ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಹೇಳಿಕೆ
ಲಿಂಗಸುಗೂರು : ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಶ್ರಮ ಎಷ್ಟು ಇದೆಯೋ ಅಷ್ಟೇ ಶ್ರಮ ಪಕ್ಷ ಹಾಳಾಗುವುದರಲ್ಲಿ ಇದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ( Basavaraja Patil Anwari )ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಕಟ್ಟುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಕೊಡುಗೆ ಅಪಾರವಾಗಿದೆ, ಆದರೆ ಅವರ ಮಗ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಹುಟ್ಟಿರುವ ಭಿನ್ನಮತವನ್ನು ಸರಿಪಡಿಸುವ ಕೆಲಸ ಯಾಕೆ ಮಾಡ್ತಿಲ್ಲ, ಭಿನ್ನಮತ ಈಗ ಮತ್ತಷ್ಟು ಉಲ್ಬಣಗೊಳ್ಳುವಂತೆ ಆಗಿದೆ. ಸಿಟಿ ರವಿ ವಿರುದ್ಧ ಅವರ ಬಿಎಸ್ವೈ ಶಿಷ್ಯನನ್ನೇ ಕಾಂಗ್ರೆಸ್ ಕಳುಹಿಸಿ ಸಿಟಿ ರವಿ ಸೋಲಿಸಲು ಕಾರಣವಾಗಿದೆ, ಇಂತಹ ಸಾಕಷ್ಟು ಉದಾಹರಣೆಗಳು, ಆರೋಪಗಳಿಂದಾಗಿ ಪಕ್ಷದ ಶಕ್ತಿ ಕುಂದಲು ಇದೇ ಬಿ.ಎಸ್.ಯಡಿಯೂರಪ್ಪನವರೇ ಕಾರಣರಾಗಿದ್ದಾರೆ ಎಂದರು.
ಹೈಕಮಾಂಡ್ ಲೆಕ್ಕದಲ್ಲಿ ರಾಜ್ಯಗಳು ಪುರಸಭೆ ಇದ್ದಂತೆ :
ಹೈಕಮಾಂಡ್ ದೃಷ್ಠಿಯಲ್ಲಿ ರಾಜ್ಯ ರಾಜಕೀಯ ಪುರಸಭೆ ರಾಜಕಾರಣದಂತೆ ನೋಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕಾಗಿ ಯಾರನ್ನು ಬೇಕಾದರೂ ಸೇರಿಸಿಕೊಳ್ಳುತ್ತೆ, ಈ ಹಿಂದೆ ಕೇಂದ್ರ ಮಟ್ಟದ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಾದರೆ ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದ ನಾಯಕರಿಂದ ಸಲಹೆ ಪಡೆಯಲಾಗುತ್ತಿತ್ತು, ಆದರೆ ಈಗ ಅದು ಯಾವುದೂ ಕೇಳುತ್ತಿಲ್ಲ, ತಮ್ಮ ಮನಸ್ಸೋ ಇಚ್ಛೆಯಂತೆ ವರ್ತನೆ ಮಾಡುತ್ತಿವೆ. ಪ್ರಸ್ತುತ ರಾಜಕಾರಣದಲ್ಲಿ ಕೆಳಮಟ್ಟದಲ್ಲಿ ಹೋರಾಟ ನಡೆಸುತ್ತಾ, ಕೇಸು ಹಾಕಿಸಿಕೊಂಡು, ಮನೆ ಮಾರಿಕೊಂಡು ಗಟ್ಟಿಯಾಗಿ ರಾಜಕಾರಣ ಮಾಡುತ್ತಿದೆ ಆದರೆ ನಿಜವಾಗಿ ಕೆಟ್ಟಿದ್ದು ಹೈಕಮಾಂಡ್ವಾಗಿದೆ ಎಂದರು.
