ಶ್ರೀ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಶರನ್ನವರಾತ್ರಿ
ಲಿಂಗಸುಗೂರು : ಬಾಳೆಹೊನ್ನೂರು ಶ್ರೀ ರಂಭಾಪುರಿ(Rambhapuri) ಜಗದ್ಗುರುಗಳವರ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ (Dussehra Dharma Sammelana) ಗದಗ ಜಿಲ್ಲೆ ರೋಣ ತಾಲೂಕು ಅಬ್ಬಿಗೇರಿ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಅಕ್ಟೋಬರ್ 3ರಿಂದ 12ರ ವರೆಗೆ ಜರುಗಲಿದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀರಶೈವ ಧರ್ಮ ಅತ್ಯಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ. ಜ್ಞಾನ ಕ್ರಿಯಾತ್ಮಕವಾದ ವೀರಶೈವ ಧರ್ಮ ಸಾಮಾಜಿಕ ಸಂವೇದನಾಶೀಲ ಗುಣಗಳನ್ನು ಹೊಂದಿದೆ. ಕಾಯಕ ಮತ್ತು ದಾಸೋಹದ ಮೂಲಕ ಆದರ್ಶ ಸಂಸ್ಕೃತಿ ಎತ್ತಿ ಹಿಡಿದ ಧರ್ಮವಾಗಿದೆ. ಪರಶಿವನ ಸದ್ಯೋಜಾತ ಮುಖದಿಂದ ಆವಿರ್ಭವಿಸಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು. ಯುಗ ಯುಗಗಳಲ್ಲಿ ಕೊಲನುಪಾಕ ಶ್ರೀ ಸ್ವಯಂಭು ಸೋಮೇಶ್ವರ ಮಹಾಲಿಂಗದಿ0ದ ಅವತರಿಸಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಭದ್ರಾ ನದಿ ತಟದಲ್ಲಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ ಸಂಸ್ಥಾಪಿಸಿ ಮಹಾಮುನಿ ಅಗಸ್ತರಿಗೆ ಶಿವಾದ್ರೆತ ತತ್ವ ಸಿದ್ಧಾಂತವನ್ನು ಬೋಧಿಸಿ ಉದ್ದರಿಸಿದ ಇತಿಹಾಸವಿದೆ. ನೂರಿಪ್ಪತ್ತು ಪರಮಾಚಾರ್ಯರು ಶ್ರೀ ಪೀಠವನ್ನು ಆರೋಹಣ ಮಾಡಿ ಜನಮನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಶ್ರೀ ಪೀಠ ಪರಂಪರೆಯ ಪೂರ್ವದ ಜಗದ್ಗುರುಗಳು ಶರನ್ನವರಾತ್ರಿ ದಸರಾ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾ ಬಂದಿರುವುದು ಸರ್ವರಿಗೂ ತಿಳಿದ ಸಂಗತಿಯಾಗಿದೆ. ಪ್ರಸ್ತುತ ಜಗದ್ಗುರುಗಳವರ ಕಾಲದಲ್ಲಿ ಇದೊಂದು ನಾಡ ಹಬ್ಬವಾಗಿ ಪರಿಣಮಿಸಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಳನ್ನು ಸಂವರ್ಧಿಸುವ, ಆಧ್ಯಾತ್ಮಿಕ ತಳಹದಿಯ ಮೇಲೆ ಸಾತ್ವಿಕ ಸತ್ವಶೀಲ ಸಮಾಜ ನಿರ್ಮಿಸುವ ಕಾರ್ಯಗಳನ್ನು ರಾಜ್ಯವ್ಯಾಪಿ ವಿಸ್ತಾರಗೊಳಿಸುತ್ತಿದ್ದಾರೆ. ಅಕ್ಟೋಬರ್ 3ರಿಂದ 12ವರಿಗೆ ಅಬ್ಬಿಗೇರಿಯಲ್ಲಿ ದಸರಾ ಧರ್ಮಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ದಸರಾ ಧರ್ಮಸಮ್ಮೇಳನ :
ಪ್ರತಿ ದಿನದ ಕಾರ್ಯಕ್ರಮಗಳು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು ಅಕ್ಟೋಬರ್ 3ರಂದು ಕೇಂದ್ರ ಜಲಶಕ್ತಿ ಹಾಗೂ ರೇಲ್ವೆ ಖಾತೆ ರಾಜ್ಯ ಸಚಿವ ವ್ಹಿ.ಸೋಮಣ್ಣ ದಸರಾ ಧರ್ಮ ಸಮ್ಮೇಳನ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕ ಚಂದ್ರು ಲಮಾಣಿ, ಗ್ರಾ.ಪಂ.ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಅಕ್ಕಮ್ಮ ಡೊಳ್ಳಿನ, ಕೆ.ಪ್ರಕಾಶ್, ಕೆ.ಎಮ್.ಸುರೇಶ್, ತೋಟಪ್ಪ ಕುರಡಗಿ, ಸಿ.ವಿ.ಚಂದ್ರಶೇಖರ್, ಕೆ.ಅಮರೇಶ ಪಾಟೀಲ ಭಾಗವಹಿಸುವರು.
