ಅಧಿಕಾರಿಗಳ ಅಮಾನತ್ ಗಾಗಿ ನಮ್ಮ ಕರವೇ ಹೋರಾಟ
ಲಿಂಗಸುಗೂರು : ತಾಲೂಕಿನ ಸಮಾಜ ಕಲ್ಯಾಣ (Social welfare )ಇಲಾಖೆಯ ಅಧೀನದಲ್ಲಿ ಬರುವ ವಸತಿ ನಿಲಯಗಳಲ್ಲಿ ಸರ್ಕಾರದ ಆದೇಶದಂತೆ ಬಯೋಮೆಟ್ರಿಕ್ (Biometric )ಪದ್ಧತಿ ಬಳಸದೆ ನಕಲಿ ದಾಖಲೆಗಳನ್ನು, ರಸೀದಿಗಳನ್ನು ಸೃಷ್ಟಿಸಿ, ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಮಾಡಿದ ಕ್ಲರ್ಕ, ವಾರ್ಡನ್, ಅಧಿಕಾರಿಗಳ ಅಮಾನತ್ತು ಮಾಡುವಂತೆ ಆಗ್ರಹಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಎಸಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿನ ಎಲ್ಲಾ ವಸತಿ ನಿಲಯಗಳಲ್ಲಿ ತಪ್ಪದೇ ಕಡ್ಡಾಯವಾಗಿ ಬಯೋಮೆಟ್ರಿಕ್ ಪದ್ಧತಿಯಂತೆ ಮಕ್ಕಳ ಹಾಜರಾತಿಯನ್ನು ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ, ಬಯೋಮೆಟ್ರಿಕ್ ಮಾಡಲು ಯಾವುದೇ ತೊಂದರೆಯಾಗದಂತೆ ಆಯಾ ವಸತಿ ನಿಲಯಗಳಲ್ಲಿ ವಿದ್ಯುತ್ ಸ್ಥಗಿತಗೊಂಡಾಗ ಸೋಲಾರ್, ಬ್ಯಾಟರಿ, ಯುಪಿಎಸ್ ವ್ಯವಸ್ಥೆ ಮಾಡಿದೆ. ಇಷ್ಟೆಲ್ಲಾ ಸೌಲಭ್ಯ ಇದ್ದರೂ ಕೂಡಾ ಲಿಂಗಸುಗೂರು ತಾಲೂಕಿನಲ್ಲಿ ಕರೆಂಟ್ ಹೋಗಿದೆ ನೆಪವೊಡ್ಡಿ ಯಾವುದೇ ವಸತಿ ನಿಲಯದಲ್ಲಿ ಬಯೋಮೆಟ್ರಿಕ್ (Biometric ) ಹಾಜರಾತಿ ಇರುವುದೇ ಇಲ್ಲದಂತಾಗಿದೆ.
ತನಿಖಾ ತಂಡ ರಚಿಸಿ :
ಬಯೋಮೆಟ್ರಿಕ್ ಪದ್ಧತಿಯನ್ನು ನಿರ್ವಹಣೆ ಮಾಡದೇ ಸಕಲ ಸೌಲಭ್ಯ ಇದ್ದರೂ ವಿದ್ಯುತ್ ಕಡಿತದ ಸುಳ್ಳು ದಾಖಲೆ ಸೃಷ್ಠಿಸಿ ಸರ್ಕಾರದಿಂದ ಬಂದಿರುವ ಅನುದಾನವನ್ನು ದುರಪಯೋಗ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಗಾಗಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಕೂಡಲೇ ಉನ್ನತ ಅಧಿಕಾರಿಗಳ ತಂಡ ರಚಿಸಬೇಕು. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಹಾಗೂ ವಾರ್ಡನ್‌ಗಳಿಗೆ, ಕ್ಲರ್ಕಗಳಿಗೆ ಸೇವೆಯಿಂದ ಅಮಾನತ್ತು ಮಾಡಿ ಅವ್ಯವಹಾರವಾದ ಹಣವನ್ನು ಸರ್ಕಾರಕ್ಕೆ ಮರು ಪಾವತಿ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.
