ಲಿಂಗಸುಗೂರಿನಲ್ಲಿ ನಡೆದ ಘಟನೆ ಮರುಕಳಿಸಬಾರದು
ಲಿಂಗಸುಗೂರು : ರೈತರು ಹಾಗೂ ವರ್ತಕರು ( Farmers and traders )ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ, ವರ್ತಕರ ಬಗ್ಗೆ ಅಪಾರ ಗೌರವ ಇದೆ, ಆದರೆ ರೈತರ ಮೇಲೆ ಆಗುತ್ತಿರುವ ಶೋಷಣೆ ನಿಲ್ಲಬೇಕು, ಇಲ್ಲದಿದ್ದರೆ ವರ್ತಕರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ (Chamaras Malipatil )ಎಚ್ಚರಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಸುಗೂರಿನ ಎಪಿಎಂಸಿಯಲ್ಲಿ (APMC) ತೂಕದಲ್ಲಿ ಮೋಸ, ಪ್ಲಾಸ್ಟಿಕ್ ಚೀಲ ಬಳಕೆ, ಸೂಟ್ ತೆಗೆಯುವ ಮೂಲಕ ರೈತರಿಗೆ ನಿರಂತರ ಶೋಷಣೆ ಮಾಡಲಾಗುತ್ತಿದ್ದರಿಂದ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರಿಂದ ಕಾರ್ಯದರ್ಶಿಗಳು ಎಲ್ಲಾ ವರ್ತಕರಿಗೆ ನೋಟಿಸ್ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಡಿಸೆಂಬರ್ 2ರಂದು ರೈತ ಸಂಘದ ನೇತ್ರತ್ವದಲ್ಲಿ ಎಪಿಎಂಸಿಯಲ್ಲಿ ಪ್ರತಿಭಟನೆ ನಡೆದಂತಹ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಶಂಕರಗೌಡ ಅಮರಾವತಿ ಅವರು ರೈತರ ಹಾಗೂ ರೈತ ಸಂಘದ ಬಗ್ಗೆ ಕೇವಲವಾಗಿ ಹಾಗೂ ಅಗೌರವದಿಂದ ಮಾತನಾಡಿದ್ದಾರೆ. ಮೇಲಾಗಿ ರೈತ ಸಂಘದ ಪದಾಧಿಕಾರಿಗಳ ಹಾಗೂ ವರ್ತಕರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತವರಣ ನಿರ್ಮಾಣವಾಗಿತ್ತು. ಇದು ಸರಿಯಾದ ಬೆಳವಣಿಗೆಯಲ್ಲ, ವರ್ತಕರು ರೈತರನ್ನು ಗೌರವದಿಂದ ಕಾಣಬೇಕು, ವರ್ತಕರು ತಮ್ಮ ವರ್ತನೆ ತಿದ್ದಿಕೊಳ್ಳಬೇಕು, ಇಲ್ಲವೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ವರ್ತಕರ ನಡೆಯನ್ನು ತಿದ್ದಿ ಅದು ನಿಮ್ಮಿಂದ ಆಗಲಿಲ್ಲ ಅಂದರೆ ರಾಜ್ಯದ ಎಲ್ಲಾ ಜಿಲ್ಲೆಗಳ ರೈತ ಸಂಘಗಳ ಪದಾಧಿಕಾರಿಗಳು ಇಲ್ಲಿಗೆ ಬಂದು ವರ್ತಕರ ನಡೆಯನ್ನು ತಿದ್ದುವ ಕೆಲಸ ಮಾಡುತ್ತೇವೆ, ರೈತರನ್ನು ಹಗುರವಾಗಿ ಕಾಣವುದನ್ನು ಬಿಟ್ಟು ಗೌರವದಿಂದ ಕಾಣಬೇಕು ಎಂದರು.
ಅನ್ಯಾಯದ ಲಾಭ ಬೇಡ :
ತೂಕದಲ್ಲಿ ಮೋಸ ಮಾಡುವುದು, ಪ್ರತಿ ಚೀಲಕ್ಕೆ ಸೂಟು ತೆಗೆಯುವುದು, ಪ್ಲಾಸ್ಟಿಕ್ ಚೀಲ ಬಳಕೆ ಮಾಡುವುದು ಇವುಗಳು ಯಾವುದೂ ಎಪಿಎಂಸಿ ಕಾಯ್ದೆಯಲ್ಲಿ ಇಲ್ಲಾ, ಆದರೂ ವರ್ತಕರು ಕಾಯ್ದೆಯನ್ನು ಉಲ್ಲಂಘಿಸಿ ರೈತರಿಗೆ ಶೋಷಣೆ ಮಾಡುತ್ತಿದ್ದಾರೆ. ರಾಯಚೂರಿನ ಹತ್ತಿ ಮಾರುಕಟ್ಟೆ ಸೇರಿ ಜಿಲ್ಲೆಯ ಎಲ್ಲಾ ಮಾರುಕಟ್ಟೆಯಲ್ಲಿ ರೈತರ ಶೋಷಣೆ ನಡೆಯುತ್ತಿರುವ ಬಗ್ಗೆ, ಎಲ್ಲಾ ವರ್ತಕರ ಹಾಗೂ ರೈತರ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ನವೆಂಬರ್ 11ರಂದು ಮನವಿ ಮಾಡಿದ್ದೇವೆ,ಆದರೆ ಇನ್ನೂ ಸಭೆ ಕರೆದಿಲ್ಲಾ, ನ್ಯಾಯಯುತ ಲಾಭ ಪಡೆಯಲು ನಮ್ಮದೇನೂ ತಕರಾರು ಇಲ್ಲಾ ಆದರೆ ಅನ್ಯಾಯ ಮಾರ್ಗದಲ್ಲಿ ಲಾಭ ಪಡೆದರೆ ರೈತರು ಉಳಿಯೋದು ಹೇಗೆ ಇದನ್ನು ವರ್ತಕರು ಅರ್ಥೈಸಿಕೊಳ್ಳಬೇಕು ಎಂದರು.
ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕಿ :
ಇತ್ತೀಚಿಗೆ ಪಹಣಿಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ರೈತರ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದು ಹಾಕುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರಿಂದ ಮನವಿಗೆ ಸ್ಪಂದಿಸಿದ ಸಿಎಂ ರೈತರಿಗೆ ನೋಟಿಸ್ ನೀಡದಂತೆ ಕ್ರಮವಹಿಸಿದ್ದಾರೆ, ಮುಂದೇನು ಮಾಡುತ್ತಾರೆ ಎಂಬುದು ಕಾದು ನೋಡಿ ರೈತ ಸಂಘ ಮುಂದಿನ ತಿರ್ಮಾನ ಕೈಗೊಳ್ಳಲಿದೆ ಎಂದರು.
ಬರಪರಿಹಾರ ಕೊಡಿಸಲು ಬಿಜೆಪಿ ಹೋರಾಟ ಮಾಡಲಿ :
ರಾಜಕೀಯ ಉದ್ದೇಶದಿಂದ ಬಿಜೆಪಿ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದೆ, ಇದಕ್ಕೆ ರೈತ ಸಂಘದ ಸಹಮತ ಇದೆ, ರೈತರ ಬಗ್ಗೆ ಕಾಳಜಿ ಇದ್ದ ಬಿಎಸ್ ಯಡಿಯೂರಪ್ಪ ನವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ, ರಾಜ್ಯದ 192 ತಾಲೂಕಿನಲ್ಲಿ ಬರಗಾಲದಿಂದ ರೈತರು ಕಂಗಾಲಾಗಿದ್ದರೂ ರೈತರಿಗೆ ಈವರಿಗೂ ಬರಪರಿಹಾರ ನೀಡಿಲ್ಲಾ, ಫಸಲ್ ಭೀಮಾ ಯೋಜನೆಯಡಿಯಲ್ಲಿ ರೈತರಿಗೆ ವಿಮಾ ಹಣ ಪಾವತಿಯಾಗಿಲ್ಲ, ನರ್ಬಾಡ್ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಅನುದಾನ ಕಡಿತವಾಗಿದ್ದರೂ ಬಿಜೆಪಿ ಹೋರಾಟ ಮಾಡುತ್ತಿಲ್ಲ, ರಾಜಕೀಯಕ್ಕಾಗಿ ಹೋರಾಟ ಮಾಡುವುದಕ್ಕಿಂತ ಜನಪರ,ರೈತರ ಪರ ಬಿಜೆಪಿ ಹೋರಾಟ ಮಾಡಲಿ ಎಂದರು.
ಎಂಎಸ್ಪಿಗೆ ಕಾನೂನು ರೂಪಿಸಿ :
ರೈತರ ಬೆಳೆದ ಬೆಳೆಗಳಿಗೆ ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆ( ಎಂಎಸ್‍ಪಿ)ಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಬೆಳೆಗಳ ಖರೀದಿ ಮಾಡಲಾಗುತ್ತಿದೆ. ಆದರೆ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯುವ ಬದಲು ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸದಂತೆ ವಿಶೇಷ ಕಾನೂನು ರೂಪಿಸಿದರೆ ರೈತರ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಚಾಮರಸ ಮಾಲಿಪಾಟೀಲ್ (Chamaras Malipatil ) ಹೇಳಿದರು.
ಡಿಸೆಂಬರ್ 8ರಂದು ಕಾರ್ಯಾಕಾರಿ ಸಭೆ :
ಎಪಿಎಂಸಿಯಲ್ಲಿ ರೈತರ ಶೋಷಣೆ,ನರ್ಬಾಡ್ ಅನುದಾನ ಕಡಿತ, ವಕ್ಫ್ ಹೆಸರು ತೆಗೆದು ಹಾಕುವ ಕುರಿತಾಗಿ ಮುಂದಿನ ಹೋರಾಟ ರೂಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಡಿಸೆಂಬರ್ 8ರಂದು ರೈತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಹೋರಾಟ ರೂಪಿಸಲಾಗುತ್ತಿದೆ ಎಂದರು. ಈ ವೇಳೆ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಅಮರಣ್ಣ ಗುಡಿಹಾಳ, ರಾಜ್ಯ ಕಾರ್ಯದರ್ಶಿ ಸೂಗರಯ್ಯ ಆರ್.ಎಸ್.ಮಠ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಮಾಲಿಪಾಟೀಲ್, ತಾಲೂಕಾದ್ಯಕ್ಷ ಮಲ್ಲನಗೌಡ ಗೌಡೂರು, ಚಂದಾವಲಿ ಸೇರಿದಂತೆ ಇನ್ನಿತರಿದ್ದರು.