ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ವಿನೂತನ ಕಾರ್ಯಕ್ರಮ
ಲಿಂಗಸುಗೂರು : ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಡಿಸೆಂಬರ್ 21ರಿಂದ ಜನವೆರಿ 01ವರಿಗೆ ವಿವಿ ಸಂಘದ ಬಸವ ಸಭಾಂಗಣದಲ್ಲಿ ವ್ಯಾಸ ಪ್ರಣೀತ ಅನ್ವಯಿಕ (Mahabharata) ಮಹಾಭಾರತ ಒಂದು ಚಿಂತನ ಮಂಥನ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಬಸವಂತರಾಯ ಕುರಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರ ವಾತಾವರಣ ನಿರ್ಮಿಸುವ ಮಹತ್ವದ ಉದ್ದೇಶದಿಂದ ಕಳೆದ ವರ್ಷ ನಾವು-ನೀವು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹುಟ್ಟುಹಾಕಲಾಗಿದೆ. ಪ್ರತಿ ವರ್ಷ ಒಂದು ಪ್ರಮುಖ ಮಹಾಕಾವ್ಯ, ಸಾಹಿತ್ಯ, ಸೇರಿದಂತೆ ಇನ್ನಿತರ ವಿಷಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಭಗವದ್ಗೀತೆ ಕುರಿತಾಗಿ ಹತ್ತು ದಿನಗಳ ಕಾಲ ಚಿಂತನ-ಮಂಥನ ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ವ್ಯಾಸ ಪ್ರಣೀತ ಅನ್ವಯಿಕ ಮಹಾಭಾರತ :
ಈ ವರ್ಷ ವ್ಯಾಸ ಪ್ರಣೀತ ಅನ್ವಯಿಕ ಮಹಾಭಾರತ (Mahabharata ) ಒಂದು ಚಿಂತನ ಮಂಥನ ನಡೆಸಲಾಗುತ್ತಿದೆ. ಹತ್ತು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕಜ್ಜಿಡೋಣಿ ಶಂಕರಾಚಾರ್ಯ ಆಶ್ರಮದ ಶರಣರಾದ ಕೃಷ್ಣಾನಂದರು ಅಧ್ಯಕ್ಷತೆ ವಹಿಸಲಿದ್ದಾರೆ ಮಹಾಭಾರತದಲ್ಲಿನ ಆಯ್ದ ಹತ್ತು ಪಾತ್ರಗಳ ಕುರಿತು ನಾಡಿನ ಖ್ಯಾತ ವಿದ್ವಾಂಸರಾದ ಜಗದೀಶ ಶರ್ಮಾ ಸಂಪ ವಿಶ್ಲೇಷಣೆ ನೀಡಲಿದ್ದಾರೆ. ಇದಕ್ಕೆ ಇಬ್ಬರು ಪರಿಣಿತರು ಸಂವಾದ ನಡೆಸಲಿದ್ದಾರೆ ಎಂದರು.
ಡಿ.21 ಸಂಜೆ 5.30ಕ್ಕೆ ಉದ್ಘಾಟನೆ :
ಡಿಸೆಂಬರ್ 21ರಂದು ಸಂಜೆ 5.30ಕ್ಕೆ ಮಹಾಭಾರತ (Mahabharata )ಚಿಂತನ ಮಂಥನ ಕಾರ್ಯಕ್ರಮವನ್ನು ವಿದ್ವಾನ್ ಜಗದೀಶ ಶರ್ಮಾ ಸಂಪ ಉದ್ಘಾಟಿಸಲಿದ್ದಾರೆ. ವಿವಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮಹಾಭಾರತದ ಸಾರ್ವಕಾಲಿಕ ಸತ್ಯದರ್ಶನ ವಿಷಯದ ಕುರಿತು ವಿದ್ವಾನ್ ಬಿಂದು ಮಾಧವಚಾರ್ಯ ನಾಗಸಂಪಿಗೆ ಇವರು ಉಪನ್ಯಾಸ ನೀಡಲಿದ್ದಾರೆ. ಶಾಸಕ ಮಾನಪ್ಪ ವಜ್ಜಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅತಿಥಿ ಸ್ಥಾನವಹಿಸಲಿದ್ದಾರೆ ಎಂದರು.
