ಮಹಿಬೂಬನಗರದ ಪೆದ್ದ ಗೋಪ್ಲಾಪುರದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವು
ಲಿಂಗಸುಗೂರು : ತೆಲಂಗಾಣದ ಮಹಿಬೂಬನಗರ ಜಿಲ್ಲೆಯ ದೇವರಕದ್ರ ಮಂಡಲದ ಪೆದ್ದ ಗೋಪ್ಲಾಪುರ ಗ್ರಾಮದ ಬಳಿ ಕಾರು-ಲಾರಿ ನಡುವೆ ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ (Car accident)ಹಿರಿಯ ಪತ್ರಕರ್ತ ಬಿ.ಎ.ನಂದಿಕೋಲಮಠ(59), ನಿವೃತ್ತ ಚಾಲಕ ಜಂಗಮಮೂರ್ತಿ(68) ಸ್ಥಳದಲ್ಲೇ ಸಾವುನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ತೆಲಂಗಾಣದ ಕೊಲ್ಲಿಪಾಕಿಯಲ್ಲಿ ಮಂಗಳವಾರ ಬೆಳಿಗ್ಗೆ ರಂಭಾಪುರಿ ಜಗದ್ಗುರುಗಳ ಜನ್ಮದಿನದ ನಿಮಿತ್ಯ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಿಂಗಸುಗೂರಿನ ಪ್ರಜಾವಾಣಿ ವರದಿಗಾರ ಬಿ.ಎ.ನಂದಿಕೋಲಮಠ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಣ್ಣ ವಾರದ, ಪಶು ವೈದ್ಯಕೀಯ ಇಲಾಖೆ ನಿವೃತ್ತ ಚಾಲಕ ಜಂಗಮಮೂರ್ತಿ, ಚೆನ್ನಯ್ಯ ಕಾಳಹಸ್ತಿಮಠ, ಅಮರೇಶ ಛಾವಣಿ, ಮಲ್ಲಿಕಾರ್ಜುನ ನಾಡಗೌಡ ಎರ್ಟಿಗಾ ಕಾರಿನಲ್ಲಿ ತೆರಳಿದ್ದರು, ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜಗದ್ಗರುಗಳ ದರ್ಶನ ಹಾಗೂ ಆಶೀರ್ವಾದ ಪಡೆದು ವಾಪಸ್ಸು ಬರುತ್ತಿದ್ದ ವೇಳೆ ಮಹಿಬೂಬುನಗರ ಜಿಲ್ಲೆಯ ದೇವರಕದ್ರ ಪೆದ್ದ ಗೋಪ್ಲಾಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ (Car accident) ಸಂಭವಿಸಿದೆ.
ಹೆದ್ದಾರಿಯಲ್ಲಿ ಕಾದುಕೂತಿದ್ದ ಜವರಾಯ :
ಕೊಲ್ಲಿಪಾಕಿಯಿಂದ ವಾಪಸ್ಸು ಲಿಂಗಸುಗೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಪೆದ್ದ ಗೋಪ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 167ರಲ್ಲಿ ರಾಯಚೂರಿನಿಂದ ಕಲ್ಲಿದ್ದಿಲು ಬೂದಿ ತುಂಬಿಕೊಂಡು ಮಹಬೂಬ್ ನಗರ ಕಡೆಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಬಿ.ಎ.ನಂದಿಕೋಲಮಠ ಸ್ಥಳದಲ್ಲಿಯೇ ಸಾವುನ್ನಪ್ಪಿದ್ದು, ತೀವೃಗಾಯಗೊಂಡಿದ್ದ ಜಂಗಮಮೂರ್ತಿ ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಲ್ಲಣ್ಣ ವಾರದ ಹಾಗೂ ಚೆನ್ನಯ್ಯ ಕಾಳಹಸ್ತಿಮಠ ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಹೈದರಬಾದ್ ನ ಉಸ್ಮಾನಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.ಅಮರೇಶ ಛಾವಣಿ ಮತ್ತು ಮಲ್ಲಿಕಾರ್ಜುನ ನಾಡಗೌಡ ಅವರನ್ನು ಮಹಿಬೂಬುನಗರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.
ಒಂದೂವರೆ ಗಂಟೆ ಕಾರಿನಲ್ಲಿಯೇ ಕಾಲ ಕಳೆದ ಚಾಲಕ :
ಅತಿವೇಗದಿಂದ ಕಾರು-ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರ್ಟಿಗಾ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಅಮರೇಶ ಛಾವಣಿ ಒಂದೂವರೆ ಗಂಟೆ ಕಾಲ ಕಾರಿನಲ್ಲಿ ಸಿಲುಕಿಕೊಂಡು ಹೊರಬರಲಾದೇ ನರಳಾಡಿದ್ದ ಪೊಲೀಸರು ಹಾಗೂ ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಅವರನ್ನು ಹೊರತರಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಅವರನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
ಮುಗಿಲು ಮುಟ್ಟಿದ ಆಕ್ರಂದನ :
ಧಾರ್ಮಿಕ ಕ್ಷೇತ್ರದ ಸೇವೆಯಲ್ಲಿ ಗುರುತಿಸಿಕೊಂಡಿದ್ದ 2023ರಲ್ಲಿ ಲಿಂಗಸುಗೂರಿನಲ್ಲಿ ರಂಭಾಪುರಿ ಜಗದ್ಗುರುಗಳ ದಸರಾ ದರ್ಭಾರ್ ಸಮಾರಂಭವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದ ಬಿ.ಎ.ನಂದಿಕೋಲಮಠ, ಬಸವತತ್ವದ ಪ್ರಚಾರಕರಾಗಿ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿದ್ದ ಜಂಗಮಮೂರ್ತಿ ಅವರು ಅಕಾಲಿಕ ಅಗಲಿಕೆಯಿಂದ ಅವರ ಕುಟಂಬದವರಿಗೆ ದೊಡ್ಡ ಸಿಡಿಲು ಬಡಿದಂತಾಗಿದೆ. ಅವರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನೇನು ಎರಡ್ಮೂರು ತಾಸಿನಲ್ಲಿ ಮನೆ ಸೇರುತ್ತಿದ್ದವರನ್ನು ಯಮರಾಯನ ತನ್ನತ್ತ ಕರೆಸಿಕೊಂಡಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಮಲ್ಲಣ್ಣ ವಾರದ, ಚೆನ್ನಯ್ಯ ಕಾಳಹಸ್ತಿಮಠ, ಅಮರೇಶ ಛಾವಣಿ ಅವರು ಚೇತರಿಸಿಕೊಂಡು ಬರಲಿ ಎಂದು ಕುಟಂಬದ ಪ್ರಾರ್ಥನೆಯಾಗಿದೆ.