ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನಾಚರಣೆ
ಲಿಂಗಸುಗೂರು : ದೇಶ ಎಷ್ಟೇ ಮುಂದುವರಿದಿದ್ದರೂ ದೇಶವನ್ನು ಕಾಡುತ್ತಿರುವ ಬಾಲ್ಯ ವಿವಾಹ (Child marriage )ಪದ್ಧತಿ ನಿರ್ಮೂಲನೆ ಮಾಡಿ ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣ ತೊಡಬೇಕು ಎಂದು ಜೆಎಂಎಫ್‍ಸಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಉಂಡಿ ಮಂಜುಳಾ ಹೇಳಿದರು.
ತಾಲೂಕಿನ ಹಲ್ಕವಟಗಿ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯತ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆ ದಿನಾಚರಣೆ ಹಾಗೂ ಬಾಲ್ಯ ವಿವಾಹ ( Child marriage )ಮುಕ್ತ ಭಾರತ ಅಭಿಯಾನ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ, ತಂತ್ರಜ್ಞಾನ, ವಿಜ್ಞಾನ ಕ್ಷೇತ್ರಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಕೂಡಾ ಬಾಲ್ಯ ವಿವಾಹ ಪಿಡುಗು ಇನ್ನೂ ಕಾಡುತ್ತಿರುವುದು ದುರಂತದ ಸಂಗತಿಯಾಗಿದೆ. ಬಾಲ್ಯ ವಿವಾಹ ಪಿಡುಗನ್ನು ನಿರ್ಮೂಲನೆ ಮಾಡಲು ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದರು. ಪಾಲಕರು ತಮ್ಮ ಹೆಣ್ಣು ಮಗುವಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡದೇ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಮಹಿಳೆಯರ ಸಮಗ್ರ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಸರಕಾರ ಹಲವಾರು ಯೋಜನೆಯೊಂದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದು, ಪ್ರತಿ ಮಹಿಳೆಯು ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳುವತ್ತ ಮುಂದಾಗಬೇಕು ಎಂದರು.
ಅಧಿಕಾರ ನಡೆಸಲು ಸ್ವಾತಂತ್ರ್ಯ ನೀಡಿ :
ಮಹಿಳೆಯರು ಪುರುಷಷ್ಟೇ ಸಮ ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ನೀಡಿದೆ, ಈ ಹಿನ್ನಲೆಯಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ. ಮೀಸಲಾತಿ ಅನ್ವಯ ಚುನಾಯತರಾಗುವ ಮಹಿಳೆಯರು ಹೆಸರಿಗೆಷ್ಟೇ ಚುನಾಯಿತ ಸದಸ್ಯೆ ಆದರೆ ಅಧಿಕಾರ ನಡೆಸುವವರು ಅವರ ಪತಿ, ಅಣ್ಣ, ತಮ್ಮ, ತಂದೆಯಾಗಿದ್ದಾರೆ. ಪುರುಷರಿಗೆ ಮಹಿಳೆಯರು ಸಮ ಎನ್ನುವದರಲ್ಲಿ ಅರ್ಥವಿಲ್ಲ, ಈಗಾಗಿ ಮೀಸಲಾತಿ ಉದ್ದೇಶ ಸಾಕಾರಗೊಳ್ಳಬೇಕಾದರೆ ಮಹಿಳೆಯರಿಗೆ ಮೀಸಲಾತಿ ಜೊತೆ ಸ್ವತಂತ್ರ್ಯವಾಗಿ ಅಧಿಕಾರ ನಡೆಸುವ ಹಕ್ಕು ದೊರೆಯುವಂತಾಗಬೇಕೆಂದರು.
