ಬಿಜೆಪಿ ಪ್ರತಿಭಟನೆ :
ಲಿಂಗಸುಗೂರು :ವಿದೇಶದಲ್ಲಿ ಕುಳಿತು ದೇಶದ ವಿರುದ್ಧ ಮಾತನಾಡುವ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಈ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ ಆಗ್ರಹಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ನಡೆದ ರಾಹುಲ್ ಗಾಂಧಿ ವಿರುದ್ಧ (BJP protest) ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಅಮೇರಿಕಾ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಮೀಸಲಾತಿ ರದ್ದು ಪಡಿಸುವ ಮೂಲಕ ದೇಶದಲ್ಲಿ ಸಮಾನತೆ ತರುವುದಾಗಿ ಹೇಳಿಕೆ ನೀಡುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಜನರಿಗೆೆ ಅವಮಾನ ಮಾಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಎಸ್‌ಸಿ,ಎಸ್‌ಟಿ ಹಾಗೂ ಓಬಿಸಿ ವರ್ಗದ ಜನರ ಬಗ್ಗೆ ಓಲೈಕೆ ಮಾತನಾಡಿ ಅಧಿಕಾರಕ್ಕೆ ಬರುವ ಕಾಂಗ್ರೆಸ್ ನಂತರ ಆ ಜನಾಂಗದವರ ಹಕ್ಕು ಕಸಿಯುವ ಕುತಂತ್ರ ಮಾಡುತ್ತೆ, ವಿದೇಶದಲ್ಲಿದ್ದಾಗ ಪದೇ ಪದೇ ದೇಶ ವಿರುದ್ಧ ಮಾತನಾಡುವ ರಾಹುಲ್‌ಗೆ ಈ ದೇಶದಲ್ಲಿ ಇರಲು ನೈತಿಕತೆ ಇಲ್ಲ, ಕೂಡಲೇ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಹಾಗೂ ಸಂಸದ ಸ್ಥಾನದಿಂದ ವಜಾಗೊಳಿಸಿ ದೇಶದಿಂದಲೇ ಗಡಿಪಾರು ಮಾಡಬೇಕು. ಈ ಹಿಂದೆ ಜವಾಹರ ಲಾಲ್ ನೆಹರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದರು ಅದರಂತೆ ಅವರ ಮೊಮ್ಮಗ ರಾಹುಲ್ ಅದನ್ನೇ ಪುನರುಚ್ಚಿಸಿ ದೇಶದ ವಿರೋಧಿಗಳಾಗಿದ್ದಾರೆ ಎಂದರು.
ವಿರೋಧ ಪಕ್ಷ ನಾಯಕನ ಸ್ಥಾನದಿಂದ ವಜಾ ಮಾಡಿ :
ಮ0ಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು ಮಾತನಾಡಿ, ಲೋಕಸಭೆ ಪ್ರವೇಶಿಸುವಾಗ ಕೈಯಲ್ಲಿ ಸಂವಿಧಾನ ಪ್ರತಿಯನ್ನು ಹಿಡಿದುಕೊಂಡು ಪೋಸು ಕೊಡುವ ರಾಹುಲ್ ಗಾಂಧಿ ವಿದೇಶದಲ್ಲಿ ಅದೇ ಸಂವಿಧಾನದ ವಿರುದ್ಧ ಮಾತನಾಡುವುದು ಸರಿಯಲ್ಲ, ದೇಶದ ಘನತೆಗೆ ದಕ್ಕೆ ತರುವ ಹೇಳಿಕೆ ನೀಡುವ ರಾಹುಲ್ ಗಾಂಧಿಯವರನ್ನು ಸಂಸದ ಹಾಗೂ ವಿರೋಧ ಪಕ್ಷ ನಾಯಕನ ಸ್ಥಾನದಿಂದ ವಜಾ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮುದಗಲ್ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್,ಜಗನ್ನಾಥ ಕುಲಕರ್ಣಿ, ಈಶ್ವರ ವಜ್ಜಲ್,ನಾರಾಯಣಪ್ಪ ನಾಯ್ಕ, ಅಮರೇಶ ಮಡ್ಡಿ, ಅನಂತ್‌ದಾಸ್, ಬಸನಗೌಡ ಚಿತ್ತಾಪುರ, ಪರಮೇಶ ಯಾದವ್, ಲಿಂಗಣ್ಣ ದೇವಿಕೇರಿ, ವೆಂಕನಗೌಡ ಗುಡದನಾಳ, ಸೇರಿದಂತೆ ಇನ್ನಿತರಿದ್ದರು.