ದೀಪಗಳ ಹಬ್ಬಕ್ಕೆ ಖರೀದಿ ಭರಾಟೆ :
ಲಿಂಗಸುಗೂರು : ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ (Deepavali festival )ಎಲ್ಲಡೆ ಮನೆ ಮಾಡಿದೆ, ಹಬ್ಬದ ಪೂಜೆಗಾಗಿ ವಿವಿಧ ಸಾಮಾಗ್ರಿಗಳ ಖರೀದಿಗಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂದಿದೆ.
ದೀಪಾವಳಿ ಹಬ್ಬದ ಅಂಗವಾಗಿ ಮನೆಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಅಂಗಡಿಯಲ್ಲಿ ಪೂಜೆಗಾಗಿ ವಿವಿಧ ಸಾಮಾಗ್ರಿಗಳ ಖರೀದಿಗಾಗಿ ಪಟ್ಟಣದ ಗಡಿಯಾರ ವೃತ್ತದಲ್ಲಿ ಮಾರುಕಟ್ಟೆಯ ಖರೀದಿ ಭರಾಟೆ ಜೋರಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆ ಸಂಭ್ರಮ, ಉತ್ಸಾಹ ಕಾಣಸಿಗುತ್ತಿದೆ. ಮಾರುಕಟ್ಟೆಯಲ್ಲಿ ಬಗೆಬಗೆಯ ವಸ್ತುಗಳ ಖರೀದಿಯೂ ಜೋರಾಗಿ ನಡೆದಿದೆ. ಬಗೆಬಗೆಯ ಆಕರ್ಷಕ ಹಣತೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಪಣತಿ :
ದೀಪದ ಹಬ್ಬಕ್ಕೆ ಮೊದಲಿನಿಂದಲೂ ಮಣ್ಣಿನ ಪಣತಿಗಳಲ್ಲಿ ದೀಪ ಬೆಳಗುವ ಸಂಪ್ರದಾಯವಿದೆ. ಮಣ್ಣಿನ ಪಣತಿಗಳಿಗೆ ಪೈಪೋಟಿ ನೀಡಲು ಈಗ ಕೃತಕ ಪಣತಿಗಳು ಕೂಡ ಬಂದಿವೆ. ಪ್ಲಾಸ್ಟಿಕ್, ಬಣ್ಣಬಣ್ಣದ ಪಣತಿ, ಕೃತಕ ದೀಪದ ವ್ಯವಸ್ಥೆ ಹೀಗೆ ಬೇರೆ ಬೇರೆ ಸ್ವರೂಪದಲ್ಲಿ ಆಕರ್ಷಿಸುತ್ತವೆ. ಪಣತಿಗಳು ಮೊದಲೆಲ್ಲ ಬೀದಿ ಬದಿ ವ್ಯಾಪಾರಿಗಳ ಬಳಿ ಹೆಚ್ಚು ಸಿಗುತ್ತಿದ್ದವು. ಈಗ ಮಾಲ್‌ಗಳಲ್ಲಿ, ಪ್ರತಿಷ್ಠಿತ ಮಳಿಗೆಗಳಲ್ಲಿ ಅಲ್ಲದೇ ಕಿರಾಣಿ ಅಂಗಡಿಗಳಲ್ಲೂ ದೊರೆಯುತ್ತಿವೆ. ಸಣ್ಣ ಆಕಾರದವು ಅಲ್ಲದೇ ದೊಡ್ಡದಾದ ಪಣತಿಗಳು ಲಭ್ಯವಿದ್ದು, ಆಸಕ್ತರು ಅವುಗಳ ವಿನ್ಯಾಸ ಮತ್ತು ಆಕೃತಿ ಅನುಸಾರ ಖರೀದಿ ನಡೆಸಿದ್ದಾರೆ.
ಆಕರ್ಷಕಮಯ ಸಾಮಾಗ್ರಿಗಳು:
ಆಕಾಶಬುಟ್ಟಿಗಳು ಸ್ಥಳೀಯರ ಗಮನ ಸೆಳೆದಿದ್ದು, ಮಾರಾಟ ಜೋರಾಗಿದೆ. ಆಕಾಶ ಬುಟ್ಟಿಗಳು, ರಂಗು ರಂಗಿನ ರಂಗೋಲಿಗಳು, ಮನೆಯ ಅಲಂಕಾರಕ್ಕೆ ವಿವಿಧ ಪ್ಲಾಸ್ಟಿಕ್ ಹೂಗಳ ತೋರಣ ಮಹಿಳೆಯರನ್ನು ತಮ್ಮ ಕಡೆ ಸೆಳೆಯುತ್ತವೆ.