ಅ.4ರಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ‘ರಂಭಾಪುರಿ ಬೆಳಗು’ ಬಿಡುಗಡೆ ಮಾಡುವರು. ಗಣಿ ಮತ್ತು ಭೂ ವಿಜ್ಞಾನ-ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ರಾಮಣ್ಣ ದೊಡ್ಡಮನಿ, ಟಿ.ಈಶ್ವರ, ಚಿತ್ರನಟ ದೊಡ್ಡಣ್ಣ, ದೇವರಮನೆ ಶಿವಕುಮಾರ ಭಾಗವಹಿಸುವರು. ಅ.5ರಂದು ಗುರು ಇಂಗ್ಲೀಷ ಕೃತಿಯನ್ನು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಬಿಡುಗಡೆ ಮಾಡುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷಿ ಹೆಬ್ಬಾಳಕರ್, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವರಾದ ಡಿ.ಎನ್.ಜೀವರಾಜ್, ಬಿ.ಆರ್.ಯಾವಗಲ್,ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಎಸ್.ಎಸ್.ಜ್ಯೋತಿಪ್ರಕಾಶ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅ.6ರಂದು ಮುಖ್ಯ ಅತಿಥಿಗಳಾಗಿ ಸಂಸದ-ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ಶಾಸಕ ಸಿ.ಸಿ.ಪಾಟೀಲ, ಪದ್ಮಶ್ರೀ ವಿಜಯ ಸಂಕೇಶ್ವರ, ಎಮ್.ಕೆ.ಪಟ್ಟಣಶೆಟ್ಟಿ, ವಿಜಯ ಬಾಬಣ್ಣ ಮೆಟಗುಡ್ಡ ಆಗಮಿಸುವರು.
ಅ.7ರಂದು ‘ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ’ ಕೃತಿಯನ್ನು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಬಿಡುಗಡೆ ಮಾಡುವರು. ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ವಿ.ಪ.ಸದಸ್ಯ ಸಲೀಂ ಅಹಮದ್, ಮಹಾಂತೇಶ ಕವಟಗಿಮಠ, ಗೀತಾ ಮಾಡಲಗೇರಿ ಸುಭಾಷ್ ಮ್ಯಾಗೇರಿ, ‘ ಫಕ್ಕೀರಪ್ಪ ಮಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಅ.8ರಂದು ‘ಕಾವ್ಯ ಕುಸುಮ’ ಕೃತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡುವರು. ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ನೇಮಿ ನಾಯಕ, ಮಾಜಿ ಶಾಸಕ ಡಿ.ಆರ್.ಪಾಟೀಲ, ಆನಂದಸ್ವಾಮಿ ಗಡ್ಡದ್ದೇವರಮಠ, ಸಂಯುಕ್ತ ಕಳಕಪ್ಪ ಬಂಡಿ ಮುಖ್ಯ ಅತಿಥಿಗಳಾಗಿರುವರು.