ಬಿಜೆಪಿ ಭಿನ್ನಮತಕ್ಕೆ ಕಡಿವಾಣ ಇಲ್ವಾ :
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನೇತ್ರತ್ವದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಸಲಾಗುತ್ತಿದೆ, ಅನುಭವಿ ನಾಯಕರಾದ ಯತ್ನಾಳ ಅವರು ಪಕ್ಷದಲ್ಲಿ ಏನೇ ಭಿನ್ನಮತ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು, ಪಕ್ಷದ ಹೈಕಮಾಂಡ್ ಗೆ ಪತ್ರ ಬರೆಯಬೇಕಾಗಿತ್ತು. ಆದರೆ ಬಿದಿಯಲ್ಲಿ ನಿಂತು ಜಗಳವಾಡಬಾರದು, ರಾಜ್ಯ ಬಿಜೆಪಿಯಲ್ಲಿ ಆಗಿರುವ ಭಿನ್ನಮತದ ವಿಷಯ ಹೈಕಮಾಂಡ್ಗೆ ಗೊತ್ತೇ ಇಲ್ವಾ..? ಗೊತ್ತಿದ್ದರೂ ಸುಮ್ಮನೆ ಇದೆಯೋ..? ಭಿನ್ನಮತ ಶಮನ ಮಾಡಲು ಹೈಕಮಾಂಡ್ ಶಕ್ತಿ ಕುಗ್ಗಿದೆಯಾ.. ಎನ್ನುವ ಸಂಶಯ ಕಾಡುತ್ತಿದೆ. ಅದೇ ಬಿ.ವೈ.ವಿಜಯೇಂದ್ರ ಅವರಿಗೆ ಚಿಕ್ಕ ವಯಸ್ಸಿನಲ್ಲಿ ರಾಜ್ಯಾಧ್ಯಕ್ಷ ಸ್ಥಾನದಂತಹ ದೊಡ್ಡ ಜವಬ್ದಾರಿ ಸಿಕ್ಕಿದೆ, ಭಿನ್ನಮತ ಕಂಡಕೂಡಲೇ ಅದನ್ನು ಅಲ್ಲಿಯೇ ಶಮನ ಮಾಡದೇ ಏಕಪಕ್ಷೀಯ ನಿರ್ಧಾರದಿಂದಾಗಿ ಹಲವು ಗೊಂದಲಗಳಿಗೆ ಕಾರಣವಾಗಿದೆ ಎಂದರು.
ಹಿರಿಯರ ಕಡೆಗಣನೆ ಗೊಂದಲಗಳಿಗೆ ಕಾರಣ :
ಬಿ.ಎಸ್.ಯಡಿಯೂರಪ್ಪನವರು ಪಕ್ಷದ ರಾಜ್ಯಾಧ್ಯಕ್ಷರಾದಾಗ ಇಲ್ಲದ ಗೊಂದಲಗಳು ವಿಜಯೇಂದ್ರ ರಾಜ್ಯಾದ್ಯಕ್ಷರಾದಾಗ ಗೊಂದಲಗಳು ಹೆಚ್ಚಾಗಿವೆ. ಇದಕ್ಕೆ ಮುಖ್ಯ ಕಾರಣ ಪಕ್ಷದಲ್ಲಿನ ಹಿರಿಯರ ಕಡೆಗಣನೆ ಹಾಗೂ ಹಿರಿಯರ ಮುಖಂಡರ ಮಾರ್ಗದರ್ಶನ ಕೇಳದೇ ಇರುವುದು ಹಲವು ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಹಿರಿಯರು ಅಂದರೆ ವಯೋವೃದ್ಧರು ಅವರು ಸಲಹೆಗಳು ಬೇಕಾಗಿಲ್ಲ ಎನ್ನುವ ಸ್ಥಿತಿ ಇದೆ ಎಂದರು. ಉದಾಹರಣೆಗೆ ಶಾಸಕನಾಗಿ, ಸಂಸದನಾಗಿ ಕೇಂದ್ರ ಸಚಿವನಾಗಿ ಅನುಭವ ಇರುವ ನನ್ನ ಹಿರಿಯತನವನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳಲಿಲ್ಲ, ಚುನಾವಣೆ ಸಂದರ್ಭದಲ್ಲಿ ಯಾವುದೇ ಜವಬ್ದಾರಿ ನೀಡಿಲಿಲ್ಲ, ನನ್ನಂತಹ ಹಿರಿಯನ್ನು ಕಡೆಗಣನೆ ಮಾಡಿದ್ದೇ ಅನೇಕ ಗೊಂದಲಗಳಿಗೆ ಕಾರಣವಾಗಿದೆ ಎಂದರು.
ಈ ವೇಳೆ ಬಿಜೆಪಿ ಮುಖಂಡ ಶರಣಪ್ಪ ಮೇಟಿ, ಚೆನ್ನಬಸವ ವಿಠ್ಲಾಪುರ, ಸೋಹಿಲ್ ಹಾಗೂ ಇನ್ನಿತರಿದ್ದರು.