ಲಿಂಗಸುಗೂರಿನಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿಕೆ
ಲಿಂಗಸುಗೂರು : ರಾಜ್ಯದಲ್ಲಿ ವೃತ್ತಿಪರ ಬಿಸಿಎಂ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಗಳ (BCM Hostels )ಕೊರತೆ ಇರುವುದರಿಂದ ವೃತ್ತಿಪರ ಹಾಸ್ಟೇಲ್ ಸ್ಥಾಪನೆಗೆ ಈ ಭಾರಿ ಬಜೆಟ್ ನಲ್ಲಿ ಅನುದಾನ ಕೇಳಿದ್ದೇನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವೃತ್ತಿಪರ ಬಿಸಿಎಂ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಕೊರತೆ ಹೆಚ್ಚಾಗಿ ಇರುವುದರಿಂದ ಈಗಾಗಿ ಹೊಸದಾಗಿ ವೃತ್ತಿಪರ ಹಾಸ್ಟೇಲ್ (BCM Hostels )ಸ್ಥಾಪನೆಗೆ ಈ ಭಾರಿ ಬಜೆಟ್ ನಲ್ಲಿ ವಿಶೇಷ ಅನುದಾನ ಕೇಳಿದ್ದೇನೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವೃತ್ತಿಪರ ಹಾಸ್ಟೇಲ್( BCM Hostels )ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದಕ್ಕಾಗಿ ಯೋಜನೆ ರೂಪಿಸುವ ಚಿಂತನೆ ಇದೆ ಎಂದರು. ಬಿಸಿಎಂ ಹಾಸ್ಟೇಲ್‍ಗಳಲ್ಲಿ ಯಾವುದೇ ಅನುದಾನ ಕೊರತೆ ಇಲ್ಲಾ, ಮಂಚ ಹಾಗೂ ಇತರೆ ಸೌಲಭ್ಯ ಒದಗಿಸಲು ಸ್ವಲ್ಪ ವಿಳಂಭವಾಗಿದೆ. ಯಾವ ಯಾವ ತಾಲೂಕಿನಲ್ಲಿ ದೇವರಾಜು ಅರಸು ಭವನ ಅಗತ್ಯವಿದೆಯೋ ಅವುಗಳ ಪಟ್ಟಿ ತರಿಸಿಕೊಂಡು ಅಲ್ಲಿ ದೇವರಾಜು ಅರಸು ಭವನ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜಿಲ್ಲಾ ಹಂತದಲ್ಲಿಯೇ ಆಹಾರ ಟೆಂಡರ್ :
ಬಿಸಿಎಂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂಬ ಉದ್ದೇಶದಿಂದ ಹಾಗೂ ಕೆಲವು ಮಾರ್ಗಸೂಚಿ ರೂಪಿಸಿ ಹಾಸ್ಟೇಲ್ ಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಕಳೆದ 25-30 ವರ್ಷಗಳ ಹಿಂದೆ ಇದ್ದ ಟೆಂಡರ್ ವ್ಯವಸ್ಥೆ ರದ್ದು ಪಡಿಸಿ ಆಯಾ ಜಿಲ್ಲಾ ಕೇಂದ್ರ ಸ್ಥಾನದಿಂದಲೇ ಟೆಂಡರ್ ಕರೆಯುವ ವ್ಯವಸ್ಥೆ ಮಾಡಿದ್ದೇನೆ. ಇದು ಉತ್ತಮ ವ್ಯವಸ್ಥೆಯಾಗಿದ್ದರಿಂದ ಇದೇ ರೀತಿಯ ಟೆಂಡರ್ ಪದ್ಧತಿಯನ್ನೇ ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಹಾಸ್ಟೇಲ್ ಗಳಿಗೆ ಅನುಸರಿಸುವಂತೆ ಮುಖ್ಯಮಂತ್ರಿಗಳು ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.
150 ಹಾಸ್ಟೇಲ್ ಸ್ಥಾಪನೆ :
ಬಿಸಿಎಂ ಇಲಾಖೆಗೆ ನಾನು ಸಚಿವನಾಗಿ ಬಂದ ಮೇಲೆ ಇತಿಹಾಸದಲ್ಲಿ 150 ಹೊಸ ಹಾಸ್ಟೇಲ್ ಮಂಜೂರಾತಿ ನೀಡಿದ್ದೇನೆ. ಜಿಲ್ಲಾ ಕೇಂದ್ರಗಳಲ್ಲಿ ಹಾಸ್ಟೇಲ್ ಅವಶ್ಯಕತೆ ಇರುವುದರಿಂದ ಅಲ್ಲಿಗೆ ಬಹಳಷ್ಟು ಒತ್ತು ನೀಡಲಾಗುತ್ತಿದೆ. ರಾಯಚೂರು ಸಿಟಿಗೆ 2, ಮಸ್ಕಿ, ಸಿಂಧನೂರು ಹಾಸ್ಟೇಲ್ ಮಂಜೂರಾತಿ ನೀಡಿದ್ದೇನೆ. ಮುಂದಿನ ವರ್ಷ ಲಿಂಗಸುಗೂರು ತಾಲೂಕಿಗೂ ಹೊಸ ಹಾಸ್ಟೇಲ್ ಕೊಡುವುದಾಗಿ ಭರವಸೆ ನೀಡಿದರು. ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೇಲ್ ಗಳಿಗೆ ನಿವೇಶನ ಲಭ್ಯತೆ ಮೇರಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಬಿಸಿಎಂ ಜಿಲ್ಲಾ ಅಧಿಕಾರಿ ಡಾ.ಅಶೋಕ, ತಾಲೂಕ ಅಧಿಕಾರಿ ರಮೇಶ ನಾಯ್ಕ ಸೇರಿದಂತೆ ಅನೇಕರಿದ್ದರು.