ವಿಶ್ವ ಬಸವಧರ್ಮ ಪ್ರವಚನ :
ಲಿಂಗಸುಗೂರು : ಸಮಾನತೆಯ ಸಮಾಜ ನಿರ್ಮಾಣಕ್ಕೆ 12 ನೇ ಶತಮಾನದ ಬಸವಾದಿ ಶರಣರ ಸಂದೇಶಗಳು ಅಗತ್ಯವಾಗಿದೆ ಎಂದು ಪ್ರವಚನಕಾರ ಬಸವರಾಜಪ್ಪ ವೆಂಕಟಾಪುರ ಸಿರಗುಪ್ಪ ಹೇಳಿದರು.
ಪಟ್ಟಣದ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಚಿತ್ತರಗಿ ವಿಜಯಮಹಾಂತ ಶಿವಯೋಗಿಗಳ 113ನೇ ಪುಣ್ಯಸ್ಮರಣೆ ಅಂಗವಾಗಿ ಶರಣ ಸಂಸ್ಕೃತಿ ಮಹೋತ್ಸವ, ವಿಶ್ವ ಬಸವಧರ್ಮ ಪ್ರವಚನದ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಹಾಸು ಹೊಕ್ಕಾಗಿದ್ದ ಜಾತಿಪದ್ದತಿ. ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿದ ಬಸವಣ್ಣ ಮಹಾನ್ ಮಾನವತಾವಾದಿ. ತಮ್ಮ ವಚನಗಳ ಮೂಲಕ ಸಮಾಜವನ್ನು ಪರಿವರ್ತನೆ ಮಾಡಲು ಮುಂದಾದ ಅವರ ವಿಚಾರಧಾರೆಗಳು 21ನೇ ಶತಮಾನದಲ್ಲಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಬಸವಣ್ಣ ಕಟ್ಟಿದ ಅನುಭವ ಮಂಟಪ ಇಂದಿನ ಸಂಸತ್ ಎಂದರೆ ಅತಿಶಯೋಕ್ತಿಯಲ್ಲ. ಎಲ್ಲಾ ವರ್ಗದವರನ್ನು ಸಮಾನತೆಯಿಂದ ಕಂಡು ವಚನ ಸಾಹಿತ್ಯ ರಚಿಸಲು ಅನುವು ಮಾಡಿಕೊಟ್ಟರು. ಬಸವಣ್ಣನವರ ಅನುಯಾಯಿಗಳಾದ ನಾವೆಲ್ಲರೂ ಅವರ ಆಶಯದಂತೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಬೇಕಿದೆ ಬಸವಾದಿ ಶರಣರ ಸಂದೇಶ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಇಲಕಲ್ ನ ಡಾ.ಮಹಾಂತ ಅಪ್ಪಗಳು ಬಸವಾದಿ ಶರಣರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದೇ ಮಾರ್ಗದಲ್ಲಿ ಜೀವನುದ್ದಕ್ಕೂ ಸಾಗಿದ್ದಲ್ಲದೆ ಇತರರು ಮಾದರಿಯಾದರು. ಸಮಾನತೆ ಸಮಾಜ ನಿರ್ಮಾಣಕ್ಕಾಗಿ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದರು.
ವಿಶ್ವ ಎಂದರೆ ಅಭೇದ,ಬಸವಣ್ಣ, ಧರ್ಮ ಎಂದರೆ ಅಭೇದ, ಈ ಅಭೇದವನ್ನು ಭೇದ ಮಾಡುವ ಕೆಲಸ ನಡೆಯುತ್ತಿದೆ ತಡೆಗಟ್ಟುವ ಕೆಲಸ ಮಾಡಬೇಕಾಗಿದೆ. 12ನೇ ಶತಮಾನದಲ್ಲಿದ್ದ ಅಸ್ಪೃಶ್ಯತೆ, ಮೇಲು ಕೀಳು ಹೋಗಲಾಡಿಸಲು ಬಸವಾದಿ ಶರಣರ ದೊಡ್ಡ ಕ್ರಾಂತಿ ಮಾಡಿದರು. ಬೇದ ಭಾವ ಹೋಗಲಾಡಿಸಿ ಅಭೇದ ಕಟ್ಟುವ ಕೆಲಸ ಮಾಡಿದ್ದರು.