ಕಾಳಸಂತೆಯಲ್ಲಿ ಆಹಾರ ಧಾನ್ಯ ಮಾರಾಟ :
ತಾಲ್ಲೂಕಿನಲ್ಲಿರುವ ಎಲ್ಲಾ ವಸತಿ ನಿಲಯಗಳಿಗೆ ಆಹಾರ ಸರಬರಾಜು ಮಾಡಲು ಪಡೆದಿರುವ ಗುತ್ತಿಗೆ ದಾರರಿಂದ ನೇರವಾಗಿ ಆಯಾ ವಸತಿ ನಿಲಯಗಳಿಗೆ ಆಹಾರಧಾನ್ಯ ಸರಬರಾಜು ಮಾಡಬೇಕೆಂಬ ಒಡಂಬಡಿಕೆ ಇದ್ದರೂ ಗುತ್ತಿಗೆದಾರರು ನೇರವಾಗಿ ಲಾರಿ ಮೂಲಕ ಆಹಾರಧಾನ್ಯ ಸರಬರಾಜು ಮಾಡುತ್ತಿಲ್ಲಾ, ಆಯಾ ಊರಲ್ಲೇ ವಾರ್ಡನಗಳು ಖಾಸಗಿ ಅಂಗಡಿಯಲ್ಲಿ ಕಡಿಮೆ ದರದ ಕಳಪೆ ಸಾಮಗ್ರಿ ಖರೀದಿಸುತ್ತಾರೆ. ವಾರ್ಡನ್ ಹಾಗೂ ಗುತ್ತಿಗೆದಾರರು ಸೇರಿ ಅವ್ಯವಹಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೆ ಸರ್ಕಾರ ಈ ಎಲ್ಲಾ ಭ್ರಷ್ಟಾಚಾರವನ್ನು ತಡೆಯಲು ಒಂದು ವಾರದ ಒಳಗಾಗಿ ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ (Biometric )ಬಯೋಮೆಟ್ರಿಕ್ ಪದ್ಧತಿಯಂತೆ ಮಕ್ಕಳ ಹಾಜರಾತಿ ಮಾಡಬೇಕು. ಈಗಾಗಲೇ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಲು ಸ್ಥಳೀಯ ಶಾಸಕರು, ವಿಧಾನಪರಿಷತ್ ಸದಸ್ಯರು ಸರಕಾರದ ಮಟ್ಟದಲ್ಲಿ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.
ಈ ವೇಳೆ ನಮ್ಮ ಕರವೇ ತಾಲೂಕಾಧ್ಯಕ್ಷ ತಿಮ್ಮಾರೆಡ್ಡಿ ಮುನ್ನೂರು, ಪ್ರಧಾನ ಕಾರ್ಯದರ್ಶಿ ರಮೇಶ ಗುತ್ತೇದಾರ, ಮೌನೇಶ ರೆಡ್ಡಿ, ಬಸವರಾಜ ಕಕ್ಕೇರಿ, ಅಶೋಕ ಗಸ್ತಿ, ದೇವರಾಜ ಉಪ್ಪಾರ, ಅಮರ ರವಿಕುಮಾರ ಗೊರೇಬಾಳ, ಸಚಿನ್ ರಾಠೋಡ್, ಅಬ್ಬಾಸ್ ಅಲಿ, ಮಹ್ಮದ್ ರಶೀದ್, ಜ್ಯೋತಿ ಸುಂಕದ, ಶರಣಮ್ಮ ಹೂನೂರು, ಲಕ್ಷ್ಮೀ ಅಂಕನಾಳ, ಸುನಿಲ್ ಹಾಗೂ ಇನ್ನಿತರಿದ್ದರು.