ಅಂಗನವಾಡಿ ನೌಕರರ ಸಂಘ ಪ್ರತಿಭಟನೆ
ಲಿಂಗಸುಗೂರು : ಅಂಗನವಾಡಿ ಕಾರ್ಯಕರ್ತೆಯರನ್ನು (Anganwadi worker )ಸಿ ದರ್ಜೆ ಹಾಗೂ ಸಹಾಯಕಿಯರನ್ನು ಡಿ ದರ್ಜೆ ನೌಕರರನ್ನು ಪರಿಗಣಿಸಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಅಂಗನವಾಡಿ ನೌಕರರ ಸಂಘ ಪದಾಧಿಕಾರಿಗಳು ಸೋಮವಾರ ಸಹಾಯಕ ಆಯುಕ್ತರ ಮುಖಾಂತರ ಮಹಿಳಾ ಮತ್ತು ಮಕ್ಕಳ ಸಚಿವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ದರ್ಜೆ ಹಾಗೂ ಸಹಾಯಕಿಯರನ್ನು ಡಿ.ದರ್ಜೆ ನೌಕರರೆಂದು ಪರಿಗಣಿಸುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಈವರಿಗೂ ಸರ್ಕಾರ ಸ್ಪಂದಿಸುತ್ತಿಲ್ಲ, ಕೂಡಲೇ ಸರ್ಕಾರಿ ನೌಕರರೆಂದು ಪರಿಗಣಿಸಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ವರ್ಷ ಕಳೆದರೂ ಬಿಡುಗಡೆಯಾದ ಮಾತೃವಂದನಾ ಹಣ
ಅಂಗನವಾಡಿ ಕಾರ್ಯಕರ್ತೆಯರ ಅಕ್ಟೋಬರ್ 2024ರ ಗೌರವಧನ ಬಿಡುಗಡೆ ಮಾಡಬೇಕು. ಮುಂಗಡ ರಸೀದಿ ಪಡೆದ ಎರಡು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಬೇಕು, 2023ರ ಏಪ್ರೀಲ್ ತಿಂಗಳಿಂದ ಇಲ್ಲಿವರಿಗೂ ಮಾತೃ ವಂದನಾ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ಮೊಟ್ಟೆ ಖರೀದಿ ಹಣ ಬಿಡುಗಡೆ ಮಾಡಬೇಕು. ಬೇರೆ ಕೇಂದ್ರಗಳ ಪ್ರಭಾರಿ ಮಾಡಿದ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ವೃತ್ತಗಳವಾರ ಮೇಲ್ವಿಚಾರಕರನ್ನು ಬದಲಾವಣೆ ಮಾಡಿ ಆಡಳಿತ ಸುಧಾರಣೆ ಮಾಡಬೇಕು. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕಿಯರ ಎನ್‍್ಪಿಎಸ್ ಹಣ, ಇಡಿಗಂಟು, ಮರಣ ಪರಿಹಾರ ಬಿಡುಗಡೆ ಮಾಡಬೇಕು, ಅಂಗನವಾಡಿ ಸಹಾಯಕರಿಗೆ ಸೇವಾ ಜೇಷ್ಠತಾ ಆಧಾರದ ಪ್ರಕಾರ ಅರ್ಹತೆವುಳ್ಳ ಸಹಾಯಕಿಯರಿಗೆ ಅಂಗನವಾಡಿ ಖಾಲಿ ಇರುವ ಸ್ಥಳಗಳಿಗೆ ಮುಂಬಡ್ತಿ ನೀಡಬೇಕು. ಲಿಂಗಸುಗೂರು ತಾಲೂಕು ಕೇಂದ್ರ ಸ್ಥಾನದಲ್ಲಿ 2005ನೇ ಸಾಲಿನಿಂದ ನಿರ್ಮಾಣ ಮಾಡುವಲ್ಲಿ ಅತ್ಯಂತ ವಿಳಂಭವಾಗಿರುವ ಬಾಲಭವನ ಕೂಡಲೇ ನಿರ್ಮಾಣ ಮಾಡಬೇಕು, 2017ರಿಂದ ನೆನೆಗುದಿಗೆ ಬಿದ್ದಿರುವ ಇಲಾಖೆಯ ಕಚೇರಿ ಮತ್ತು ಸ್ತ್ರೀಶಕ್ತಿ ಭವನ ಕೂಡಲೇ ನಿರ್ಮಾಣ ಮಾಡಬೇಕು, 1993ರ ಇಲಾಖೆ ಕಟ್ಟಡವಾದ ಮಹಿಳಾ ಒಕ್ಕೂಟದ ಕಟ್ಟಡವನ್ನು ಪಶು ಆಸ್ಪತ್ರೆಯ ಆವರಣದಲ್ಲಿ ಅದನ್ನು ಇಲಾಖೆ ಅಧೀನಕ್ಕೆ ಪಡೆಯಬೇಕು.
ಖಾಲಿ ಹುದ್ದೆಗಳ ಭರ್ತಿ ಮಾಡಿ
ಲಿಂಗಸುಗೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು. 2023ರ ಫೆಬ್ರುವರಿಯಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಗನೌಡ ನೌಕರರ ವೇತನ ಹೆಚ್ಚಳ ಮಾಡಿದ ಹಾಗೂ ಜುಲೈ 2023ರ ರಂದು ಸಿಎಂ ಸಿದ್ಧರಾಮಯ್ಯ ಹೆಚ್ಚಳಗೊಳಿಸಿದ ವೇತನ ಬಿಡುಗಡೆಗೊಳಿಸಬೇಕು. ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಗ್ರಾಚುವಿಟಿ ಹಣ ಕೂಡಲೇ ಬಿಡುಗಡೆ ಮಾಡಬೇಕು, ಕಾರ್ಯಕರ್ತೆಯರಿಗೆ ಮೇಲ್ವಿಚಾರಕಿ ಹುದ್ದೆಗೆ ಬಡ್ತಿ ನೀಡಬೇಕು, ಸಹಾಯಕರಿಗೆ ಕಾರ್ಯಕರ್ತೆ ಹುದ್ದೆಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಸರಸ್ವತಿ ಈಚನಾಳ, ರಜೀಯಾಬೇಗಂ, ಗದ್ದೆಮ್ಮ, ಸರಸ್ವತಿ, ಸರೋಜಮ್ಮ, ರೇಣುಕಮ್ಮ, ರೇಹಾನ ಸುಲ್ತಾನಬೀ, ಹೋರಾಟಗಾರದ ರಮೇಶ ವೀರಾಪುರ, ಮಲ್ಲನಗೌಡ ಹಾಗೂ ಇನ್ನಿತರಿದ್ದರು.