ಶಾಸಕ ವಜ್ಜಲ್ ಗೆ ಮಾಜಿ ಶಾಸಕ ಹೂಲಗೇರಿ ಸಲಹೆ
ಲಿಂಗಸುಗೂರು : ಹೆಲಿಕ್ಯಾಪ್ಟರ್ ಕ್ಯಾಪ್ಟರ್ ನಲ್ಲಿ ತಿರುಗಾಡಿದರೆ ಜನರ ಸಮಸ್ಯೆ ನಿಮ್ಮ ಅರಿವಿಗೂ ಬರೋಲ್ಲ ಮೇಲಾಗಿ ಪರಿಹಾರವೂ ಆಗೋಲ್ಲ, ಹೆಲಿಕ್ಯಾಪ್ಟರ್ ಬಿಟ್ಟು ಜನರ ಜೊತೆ ಬೆರತು ಕೆಲಸ ಮಾಡುವುದನ್ನು ಶಾಸಕ ಮಾನಪ್ಪ ವಜ್ಜಲ್ ಮೊದಲು ಕಲಿಯಬೇಕು ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ (Ex MLA Hulageri )ಕಿವಿ ಮಾತು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ರೈತರು ಅನುಭವಿಸುವ ವಾಸ್ತವ ಸಮಸ್ಯೆಗಳ ಬಗ್ಗೆ ಶಾಸಕ ಮಾನಪ್ಪ ವಜ್ಜಲ್ ಅವರಿಗೆ ಅರಿವಿಲ್ಲ, ಇತ್ತೀಚಿಗೆ ನಾರಾಯಣಪುರದ ಕೆಬಿಜೆಎನ್‍ಎಲ್ ಕಚೇರಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಕೆರೆ ತುಂಬಿಸುವ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಆದರೆ ಮೊದಲು ಈಗಿರುವ ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ಯೋಜನೆಗಳ ವಿತರಣಾ ನಾಲೆಗಳು ಮುಚ್ಚಿಹೋಗಿವೆ, ರೈತರ ಜಮೀನಿಗೆ ನೀರು ಹರಿಯುತ್ತಿಲ್ಲ, ಇದರಿಂದ ರೈತರು ಸಂಕಷ್ಟು ಅನುಭವಿಸುತ್ತಿದ್ದಾರೆ ಮೊದಲು ಕೊನೆ ಭಾಗದ ರೈತರ ಜಮೀನಿಗೆ ನೀರು ಹರಿಸುವ ಕೆಲಸ ಮಾಡಲಿ ಎಂದು ಕಿವಿಮಾತು ಹೇಳಿದರು.
ಹೆಲಿಕ್ಯಾಪ್ಟರ್ ನಲ್ಲಿ ತಿರುಗಾಡುವ ಶಾಸಕ :
ಮಾನಪ್ಪ ವಜ್ಜಲ್ ಅವರಿಗೆ ಕ್ಷೇತ್ರದ ಮೂರು ಭಾರಿ ಆಶೀರ್ವಾದ ಮಾಡಿ ಶಾಸಕರನ್ನಾಗಿ ಮಾಡಿದ್ದಾರೆ,ಆದರೆ ಕ್ಷೇತ್ರದ ಜನರು ಇಟ್ಟಿರುವ ವಿಶ್ವಾಸಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಶಾಸಕರು ತಿಂಗಳಿನಲ್ಲಿ ಕೇವಲ ನಾಲ್ಕೇ ದಿನ ಕ್ಷೇತ್ರದಲ್ಲಿರುತ್ತಾರೆ. ಬಂದರೂ ಅದು ಹೆಲಿಕ್ಯಾಪ್ಟರ್ ನಲ್ಲಿ ತಿರುಗಾಡುತ್ತಾರೆ, ಜನರ ಸಮಸ್ಯೆಗಳು ಶಾಸಕರಿಗೆ ಹೇಗೆ ಗೊತ್ತಾಗುತ್ತೆ, ಯಾವಗಾದರೂ ಒಮ್ಮೆ ಬಂದು ಅಧಿಕಾರಿಗಳ ಸಭೆ ಮಾಡಿದರೆ ಜನರು ಅನುಭವಿಸುವ ಸಮಸ್ಯೆ ಪರಿಹಾರವಾಗೋಲ್ಲ, ಜನರ ಬೆರತು ಕೆಲಸ ಮಾಡಬೇಕು. ನಾನು ಶಾಸಕನಾಗಿದ್ದ ವೇಳೆ ಕಾಲುವೆಗಳ ಮೇಲೆ ಬೈಕ್ ಮೇಲೆ ತಿರುಗಾಡಿ ನಾಲೆಗಳ ಸ್ಥಿತಿ ಗತಿ ಪರಿಶೀಲನೆ ನಡೆಸಿ ಪರಿಹರಿಸುವ ಕೆಲಸ ಮಾಡಿದ್ದೆ, ಆದರೆ ನೀವು ಮಾಡುತ್ತಿರುವುದು ಏನು..? ಎಂದು ಶಾಸಕ ವಜ್ಜಲರನ್ನು ಪ್ರಶ್ನಿಸಿದರು.
