ವಕ್ಫ್ ವಿರುದ್ಧ ಶಾಸಕ ವಜ್ಜಲ್ ಆಕ್ರೋಶ
ಲಿಂಗಸುಗೂರು : ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ನೋಡಿದರೆ ಇದು ದಬ್ಬಾಳಿಕೆ ಮಾಡಿ ಬಡವರ ಆಸ್ತಿ ಕಸಿದುಕೊಳ್ಳುವ ಯತ್ನ ನಡೆದಿದೆ, ಸರ್ಕಾರ ಕೂಡಲೇ ಈ ಪ್ರಯತ್ನ ಕೈಬಿಡಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ( MLA Manappa Vajjal )ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಬಳಿ ನಮ್ಮ ಕರ್ನಾಟಕ ಸೇನೆ ತಾಲೂಕು ಘಟಕ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿದ್ದರಿಂದ ರೈತರ ಮನದಲ್ಲಿ ದುಗುಡ, ಆತಂಕ ಶುರುವಾಗಿದೆ. ಯಾವ ಉದ್ದೇಶಕ್ಕಾಗಿ ಈ ರೀತಿ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ, ರೈತರ ಮೇಲೆ ದಬ್ಬಾಳಿಕೆ ಮಾಡುವುದು ಮೊದಲು ಕೈಬಿಡಬೇಕು, ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿರುವ ಬಗ್ಗೆ ಕೂಡಲೇ ತನಿಖೆ ನಡೆಸಬೇಕು. ಇದಕ್ಕೆ ಕಾರಣರಾದ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.
ಮುದಗಲ್ ನಲ್ಲಿ ನನ್ನ ಮಗನ ಹೆಸರಿನಲ್ಲಿರುವ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಿದೆ, ಕಳೆದ ಸೆಪ್ಟಂಬರ್ ತಿಂಗಳಲ್ಲಿ ಪಹಣಿಯಲ್ಲಿ ನೋಡಿದ್ದೇವೆ ಆಗ ವಕ್ಫ್ ಆಸ್ತಿ ಎಂದು ನಮೂದಾಗಿದ್ದು ಇರಲಿಲ್ಲ, ಆದರೆ ಒಂದೇ ತಿಂಗಳಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದರೆ ಅದರರ್ಥ ಏನು..? ಜಾತಿ ಜಾತಿ ನಡುವೆ ಕಲಹ ಹಚ್ಚು ಕೆಲಸ ನಡೆದಿದೆ. ಇದರಿಂದ ಸಮಾಜದಲ್ಲಿ ಗೊಂದಲ ಸೃಷ್ಠಿಯಾಗುತ್ತಿದೆ. ವಕ್ಫ್ ವಿಷಯದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗದಂತೆ ನಾನು ಪ್ರಮಾಣಿಕವಾಗಿ ಹೋರಾಟ ಮಾಡುವೆ ಎಂದರು. ಸಣ್ಣ ಸಣ್ಣ ವಿಚಾರದಲ್ಲೂ ಜಾತಿ ಮಾಡುವುದು ಸರಿಯಲ್ಲ, ಚುನಾವಣೆಗಾಗಿ ಮಾತ್ರ ರಾಜಕಾರಣ ಮಾಡಬೇಕು, ಚುನಾವಣೆ ಮುಗಿದ ಮೇಲೆ ರಾಜಕಾರಣ ಮಾಡದೇ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕನ್ನಡ ಭಾಷಾಭಿಮಾನ ಇರಬೇಕು:
ಗಡಿಭಾಗದಲ್ಲಿ ಮತ್ತು ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಅನ್ಯ ಭಾಷಿಕರ ಹಾವಳಿ ವಿರುದ್ಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದ್ದರಿಂದ ಅನ್ಯಭಾಷಿಕರೇ ತಮ್ಮ ಅಂಗಡಿ ಮುಗ್ಗಟ್ಟಗಳಲ್ಲಿ ಕನ್ನಡ ಭಾಷೆ ನಾಮಫಲಕ ಹಾಕುವಂತಾಗಿದೆ. ರಾಜ್ಯದಲ್ಲಿ ಒಂದು ವೇಳೆ ಕನ್ನಡ ಪರ ಸಂಘಟನೆಗಳು ಇಲ್ಲದಿದ್ದರೆ ನಾವೆಲ್ಲರೂ ಅನ್ಯ ಭಾಷೆಯನ್ನೇ ಮಾತನಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿತ್ತು. ರಾಜ್ಯದ ವಿಚಾರ ಬಂದಾಗ ನಮ್ಮ ರಾಜ್ಯ, ನಮ್ಮ ಭಾಷೆ ಬಗ್ಗೆ ಅಭಿಮಾನ ಇರಬೇಕು, ರಾಜ್ಯದ ನೆಲ,ಜಲ, ಭಾಷೆಗೆ ದಕ್ಕೆ ತರುವ ಕೆಲಸ ನಡೆದರೆ ಅದರ ವಿರುದ್ಧ ಹೋರಾಟ ಮಾಡುವುದು ಕನ್ನಡಪರ ಸಂಘಟನೆಗಳ ಕೆಲಸವಲ್ಲದೇ ಪ್ರತಿಯೊಬ್ಬ ಕನ್ನಡಿಗರ ಆಧ್ಯ ಕರ್ತವ್ಯವಾಗಿದೆ ಎಂದರು.
ದೇಶದ ಗಡಿ ವಿಚಾರದಲ್ಲೂ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಮಾತುಕತೆ ಮೂಲಕ ಶಾಂತಿ ವಾತವರಣ ನಿರ್ಮಾಣ ಮಾಡುವಲ್ಲಿ ನರೇಂದ್ರ ಮೋದಿಯವರ ಅಂತಹ ಸಮರ್ಥ ನಾಯಕರು ದೇಶಕ್ಕೆ ದೊರಕಿರುವುದು ಹೆಮ್ಮೆಯಾಗಿದೆ. ಕೊರೊನಾ ಸಂದರ್ಭದಲ್ಲಿ ದೇಶದ ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ದೇಶದ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಯರಡೋಣಾ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು ದಿವ್ಯಸಾನಿಧ್ಯ ವಹಿಸಿದ್ದರು.ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸ ಅಮ್ಮಾಪುರ, ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಕೊಂಡಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಲಿಂಗಣ್ಣ ದೇವಿಕೇರಿ, ಎನ್.ಸ್ವಾಮಿ ಹಟ್ಟಿ, ವಿರೇಶ ಜಗವತಿಮಠ, ನಾಗರಾಜ ತುಗ್ಲಿ, ಮಾಣಿಕ್ ಇಂಗಳೆ, ನಮ್ಮ ಕರ್ನಾಟಕ ಸೇನೆ ತಾಲೂಕಾದ್ಯಕ್ಷ ಶಿವರಾಜ ನಾಯ್ಕ್, ಸೇರಿದಂತೆ ಇನ್ನಿತರಿದ್ದರು.