ಇಂದು ಗದಗಿನ ತೋಂಟದಾರ್ಯ ಮಠದ ಡಾ.ಸಿದ್ದಲಿಂಗ ಸ್ವಾಮೀಜಿಗಳ 6ನೇ ಪುಣ್ಯಸ್ಮರಣೆ. ಗದಗ ಮಠಕ್ಕೆ ಪೀಠಾರೋಹಣ ಮಾಡಿದ ಮೊದಲದಿನ ಮಾಡಿದ ಭಾಷಣವನ್ನು ಮೆಚ್ಚಿದ ಭಕ್ತರು ಇವರನ್ನು ಕರ್ನಾಟಕದ ಸ್ವಾಮಿ ವಿವೇಕಾನಂದರು ಎಂದು ಕರೆಯುಲಾಗುತ್ತಿತ್ತು. ಅವರು ಪಲ್ಲಕ್ಕಿಯಲ್ಲಿ ಕೂಡುವ ಪದ್ಧತಿ ಬಿಟ್ಟು ಪಲ್ಲಕ್ಕಿಯಲ್ಲಿ ಬಸವಾದಿ ಶರಣರ ವಚನ, ಬಸವಣ್ಣನವರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡುವ ಸಂಪ್ರದಾಯಕ್ಕೆ ನಾಂದಿ ಹಾಕಿದರು.ಸಿದ್ಧಲಿಂಗ ಸ್ವಾಮೀಜಿಗಳು ಕಾವಿಧಾರಿಗಳಾಗದೇ ಕೃಷಿಕರಾಗಿದ್ದರು. ಹರಿದು ಹಂಚಿ ಹೋಗಿರುವ ಕರ್ನಾಟಕ ಏಕೀಕರಣಗೊಳಿಸುಲು ಚಳುವಳಿ ರೂಪಿಸಿ ಡಾ.ರಾಜಕುಮಾರ ಅವರನ್ನು ಗದಗಗೆ ಕರೆಯಿಸಿ ಹೋರಾಟ ಮಾಡಿಸಿದ್ದರು, ಕನ್ನಡ ಭಾಷ ರಕ್ಷಕರಾಗಿ ಮಾಡಿದ ಕೆಲಸಗಳಿಂದ ಇವರನ್ನು ಕನ್ನಡ ಜಗದ್ಗುರು ಎಂದು ಕರೆಯುತ್ತಿದ್ದರು
ಕಪ್ಪತ್ತಗುಡ್ಡ ಸಂರಕ್ಷಣೆ :
ಗದಗ ಜಿಲ್ಲೆಯಲ್ಲಿ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ವಿರುದ್ಧ ಚಳುವಳಿ ರೂಪಿಸಿ ಅಮೂಲ್ಯ ಔಷಧೀಯ ಸಸ್ಯಗಳು, ಸಮೃದ್ಧ ಖನಿಜ ಸಂಪನ್ಮೂಲಗಳ ಆವಾಸಸ್ಥಾನವಾಗಿರುವ ಕಪ್ಪತ್ತಗುಡ್ಡದ ರಕ್ಷಣೆಗೆ ಮುಂದಾದರು. ರಾಜವಂಶಸ್ಥರು ಮತ್ತು ಬ್ರಿಟಿಷರು ಮಠಕ್ಕೆ ನೀಡಿದ 4000 ಎಕರೆ ಭೂಮಿಯನ್ನು ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ರೈತರು ಹಾಗೂ ಸಾಗುವಳಿ ಮಾಡದೇ ಇರುವ ರೈತರಿಗೂ ವಿತರಣೆ ಮಾಡಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ್ಯ ಧರ್ಮ ಸ್ಥಾಪನೆಗಾಗಿ ಸಿದ್ಧಲಿಂಗ ಸ್ವಾಮೀಜಿಗಳು ದಂಡನಾಯಕರಾಗಿದ್ದರು, ವಿಜಯ ಮಹಾಂತ ಶಿವಯೋಗಿಗಳು, ಮಾತೆ ಮಹಾದೇವಿ ಸ್ವತಂತ್ರ್ಯ ಧರ್ಮಕ್ಕಾಗಿ ಹೋರಾಟ ಮಾಡಿದ್ದರು, ಈ ಮೂವರು ಇನ್ನೂ ಹತ್ತು ವರ್ಷ ಬದುಕಿದ್ದರೆ ಲಿಂಗಾಯತ ಧರ್ಮ ಸ್ಥಾಪನೆಯಾಗುತ್ತಿತ್ತು. ವಿಜಯ ಮಹಾಂತ ಶಿವಯೋಗಿಗಳು, ಗದುಗಿನ ಸಿದ್ಧಲಿಂಗ ಸ್ವಾಮೀಜಿಗಳು, ಮಾತೆ ಮಹಾದೇವಿ ಈ ಮೂರು ಜನರು ಇಂದು ನಮ್ಮೊಂದಿಗೆ ಇಲ್ಲ, ಆದರೆ ಸಮ ಸಮಾಜಕಟ್ಟಲು ಮಾಡಿದ ಕೆಲಸಗಳು ನಮ್ಮ ಮುಂದೆ ಇವೆ. ಇದಲ್ಲದೆ ಬಹಳಷ್ಟು ಜವಬ್ದಾರಿಗಳನ್ನು ಭಕ್ತರಿಗೆ ಬಿಟ್ಟುಹೋಗಿದ್ದಾರೆ ಅವರು ಹಾಕಿಕೊಂಡು ಮಾರ್ಗದರ್ಶನದಲ್ಲಿಯೇ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.