ಬಟ್ಟೆ ಖರೀದಿಯೂ ಜೋರು :
ದೀಪಾವಳಿ ಹಬ್ಬದ ಹಿಂದೂಗಳ ಪಾಲಿಗೆ ದೊಡ್ಡ ಹಾಗೂ ಪವಿತ್ರ ಹಬ್ಬವಾಗಿದೆ, ಮನೆಯಲ್ಲಿ ಮತ್ತು ಅಂಗಡಿಯಲ್ಲಿ ಪೂಜೆ ಇರುವುದರಿಂದ ಕಳೆದ ವಾರದಿಂದ ಪಟ್ಟಣದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಜನಗಳಿಂದ ತುಂಬಿ ತುಳುಕುತ್ತಿರುವ ದೃಶ್ಯ ಕಂಡು ಬಂತು. ಮಾರುಕಟ್ಟೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಬಟ್ಟೆ ಖರೀದಿ ಜೋರಾಗಿದ್ದು, ಜನರು ಬಟ್ಟೆ ಖರೀದಿಗೆ ಮುಗಿಬಿದ್ದು ವ್ಯಾಪಾರವು ಹೆಚ್ಚಗಿದೆ ಎಂದು ಮಾರುಕಟ್ಟೆಯ ಬಟ್ಟೆ ವ್ಯಾಪಾರಸ್ಥರು ತಿಳಿಸಿದ್ದಾರೆ.
ದರ ಹೆಚ್ಚಿದ್ದರೂ ಖರೀದಿ ಜೋರು :
ದೀಪಾವಳಿ ಹಬ್ಬದ ಸಂದರ್ಭದಲ್ಲಿ ವರ್ಷದಿಂದ ವರ್ಷಕ್ಕೆ ಸಾಮಾಗ್ರಿಗಳ ದರ ಹೆಚ್ಚಾಗುತ್ತಲೇ ಇರುವುದು ಸಾಮಾನ್ಯ ಸಂಗತಿಯಾಗಿದೆ. ಪೂಜೆಗೆ ಬೇಕಾಗುವ ಬಾಳೆಗಿಡಗಳು ಜೋಡಿಗೆ 50 ರೂ ರಿಂದ 500ವರಿಗೆ ಬೆಲೆ ಇತ್ತು, ಹೂವುಗಳು ಮಳಯೊಂದಕ್ಕೆ 50 ರೂ, ಅಡಕಿ ಹೂವಿನ ಹಾಗೂ ಚೆಂಡವೂ ಹೂವಿನ ಗಿಡ ಜೋಡಿಗೆ 50 ರೂಪಾಯಿ ಯಿಂದ ಪ್ರಾರಂಭ, ಒಂದು ಕೆ.ಜಿ. ಸೇಬಿಗೆ 150ರಿಂದ 170 ರೂ., ದ್ರಾಕ್ಷಿ 90 ರೂ., ಕಿತ್ತಳೆ 45ರಿಂದ 50 ರೂ., ದಾಳಿಂಬೆ 150ರಿಂದ 200 ರೂ., ಸಪೋಟ 65 ರೂ., ಬಾಳೆ ಹಣ್ಣು 50 ರೂಪಾಯಿಗೆ ಡಜನ್, ಮೂಸಂಬಿ 200 ರೂ., ಸೀತಾಫಲ 150 ರೂ.ಗಳಿಗೆ ಮಾರಾಟ ಮಾಡಲಾಯಿತು.
ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ :
ಪ್ರತಿವರ್ಷ ಗಡಿಯಾರ ವೃತ್ತದಲ್ಲಿಯೇ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿತ್ತು, ಆದರೆ ಈ ವರ್ಷ ತಾಲೂಕು ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟಕ್ಕೆ ತಾಲೂಕು ಆಡಳಿತ ಅನುಮತಿ ನೀಡಿದೆ. ಈಗಾಗಿ ತಾಲೂಕಾ ಕ್ರೀಡಾಂಗಣದಲ್ಲಿ ಐದು ಪಟಾಕಿ ಮಾರಾಟ ಮಳಿಗೆಗಳು ಹಾಕಲಾಗಿತ್ತು. ತಾಲೂಕು ಕ್ರೀಡಾಂಗಣ ದೂರವಾಗುತ್ತಿದ್ದರಿಂದ ಮೇಲಾಗಿ ತಾಲೂಕು ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟ ಮಳಿಗೆಗಳು ಹಾಕಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇರದ ಕಾರಣ ಪಟಾಕಿಗಾಗಿ ಹುಡುಕಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು, ಆದರೆ ಈಗ ತಾಲೂಕು ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.