ಅ.9ರಂದು ಸಂಸದ-ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಗದ್ದೀಗೌಡರ, ಶಾಸಕರಾದ ಜಗದೀಶ ಗುಡಗುಂಟಿಮಠ, ಶರಣು ಸಲಗರ ಹುಬ್ಬಳ್ಳಿಯ ಬಸಯ ಹಿರೇಮಠ ಮುಖ್ಯ ಅತಿಥಿಗಳಾಗಿರುವರು. ಅ.10ರಂದು ಮುಖ್ಯ ಅತಿಥಿಗಳಾಗಿ ಶಾಸಕರಾದ ಭರತರೆಡ್ಡಿ, ಮಾನಪ್ಪ ವಜ್ಜಲ, ಟಿ.ಡಿ.ರಾಜೇಗೌಡ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ವೀರಣ್ಣ ಮತ್ತೀಕಟ್ಟಿ ಭಾಗವಹಿಸುವರು.
ಅ. 11ರಂದು ಕೇಂದ್ರ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ‘ರುದ್ರಗಣಾಧಿಪ ವೀರಭದ್ರ’ ಕೃತಿಯನ್ನು, ಎಂಎಲ್ಸಿ ಸಿ.ಟಿ.ರವಿ ‘ಶ್ರೀ ಪೀಠದ ವಾರ್ತಾ ಸಂಕಲನ’ ಬಿಡುಗಡೆ ಮಾಡುವರು. ಮಾಜಿ ಸಂಸದ ರಾಜ ಅಮರೇಶ್ವರ ನಾಯಕ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಆಂಧ್ರದ ಮಾಜಿ ವಿ.ಪ.ಸದಸ್ಯ ಗುಂಡಮಾಲೆ ತಿಪ್ಪೇಸ್ವಾಮಿ, ಆಂಧ್ರ ಪ್ರದೇಶದ ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ ಶಿವಾನಂದಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.ದಸರಾ ಧರ್ಮಸಮ್ಮೇಳನ
ಪ್ರಶಸ್ತಿ ಪ್ರದಾನ:
2024ನೇ ಸಾಲಿನ ‘ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ತೆಲಂಗಾಣದ ಆರ್.ಎಮ್.ಪ್ರಭುಲಿಂಗ ಶಾಸ್ತಿ ‘ರಂಭಾಪುರಿ ಯುವಸಿರಿ’ ಪ್ರಶಸ್ತಿಯನ್ನು ದಾವಣಗೆರೆ ಹೆಚ್.ಎಮ್,ಬಸವರಾಜಯ್ಯ(ಅಕ್ಕಿ ರಾಜು), ‘ವೀರಶೈವ ಸಿರಿ’ ಪ್ರಶಸ್ತಿಯನ್ನು ಶಾಸಕ ಜಿ.ಎಸ್.ಪಾಟೀಲ, ‘ಶಿವಾಚಾರ್ಯ ರತ್ನ’ಪ್ರಶಸ್ತಿಯನ್ನು ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಹಾಗೂ ‘ಸಾಧನ ಸಿರಿ’ ಪ್ರಶಸ್ತಿಯನ್ನು ನರೇಗಲ್ಲ-ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡುವರು.