ಅಂಬೇಡ್ಕರ್ ಬರದಿದ್ದರೆ ಉಹೆ ಅಸಾಧ್ಯ :
ಅಂಬೇಡ್ಕರ್ ಅವರ ಬಾಲ್ಯದಲ್ಲಿ ಕಷ್ಟ ಅನುಭವಿಸಿದ್ದ ಬಹಳವಾಗಿದೆ.ಶಿಕ್ಷಣ ಕಲಿಸಲು ಯಾರೂ ಬರುತ್ತಿರಲಿಲ್ಲ ಒಂದು ವೇಳೆ ಅಂಬೇಡ್ಕರ್ ಅವರು ಶಿಕ್ಷಣವೇ ಕಲಿಯದಿದ್ದರೆ ಇಂದಿನ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂಬುದು ಉಹಿಸಿಕೊಳ್ಳಲು ಅಸಾಧ್ಯ. ಛಲಬಿಡದ ಅಂಬೇಡ್ಕರ್ ಅವರು ಕಷ್ಟಪಟ್ಟು ಶಿಕ್ಷಣ ಪಡೆದು ದೇಶಕ್ಕೆ ಸಂವಿಧಾನ ಶಿಲ್ಪಿ ನೀಡಿ ಸಂವಿಧಾನ ಶಿಲ್ಪಿಗಳಾಗಿ ಕಟ್ಟಕಡೆಯ ವ್ಯಕ್ತಿಯನ್ನು ಸಂವಿಧಾನ ಗುರುತಿಸುವಂತೆ ಮಾಡಿದ ಪುಣ್ಯಾತ್ಮರಾಗಿದ್ದಾರೆ ಎಂದರು.
ಮಠಕ್ಕೆ ಭಕ್ತರೇ ಆಸ್ತಿ :
ಮಠಗಳು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು ಅದು ಎಲ್ಲಾ ಧರ್ಮಕ್ಕೂ ಇಡೀ ಮಾನವಕುಲಕ್ಕೆ ಸೀಮಿತವಾಗಬೇಕು. ಮಠಕ್ಕೆ ಭಕ್ತರೇ ಆಸ್ತಿಯಾಗಿದ್ದಾರೆ ಈಗಾಗಿ ಭಕ್ತರಿಂದಲೇ ಮಠ ಬೆಳೆಯಬೇಕು. ಜಂಗಮ ಎಂದರೆ ಸಮದೃಷ್ಠಿ, ಸಮಸುಖ, ಸಮಕಳೆಯಿದ್ದಂತೆ, ಜಂಗಮ ಎಂದರೆ ತಾಯಿ ಇದ್ದಂತೆ ಭಕ್ತರು ಮಕ್ಕಳು ಇದ್ದಂಗೆ, ಭಕ್ತರು ಮುನಿಸಿಕೊಂಡರೆ ಜಂಗಮದಾವರು ಅವುಗಳನ್ನು ಸಹಿಸಿಕೊಳ್ಳುವ ಶಕ್ತಿ ಇರಬೇಕು, ಭಕ್ತರ ಸುಖ ದುಖಃ ಅರ್ಥ ಮಾಡಿಕೊಳ್ಳಬೇಕು ಎಂದರು.
ಬಸವಧರ್ಮ ಪ್ರವಚನ :
ಅಕ್ಟೋಬರ್ 14ರಿಂದ ನವೆಂಬರ್ 3ವರಿಗೆ ಪ್ರತಿದಿನ ಸಂಜೆ 7ಕ್ಕೆ ಲಿಂಗಾಯತ ಧರ್ಮದ ತತ್ವಗಳ ಕುರಿತು ವೈಚಾರಿಕ ಕುರಿತು ಪ್ರವಚನ ನಡೆಯಲಿದ್ದು, ನವೆಂಬರ್ 4 ಮತ್ತು 5ರಂದು ವಿಶೇಷ ಕಾರ್ಯಕ್ರಮಗಳು ಹಾಗೂ ನವಂಬರ್ 6 ಬೆಳಿಗ್ಗೆ 10 ಗಂಟೆಗೆ ವಿಶ್ವಗುರು ಬಸವಣ್ಣನವರ, ಲಿಂ. ವಿಜಯ ಮಹಾಂತ ಶಿವಯೋಗಿಗಳ ಭಾವಚಿತ್ರದೊಂದಿಗೆ ಶರಣರ ವಚನ ಸಾಹಿತ್ಯ ಕಟ್ಟಿನ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.
ಸಮಾರಂಭದಲ್ಲಿ ಇಲಕಲ್ಲ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಬಸವರಾಜ ಐದನಾಳ, ಮಲ್ಲಣ್ಣ ನಕಲದಿನ್ನಿ ಸೇರಿದಂತೆ ಅನೇಕರಿದ್ದರು.