ಮಹಿಳೆಯರ ಮೇಲೆ ದೌರ್ಜನ್ಯ ನಿರ್ಮೂಲನೆಯಾಗಬೇಕು :
ಮಹಿಳೆಯರು ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಯಶಸ್ವಿ ಹಾದಿಯತ್ತ ಸಾಗುತ್ತಿದ್ದಾರೆ, ಆಕೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯುತ ಕಾರ್ಯದೊಂದಿಗೆ ಸಮಾಜದಲ್ಲಿ ತನ್ನದೆಯಾದ ಸ್ಥಾನ ಪಡೆದುಕೊಳ್ಳಲು ಸದಾ ಶ್ರಮಿಸುತ್ತಿರುತ್ತಾಳೆ. ಮಹಿಳೆಯರು ಪುರುಷರಷ್ಟೆ ಸಮಾನವಾಗಿ ದುಡಿಯುತ್ತಿದ್ದರೂ ಅವರ ಮೇಲೆ ಅನೇಕ ರೀತಿಯ ದೌರ್ಜನ್ಯಗಳು ನಡೆಯುತ್ತಿರುವುದು ದುರಂತ ಎಂದರು. ಸ್ತ್ರೀಯರು ತಮ್ಮ ಮೇಲೆ ನಡೆಯುವ ವರದಕ್ಷಿಣೆ ಕಿರುಕುಳ, ಅತ್ಯಾಚಾರದಂತಹ ಹಲವಾರು ಪಿಡುಗುಗಳ ವಿರುದ್ಧ ಒಗ್ಗಟಾಗಿ ಹೋರಾಡಬೇಕು. ಮಹಿಳೆಯರ ಮೇಲೆ ದೌರ್ಜನ್ಯಗಳು ಇಂದು ನಿನ್ನೆಯಿಂದ ನಡೆಯುತ್ತಿಲ್ಲ, ಅನಾಧಿ ಕಾಲದಿಂದಲೂ ನಡೆಯುತ್ತಲೇ ಇವೆ. ಮಹಿಳೆಯರು ಆಗುತ್ತಿರುವ ದೌರ್ಜನ್ಯ ಕಡಿವಾಣ ಹಾಕುವುದಲ್ಲ ದೇಶದಿಂದಲೇ ನಿರ್ಮೂಲನೆಯಾಗಬೇಕು ಎಂದರು.
ಪಾಶ್ಚಿಮಾತ್ಯ ಸಂಸ್ಕೃತಿ ಬೇಡ :
ದೇಶದಲ್ಲಿ ಶ್ರೀಮಂತವಾಗಿರುವ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡು ಎಷ್ಟು ಕುಟಂಬಗಳು ತಮ್ಮ ವೈವಾಹಿಕ ಜೀವನ ಹಾಳು ಮಾಡಿಕೊಂಡಿವೆ. ನಮ್ಮ ಸಂಸ್ಕೃತಿ ಮರೆಯಬಾರದು, ಸಂಸ್ಕೃತಿ ಮರೆತರೆ ನಮ್ಮ ಜೀವನವೇ ಅದೋಗತಿಗೆ ಹೋಗುತ್ತೆ ಎಂದರು.
ಸಮಾರಂಭದಲ್ಲಿ ಹಲ್ಕವಟಗಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಂಗಮ್ಮ ಗೌಂಡಿ, ಪ್ರಧಾನ ನ್ಯಾಯಾಧೀಶ ಅಂಬಣ್ಣ ಕೆ.ವಕೀಲರ ಸಂಘದ ತಾಲೂಕಾಧ್ಯಕ್ಷ ಭೂಪನಗೌಡ ಪಾಟೀಲ್, ಪಿಡಿಓ ರಾಮಣ್ಣ, ಮುಖ್ಯ ಶಿಕ್ಷಕ ಅನಿಲಕುಮಾರ ಸೋಮಪೂರು, ದೇವೆಂದ್ರ ನಾಯಕ ವಕೀಲರು, ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ, ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ, ಆದಪ್ಪ ಪಾಟೀಲ್ ವಕೀಲರು, ಹಾಗೂ ಇನ್ನಿತರಿದ್ದರು.