ಉಪನ್ಯಾಸ :
ನವರಾತ್ರಿಯಲ್ಲಿ ನವಶಕ್ತಿ ಆರಾಧನೆ ಕುರಿತು ಡಾ.ಜಯಶ್ರೀ ಹೊಸಮನಿ, ಗುರು ಮಹಿಮೆಯ ಮಹತ್ವ ಕುರಿತು ಸಾಹಿತ್ಯ ಸಂಶೋಧಕ ಡಾ.ಅಡಿವೆಪ್ಪ ವಾಲಿ, ಜ್ಞಾನ ಸಾಧನೆಯಲ್ಲಿ ಸಿದ್ಧಾಂತ ಶಿಖಾಮಣಿಯ ಹಿರಿಮೆ ವಿಷಯವಾಗಿ ಎಮ್ಮಿಗನೂರು ಹಂಪಿಸಾವಿರದೇವರ ಮಠದ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಆಹಾರ-ಆರೋಗ್ಯ ಮತ್ತು ಆಧ್ಯಾತ್ಮ ಕುರಿತು ರಾಯಚೂರಿನ ಡಾ.ಅರುಣಾ ಹಿರೇಮಠ, ಸಾವಯವ ಕೃಷಿಯ ಮಹತ್ವದ ಬಗ್ಗೆ ಬೆಂಗಳೂರಿನ ಕೃಷಿ ತಜ್ಞ ಆನಂದ ಆಶೀಷರ್, ಧಾರ್ಮಿಕತೆಯಲ್ಲಿ ಮಹಿಳೆಯ ಪಾತ್ರ ಕುರಿತು ತುಮಕೂರಿನ ಡಾ.ಮೀನಾಕ್ಷಿ ಖಂಡಿಮಠ, ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ರಾಷ್ಟ ಪ್ರಜ್ಞೆ ವಿಷಯವಾಗಿ ಮೈಸೂರಿನ ಚಿಂತಕ ಎ.ಆರ್.ರಘುರಾಮ್ ಉಪನ್ಯಾಸ ನೀಡುವರು.
ಗುರುರಕ್ಷೆ:
ಸಮಾಜದ ವಿವಿಧ ರಂಗಗಳ ಗಣ್ಯರಿಗೆ, ಸ್ವಾಮೀಜಿಗಳಿಗೆ ಪ್ರತಿದಿನದ ಕಾರ್ಯಕ್ರಮದಲ್ಲಿ ಗುರುರಕ್ಷೆ ನೀಡಲಾಗುವುದು.
ಮಠಾಧೀಶರ ಉಪಸ್ಥಿತಿ: ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ವೀರಭದ್ರ ಶಿವಾಚಾರ್ಯರು, ನರೇಗಲ್-ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯರನ್ನು ನಾಡಿನ ವಿವಿಧ ಮಠಾಧೀಶರು ಭಾಗವಹಿಸುವರು. ಇಷ್ಟಲಿಂಗ ಮಹಾಪೂಜಾ: ವಿಶ್ವಶಾಂತಿ ಲೋಕಲ್ಯಾಣಕ್ಕಾಗಿ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಅಬ್ಬಿಗೇರಿ ನರೇಗಲ್ಲ ರಸ್ತೆಯ ಹೊಸ ಹಿರೇಮಠದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ನಡೆಯುವುದು.
ಅಕ್ಟೋಬರ್ 2ರಂದು ಸಂಜೆ 4 ಗಂಟೆಗೆ ಅಬ್ಬಿಗೇರಿಗೆ ಆಗಮಿಸುವ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭವ್ಯವಾಗಿ ಸ್ವಾಗತಿಸಲಾಗುವುದು. ದಿನಾಂಕ 12ರಂದು ವಿಜಯದಶಮಿಯ ದಿವಸ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆಗಾಗಿ ತಾವೇ ಸ್ವತ: ಕುಂಭ ಹೊತ್ತು ಅಗ್ರೋದಕ ತರುವರು. ಪ್ರತಿ ದಿನದ ಸಮಾರಂಭದ ನಂತರ ಶ್ರೀ ಪೀಠದ ಸಿಬ್ಬಂದಿ, ಧರ್ಮಾಭಿಮಾನಿಗಳಿಂದ ನಜರ್(ಗೌರವ) ಸಮರ್ಪಣೆ ನಡೆಯುವುದು.ಅಕ್ಟೋಬರ್ 7ರಂದು ರೋಣ ಕೃಷಿ ಇಲಾಖೆಯ ಸಹಕಾರದೊಂದಿಗೆ ‘ಕೃಷಿ ಮೇಳ’ ನಡೆಯುವುದು. ದಿನಾಂಕ 8ರಂದು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. ಸಮಾರಂಭದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅನ್ನ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.