ಹತ್ತು ದಿನ ಹತ್ತು ಆಯ್ದ ಪಾತ್ರಗಳ ವಿಶ್ಲೇಷಣೆ :
ಡಿ.22ಕ್ಕೆ ಭೀಷ್ಮಾಚಾರ್ಯ : ಪ್ರತಿಜ್ಞೆ ಮತ್ತು ಪರಿಣಾಮ ಕುರಿತು ನಡೆಯುವ ಉಪನ್ಯಾಸದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ ಹಾಗೂ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಸಂವಾದ ನಡೆಸಲಿದ್ದಾರೆ. ಡಿ.23ರಂದು ದ್ರೋಣಾಚಾರ್ಯ :ಪಾರಂಗತನ ದುಡುಕು-ಕೆಡುಕು ಉಪನ್ಯಾಸದಲ್ಲಿ ರಾಯಚೂರಿನ ಹಿರಿಯ ಸಾಹಿತಿ ವೀರಹನುಮಾನ ಹಾಗೂ ಸಿಂಧನೂರಿನ ಸಂಶೋದಕಿ ಡಾ.ಮಧುಮತಿ ದೇಶಪಾಂಡೆ ಸಂವಾದ ನಡೆಸಲಿದ್ದಾರೆ. ಡಿ.24ರಂದು ಗಾಂಧಾರಿ ಮತ್ತು ಕುಂತಿ : ವೇದನೆ ಮತ್ತು ಮಾನಸಿಕ ತುಮಲಗಳು ಕುರಿತು ನಡೆಯುವ ಉಪನ್ಯಾಸದಲ್ಲಿ ಕಲಬುರಗಿ ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ವಿಜಯಕುಮಾರ ಮತ್ತು ಮರಕುಂಬಿ ಮುಖ್ಯ ಶಿಕ್ಷಕ ಗೋಪಾಲಕೃಷ್ಣಾ ಕುಲಕರ್ಣಿ ಸಂವಾದ ನಡೆಸಲಿದ್ದಾರೆ. ಡಿ.25ರಂದು ಧರ್ಮರಾಯ :ಗೆಲುವಿನಲ್ಲಿ ಸೋಲುಂಡವ ಕುರಿತು ನಡೆಯುವ ಉಪನ್ಯಾಸದಲ್ಲಿ ಬಾಗಲಕೋಟೆ ಡಾ.ಬಾಳಾಸಾಹೇಬ ಲೋಕಾಪುರ ಹಾಗೂ ಸ್ಥಳೀಯ ಉಪನ್ಯಾಸಕ ಶಿವಶರಣಯ್ಯ ಸೊಪ್ಪಿಮಠ ಸಂವಾದ ನಡೆಸಲಿದ್ದಾರೆ ಡಿ.26ರಂದು ಕರ್ಣ: ದಾನದಾಪ್ತ-ಸ್ನೇಹದ ಅರಸ ಕುರಿತು ನಡೆಯುವ ಉಪನ್ಯಾಸದಲ್ಲಿ ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಾಣೇಶ ಕುಲಕರ್ಣಿ ಹಾಗೂ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸದಸ್ಯ ಡಾ.ದೇವೆಂದ್ರಪ್ಪ ಜಾಜಿ ಸಂವಾದ ನಡೆಸಲಿದ್ದಾರೆ ಎಂದರು.
ಡಿ.27ರಂದು ಭೀಮಸೇನ : ದೈತ್ಯ ದೇಹಿ- ಶ್ರೀಮಂತ ಹೃದಯಿ ವಿಷಯದ ಉಪನ್ಯಾಸದಲ್ಲಿ ರಾಯಚೂರಿನ ಸಂಶೋಧಕ ಡಾ.ಚೆನ್ನಬಸವ ಹಿರೇಮಠ ಹಾಗೂ ರಾಯಚೂರಿನ ಹಿರಿಯ ಸಾಹಿತಿ ಡಾ.ವೆಂಕಟರಾವ್ ಕುಲಕರ್ಣಿ ಸಂವಾದ ನಡೆಸಲಿದ್ದಾರೆ. ಡಿ.28ರಂದು ಅರ್ಜುನ : ಯುದ್ಧಕಾಂತ-ಕೃಷ್ಣಪ್ರೀತ ಉಪನ್ಯಾಸದಲ್ಲಿ ನಿವೃತ್ತ ಪ್ರಾಂಶುಪಾಲ ಸಿ.ಶರಣಪ್ಪ ಹಾಗೂ ಮಕ್ಕಳ ತಜ್ಞ ವೈದ್ಯರಾದ ಡಾ.ಅಮರೇಗೌಡ ಪಾಟೀಲ್ ಸಂವಾದ ನಡೆಸಲಿದ್ದಾರೆ. ಡಿ.29ರಂದು ಕೃಷ್ಣ: ಪ್ರೇಮಕಾರಣಿ ಕುರಿತು ನಡೆಯುವ ಉಪನ್ಯಾಸದಲ್ಲಿ ಬೆಂಗಳೂರಿನ ಜಿಗಣಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಕೇಂದ್ರ ಕರಿಬಸಪ್ಪ ಗುರೂಜಿ ಹಾಗೂ ತುಮಕೂರಿನ ಉಪನ್ಯಾಸಕ ಪಿ.