪಧವಿದರ ಪ್ರಾಥಮಿಕ ಶಿಕ್ಷಕರ ಹುದ್ದೆಗಳು (GPSTR) 78 ಹುದ್ದೆಗಳು ಪ್ರೌಢಶಾಲಾ ಶಿಕ್ಷಕರ (HSTR ) 121 ಹುದ್ದೆಗಳ ನೇಮಕ ಆವೈಜ್ಞಾನಿಕವಾಗಿದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಶೇ.80ರಷ್ಟು ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(GPSTR) ಹಾಗೂ ಪ್ರೌಢಶಾಲಾ ಶಿಕ್ಷಕರ(HSTR) ಹುದ್ದೆಗಳನ್ನು ಹೆಚ್ಚಿಸಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಶೈಕ್ಷಣಿಕವಾಗಿ ಬಲಗೊಳಿಸಬೇಕು. ಕಳೆದ 2022ರ ನೇಮಕಾತಿಯಲ್ಲಿ ಉಳಿಕೆ ಸ್ಥಾನಗಳು 800-900 ಸೇರಿಸಿ ನೇಮಕಾತಿ ಮಾಡಬೇಕು. ಇದಕ್ಕೆ ಹಣಕಾಸು ಇಲಾಖೆ ಅನುಮತಿ ಬೇಕಾಗಿರುವುದಿಲ್ಲ ಹಾಗೂ 2022-23ರ ಹಣಕಾಸು ಇಲಾಖೆ 2,300 ಹೈಸ್ಕೂಲ್ ಶಿಕ್ಷಕರ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಅದನ್ನು ಕೂಡ ನೇಮಕಾತಿ ಮಾಡಬೇಕು. ಪದವಿ ಮತ್ತು ಬಿ.ಎಡ್ ಅಂಕಗಳನ್ನು ಕೈಬಿಟ್ಟು CET ಮತ್ತು TET ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಬೇಕೆಂದು ಕೋರುತ್ತೇವೆ.
ಈ ವೇಳೆ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಪವನ್ ಕುಮಾರ್ ಕಮದಾಳ, ಖಾಸೀನಾಥ್ ಖಾಸಿಂ ಪಟೇಲ್, ಅಮೀರ್ ಬಹದ್ದೂರು, ಈರನಗೌಡ, ವೆಂಕಟೇಶ ಈರೆಡ್ಡಿ, ಆಂಜನಪ್ಪ, ರಂಗಪ್ಪ ನಾಯಕ್ ,ಬಸವರಾಜ್ ಎಸ್. ಚಂದ್ರು ಎಂ, ಬಸವರಾಜ ಪ್ರಭು, ಮಹಾದೇವಿ, ದೇವೇಂದ್ರ, ಶರಣು, ರಾಜೇಶ್ವರಿ, ಶಿವಾನಂದ, ಮಹಾಲಿಂಗ ದೊಡ್ಡಮನಿ, ದೇವೇಂದ್ರ, ಸುರೇಶ ಹಾಗೂ ಇನ್ನಿತರಿದ್ದರು.