ಲಿಂಗಸುಗೂರಿನಲ್ಲಿ ಒಂದು ಗಂಟೆಗೂ ಅಧಿಕ ಹೆದ್ದಾರಿ ತಡೆ
ಲಿಂಗಸುಗೂರು : ನ್ಯಾಯಯುತ ಬೇಡಿಕೆಯಾದ 2ಎ ಮೀಸಲಾತಿ ಈಡೇರಿಕೆಗಾಗಿ ಶಾಂತಿಯುತ ನಡೆಯುತ್ತಿದ್ದ ಹೋರಾಟವನ್ನು ಹತ್ತಿಕ್ಕುವ ಹುನ್ನಾರದಿಂದ ಲಾಠಿ ಚಾರ್ಜ ಮಾಡಿಸಿದ್ದಾರೆ, ಕೇವಲ ಲಾಠಿ ಏಟು ಯಾಕೆ ಗುಂಡು ಹಾರಿಸಿದರೂ ಪಂಚಮಸಾಲಿಗಳು ಹೆದರೋಲ್ಲ ಎಂದು ಪಂಚಮಸಾಲಿ ಸಮಾಜದ ಮುಖಂಡ ಮಹಾಂತೇಶ ಪಾಟೀಲ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 10ರಂದು ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ (Belagavi Lathicharge )ನಡೆಸಿದ ಘಟನೆ ಖಂಡಿಸಿ ತಾಲೂಕು ಪಂಚಮಸಾಲಿ ಸಮಾಜದಿಂದ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ರಸ್ತೆ ತಡೆ ಪ್ರತಿಭಟನೆ ಉದ್ದೇಶಿಸಿ ಅವರು, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವಾಗ ವಿನಾಕಾರಣ ನಮ್ಮ ಸಮುದಾಯದ ಮುಗ್ದ ಜನರ ಮೇಲೆ ಹಲ್ಲೆ ಮಾಡಿರುವುದು ತುಂಬಾ ಖಂಡನೀಯ. ಲಾಠಿ ಜಾರ್ಚ ಘಟನೆ (Belagavi Lathicharge ) ಇದೊಂದು ಕೆಟ್ಟ ಘಟನೆಯಾಗಿದೆ. ನಾಯ್ಯಯುತವಾಗಿ ಹೋರಾಟ ಮಾಡಿದರೆ ಪೋಲಿಸರ ಮುಖಾಂತರ ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಸರಕಾರ ಮಾಡುತ್ತಿದೆ.
2ಎ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಸರಕಾರದಲ್ಲಿರುವ ನಮ್ಮ ಸಮಾಜದ ಶಾಸಕರು ಸಮಾಜದ ಬೇಡಿಕೆ ಈಡೇರಿಸಲು ಸರಕಾರದ ಮೇಲೆ ಒತ್ತಡ ಹಾಕಲು ಮುಂದಾಗಬೇಕೇ ಮೌನ ವಹಿಸಿದ್ದು ಸರಿಯಲ್ಲ, ಪಂಚಮಸಾಲಿ ಸಮಾಜದ ಬಾಂಧವರು ಸ್ವಾಭಿಮಾನಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 2ಎ ಮೀಸಲಾತಿ ಸಿಗುವವರಿಗೂ ಪಂಚಮಸಾಲಿಗಳ ಹೋರಾಟ ನಿಲ್ಲದು, ಅಥಣಿ ಶಾಸಕ ಲಕ್ಷ್ಮಣ ಸವದಿಯವರು ನಮ್ಮ ಸಮಾಜದ ಪರವಾಗಿ ಧ್ವನಿ ಎತ್ತಿ 2ಎ ಮೀಸಲಾತಿ ನೀಡುವಂತೆ ಸರಕಾರದ ಮೇಲೆ ಒತ್ತಡ ಹಾಕಿದ್ದು ಅಭಿನಂದನಾರ್ಹವಾಗಿದೆ. 2ಎ ಮೀಸಲಾತಿ ಕೊಡಿಸಲು ಎಲ್ಲಾ ಶಾಸಕರು ನಮ್ಮ ಸಮಾಜದ ಪರವಾಗಿ ಧ್ವನಿ ಎತ್ತುವಂತೆ ಆಗ್ರಹಿಸಿದರು.