ಕೆ.ನಂದೀಶ ಸಂವಾದ ನಡೆಸಲಿದ್ದಾರೆ. ಡಿ.30ರಂದು ದುರ್ಯೋಧನ : ಚತುರ ತಂತ್ರದ ಪ್ರತಿನಾಯಕ ಕುರಿತಿನ ಉಪನ್ಯಾಸದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ.ಸ್ವಾಮೀರಾವ್ ಕುಲಕರ್ಣಿ ಹಾಗೂ ಸಹ ಪ್ರಾಧ್ಯಾಪಕ ಡಾ.ಶಿವಯ್ಯ ಹಿರೇಮಠ ಸಂವಾದ ನಡೆಸಲಿದ್ದಾರೆ. ಡಿ.31ರಂದು ವಿದುರ ಮತ್ತು ಕನಿಕ :ನೀತಿ ಮತ್ತು ನಿಲುವು : ಉಪನ್ಯಾಸದಲ್ಲಿ ಸಂಶೋಧಕ ಪವನಕುಮಾರ ಗುಂಡೂರು ಹಾಗೂ ಪತ್ರಕರ್ತ ವಿಶ್ವನಾಥ ಹೂಗಾರ ಸಂವಾದ ನಡೆಸಲಿದ್ದಾರೆ ಎಂದರು.
ಸಿದ್ಧೇಶ್ವರ ಶ್ರೀಗಳ ನುಡಿನಮನ :
ಜನೆವರಿ 01ರಂದು ಸಿದ್ದೇಶ್ವರ ಶ್ರೀಗಳ ನುಡಿನಮನ ಹಮ್ಮಿಕೊಳ್ಳಲಾಗಿದೆ ಅಂದಿನ ಸಮಾರಂಭದಲ್ಲಿ ಬೆನಕನಹಳ್ಳಿಯ ಮಹಾಬೋಧಾಲಯದ ದೇವಾನಂದ ಶರಣರು ಸಾನಿಧ್ಯ ವಹಿಸಲಿದ್ದಾರೆ. ವಿದ್ವಾನ್ ಜಗದೀಶ ಶರ್ಮಾ ಸಂಪ ಅಧ್ಯಕ್ಷತೆ ವಹಿಸಲಿದ್ದಾರೆ. ಕಜ್ಜಿಡೋಣಿ ಶಂಕರಾಚಾರ್ಯ ಆಶ್ರಮದ ಶರಣರಾದ ಕೃಷ್ಣಾನಂದರು ಸಿದ್ದೇಶ್ವರ ಶ್ರೀಗಳಿಗೆ ನುಡಿನಮನ ಸಲ್ಲಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ವೇಳೆ ಎಂ.ಎಲ್.ಪಾಟೀಲ್ ಸಂಪಾದಿಸಿದ ಕರ್ಮಯೋಗ ಮತ್ತು ಜ್ಞಾನಯೋಗ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಎಂ.ಎಲ್, ಪಾಟೀಲ್ ಮತ್ತು ದಿಕ್ಸೂಚಿ ಸಂಪಾದಕ ಎ.ಟಿ.ಪಾಟೀಲ್ ಅವರಿಗೆ ಸನ್ಮಾನಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ಸಮಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಪ್ರತಿದಿನ ಸಂಜೆ 5.30 ರಿಂದ 6.00 ವರಿಗೆ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯವೃಂದ ಇವರಿಂದ ಸಂಗೀತ ಕಾರ್ಯಕ್ರಮ ಸರಿಯಾಗಿ 6ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳುವಂತೆ ಸಮಯದ ಕಟ್ಟುನಿಟ್ಟಿನ ಕಟ್ಟಳೆಗಳನ್ನು ಹಾಕಿಕೊಳ್ಳಲಾಗಿದೆ. ಸಾಹಿತ್ಯಾಭಿಮಾನಿಗಳು, ವಿದ್ಯಾರ್ಥಿಗಳು ಹತ್ತು ದಿನಗಳ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವೇಳೆ ನಿವೃತ್ತ ಪ್ರಾಚಾರ್ಯ ಸಿ.ಶರಣಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ರಮೇಶ ಶಾಸ್ತ್ರೀ, ಶರಣಗೌಡ ಬಸಾಪುರ ಉಪಸ್ಥಿತರಿದ್ದರು.