ರಂಗಭೂಮಿ ಕಾರ್ಯಾಗಾರ :
ಲಿಂಗಸುಗೂರು :ನಾಟಕವೆಂದರೆ (Drama) ಕೇವಲ ಮನರಂಜನೆಯಲ್ಲ ನಮ್ಮ ಬದುಕನ್ನೇ ಮಾರ್ಪಾಡು ಮಾಡುವ ಕಲೆಯಾಗಿದೆ ಎಂದು ಕರ್ನಾಟಕ ನಾಟಕ (Drama )ಅಕಾಡೆಮಿ ಸದಸ್ಯ ಕೆ.ಎ.ಬನ್ನಟ್ಟಿ ಹೇಳಿದರು.
ಪಟ್ಟಣದ ಸಂಗಮೇಶ್ವರ ಪದವಿ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಚಿಕ್ಕಹೆಸರೂರು ವಿಜಯಲಕ್ಷ್ಮೀ ಮಹಿಳಾ ಸ್ವ-ಸಹಾಯ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿಗಳ ರಂಗಭೂಮಿ ಕಾರ್ಯಾಗಾರ, ನಾಟಕ ತಯಾರಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಭೂಮಿ ಶ್ರೀಮಂತ ಇತಿಹಾಸ ಹೊಂದಿದೆ. ಚಲನಚಿತ್ರಗಳಿಗೆ ಅಡಿಪಾಯವಾಗಿದೆ. ಆದರೆ ಇಂದು ಅಳವಿನಂಚಿನಲ್ಲಿರುವ ರಂಗಭೂಮಿ ಕಲೆ ಮತ್ತಷ್ಟು ಜೀವಂತವಾಗಿಡಲು ಸರ್ಕಾರ (Drama )ನಾಟಕ ಅಕಾಡೆಮಿ ಮೂಲಕ ನಾನಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.
ಶಿಬಿರದ ಮೂಲಕ ನಾಟಕ ತಯಾರಿ :
ಸಮಾರಂಭದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಪಕ, ರಂಗ ನಿರ್ದೇಶಕ ಡಾ.ಪ್ರಭುರಾಜ ಮಾತನಾಡಿ, ಇಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ 371 ಜೆ ಮೀಸಲಾತಿ ಬಗ್ಗೆ ಇನ್ನುಳಿದ ಭಾಗದವರು ಅಪಸ್ವರ ಕೇಳಿಬರುತ್ತಿದೆ. ಆದರೆ ನಾವು ಮೀಸಲಾತಿಯನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿವೋ ಅಥವಾ ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಿವೋ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಭಾಗದ ನೆಲ,ಜಲದ ಮಹತ್ವ ಮರೆಯುತ್ತಿರುವ ಕಾಲಘಟ್ಟದಲ್ಲಿರುವ ನಮಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ಕಲ್ಯಾಣ ಕ್ರಾಂತಿ ಕುರಿತು ಕಾಲೇಜು ವಿದ್ಯಾರ್ಥಿಗಳು ಮಹಾ ಚೈತ್ರ ನಾಟಕ ಪ್ರದರ್ಶನ ನೀಡಿದ್ದಾರೆ. ಸಂಗಮೇಶ್ವರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ರಂಗಭೂಮಿ ಕಾರ್ಯಾಗಾರ ನಡೆಸಲು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರು ಅನುಮತಿ ನೀಡಿದ್ದರಿಂದ ಕಳೆದ 15ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಂಗಭೂಮಿ ಮಹತ್ವ, ನಾಟಕ ತಯಾರಿ ಬಗ್ಗೆ ವಿಶೇಷ ಕಾರ್ಯಾಗಾರ ನಡೆಸಲಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಬಸವರಾಜ ವೈ ಮಾತನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆ ರಂಗಭೂಮಿ ಬಗ್ಗೆ ಆಸಕ್ತಿ ಬೆಳಸಿಕೊಳ್ಳಲಿ ಎಂಬ ಉದ್ದೇಶದಿಂದ ರಂಗಭೂಮಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾಚೈತ್ರ ನಾಟಕ ಪ್ರದರ್ಶನ :
ಪ್ರೋ.ಹೆಚ್.ಎಸ್.ಶಿವಪ್ರಕಾಶ ರಚನೆಯ ಹಾಗೂ ಡಾ.ಪ್ರಭುರಾಜ ನಿರ್ದೇಶನದ ರಂಗಭೂಮಿ ಕಾರ್ಯಾಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳ ಮಹಾಚೈತ್ರ ನಾಟಕ ಪ್ರದರ್ಶನ ನೋಡಗರನ್ನು ಮೂಕವಿಸ್ಮಿತಗೊಳಿಸಿತು.
ಸಮಾರಂಭವನ್ನು ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ ಉದ್ಘಾಟಿಸಿದರು. ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ, ಪ್ರಾಧ್ಯಾಪಕರಾದ ಮಂಜುನಾಥ್ ಕಾಮಿನ್,ಡಾ.ಕೆ.ಶಶಿಕಾಂತ, ಬಸವರಾಜ ಖೈರವಾಡಗಿ,ಭೀಮಸಿಂಗ್ ನಾಯ್ಕ, ಬೀರಪ್ಪ ಜಗ್ಗಲ್ ಸೇರಿದಂತೆ ಇನ್ನಿತರಿದ್ದರು.