ಸಂವಿಧಾನ ಬದ್ಧ ಹಕ್ಕು ನೀಡಿ :
ಪ್ರತಿಭಟನೆ ಉದ್ದೇಶಿಸಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ.ಸುಭಾಷ ಪಲ್ಲೇದ್ ಮಾತನಾಡಿ, ದೇಶಕ್ಕೆ ಅನ್ನ ನೀಡುವ ಪಂಚಮಸಾಲಿ ಸಮಾಜದ ಸಂವಿಧಾನ ಬದ್ಧವಾದ 2ಎ ಮೀಸಲಾತಿ ಹಕ್ಕು ನೀಡಬೇಕಾದ ಸರಕಾರ ಲಾಠಿ ಚಾರ್ಜ ಮಾಡಿದ್ದು ದುರ್ದೈವದ ಸಂಗತಿಯಾಗಿದೆ. ಪೊಲೀಸ್ ರ ಮೂಲಕ ಹೆದರಿಸಿ ಬೆದರಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಸರಕಾರ ಮಾಡುತ್ತಿದೆ. ನಾವು ಯಾವುದೇ ಸಮಾಜದ ವಿರುದ್ಧ ಹೋರಾಟ ಮಾಡುತ್ತಿಲ್ಲ ಅವರ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿಲ್ಲ, ನಮ್ಮ ಸಂವಿಧಾನ ಬದ್ಧವಾದ ಹಕ್ಕನ್ನು ಕೇಳುತ್ತಿದ್ದೇವೆ.ಶಾಂತಿಯುತ ನಡೆಯುತ್ತಿದ್ದ ಹೋರಾಟದ ಮೇಲೆ ಲಾಠಿ ಚಾರ್ಜ ನಡೆಸಿದ್ದು ಖಂಡನೀಯ. ಇಂತಹ ಘಟನೆಗಳು ಮರುಕಳಿಸಬಾರದು, ಪ್ರತಿಭಟನೆ ನಿರತ ಪಂಚಮಸಾಲಿ ಸಮಾಜದವರ ಮೇಲೆ ಹಾಕಲಾದ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಸಮಾಜದ ನ್ಯಾಯಯುತ 2ಎ ಮೀಸಲಾತಿ ಬೇಡಿಕೆ ಈಡೇರಿಸಬೇಕೆಂದು ಎಂದು ಆಗ್ರಹಿಸಿದರು.
ಒಂದು ಗಂಟೆ ರಸ್ತೆ ತಡೆ :
ಪಂಚಮಸಾಲಿ ಸಮಾಜದವರು ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ನಡೆಸಿದ ರಸ್ತೆ ತಡೆಯಿಂದಾಗಿ ಕಲುಬುರಗಿ ರಸ್ತೆ, ರಾಯಚೂರು ರಸ್ತೆ, ಬೈಪಾಸ್ ರಸ್ತೆ, ಬಾಗಲಕೋಟ್ ರಸ್ತೆಗಳಲ್ಲಿ ನೂರಾರು ವಾಹನಗಳ ನಿಂತು ಟ್ರ್ಯಾಪಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಬಸ್ ನಿಲ್ದಾಣದ ವೃತ್ತದಿಂದ ಸಹಾಯಕ ಆಯುಕ್ತರ ಕಚೇರಿ ವರಿಗೆ ಪ್ರತಿಭಟನೆ ಮೆರವಣಿಗೆ ನಡೆಸಿ ನಂತರ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪಂಚಮಸಾಲಿ ಸಮಾಜದ ಮುಖಂಡರಾದ ಶಂಕರಗೌಡ ಅಮರಾವತಿ,ಅಮರೇಶ ತಾವರಗೇರಾ, ಆದೇಶ ಹೆರೂರು, ಸಿಸಿ.ಕರಡಕಲ್,ಶರಣಪ್ಪ ಮೇಟಿ, ಶ್ರೀಶೈಲ ಅಂಗಡಿ, ಶಂಕರಗೌಡ ಗೌಡರ್, ವಿಜಯಲಕ್ಷ್ಮೀ ದೇಸಾಯಿ, ಮಲ್ಲಿಕಾರ್ಜುನ ನಾಡಗೌಡ, ರಮೇಶ ಯರಡೋಣಾ,ವಿಜಯಕುಮಾರ ಹೊಸಗೌಡ್ರು, ಅಮರೇಶ ಬ್ಯಾಳಿ, ಸಿದ್ದು ಕಾಳಾಪುರ, ರುದ್ರಪ್ಪ ಅಂಗಡಿ, ಮಹೇಶ, ಅಮರೇಶ ಹೆಸರೂರು, ಬಸಲಿಂಗಪ್ಪ ಗದ್ದಿ, ಸೇರಿದಂತೆ ಅನೇಕರಿದ್ದರು.