ರೈತರ ಬಗ್ಗೆ ಮೊಸಳೆ ಕಣ್ಣೀರು :
ಚುನಾವಣೆಯಲ್ಲಿ ಸೋತಿದ್ದ ಮಾನಪ್ಪ ವಜ್ಜಲ್ ತಮ್ಮದೇ ಬಿಜೆಪಿ ಸರಕಾರ ಇದ್ದಾಗ ಕಾಚಾಪುರ, ಅಂಬೇಡ್ಕರ್ ಹಾಗೂ ಅಮರೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದೀರಿ, ಏನು ಮಾಡದ್ದೀರಿ, ಆ ಯೋಜನೆಗಳು ಎಲ್ಲಿಗೆ ಬಂದವು, ಸುಮ್ಮನೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಬಿಟ್ಟು ಆ ಮೂರು ಯೋಜನೆಗಳನ್ನು ಜಾರಿಗೆ ತರಬೇಕು. ಮಾನಪ್ಪ ವಜ್ಜಲ್ ಮೂರು ಶಾಸಕರಾದರೂ ಲಿಂಗಸುಗೂರು ಪುರಸಭೆಗೆ ನೈಯಾ ಪೈಸೆ ಅನುದಾನ ನೀಡಿಲ್ಲ, ನಿಮಗೆ ಕ್ಷೇತ್ರದ ಅಭಿವೃದ್ಧಿ ಬೇಕಿಲ್ಲ, ನಿಮ್ಮ ಜೇಬು ತುಂಬಿದರೆ ಸಾಕು ಎಂದು ಹೂಲಗೇರಿ ಲೇವಡಿ ಮಾಡಿದರು.
400 ಕೋಟಿ ವಾಪಸ್ಸು ಕಟ್ಟಬೇಕು :
ಶಾಸಕ ಮಾನಪ್ಪ ವಜ್ಜಲ್ ಸಹೋದರ ಮಾಲಿಕತ್ವದ ಎನ್.ಡಿ.ವಡ್ಡರ್ ಮತ್ತು ಕಂಪನಿ ನಾರಾಯಣಪುರ ವಿತರಣಾ ನಾಲೆ ಆಧುನೀಕರಣ ಕಾಮಗಾರಿ ಮಾಡಿದ ಅವ್ಯವಹಾರದ ತನಿಖೆ ನಡೆದಿದೆ. ಈಗಾಗಲೇ 400 ಕೋಟಿ ರೂಪಾಯಿ ಸರಕಾರಕ್ಕೆ ವಾಪಸ್ಸು ಕಟ್ಟುವಂತೆ ವಜ್ಜಲ್ ಕಂಪನಿಗೆ ನೋಟಿಸ್ ಬಂದಿದೆ. ಆದರೆ ಇವರು ಹಣ ಕಟ್ಟಿಲ್ಲ, ನಾನು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನಕ್ಕೆ ತರುವೆ ಎಂದರು.
ಬಯ್ಯಾಪುರರಿಗೂ ಟಾಂಗ್ :
ರಾಂಪುರ ಏತ ನೀರಾವರಿ ಯೋಜನೆ ನಾಲೆಗಳಿಗೆ ನೀರು ಹರಿಸಿದ್ದರೆ ಹೋರಾಟ ಮಾಡುವುದಾಗಿ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಪತ್ರಿಕೆ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಬಯ್ಯಾಪುರ ಅವರು ಅನುಭವಿಗಳು ಕ್ಷೇತ್ರದಲ್ಲಿ ಮೂರು ಭಾರಿ ಶಾಸಕರಾಗಿದ್ದವರು, ಅವರು ಮೊದಲು ರಾಂಪುರ ನಾಲೆಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ಮಾಡಲಿ, ಕೊನೆ ಭಾಗದ ನಾಲೆಗಳಲ್ಲಿ ನೀರು ಹರಿಯದಂತಹ ಸ್ಥಿತಿ ನಿರ್ಮಾಣವಾಗಿದೆ ಇಂತಹ ದುಸ್ಥಿತಿಯಲ್ಲಿರುವ ನಾಲೆಗಳ ದುರಸ್ಥಿಗೆ ಹೋರಾಟ ಮಾಡಲಿ ಅದು ಬಿಟ್ಟು ನೀರು ಹರಿಯದ ನಾಲೆಗಳಿಗೆ ನೀರು ಹರಿಸುವಂತೆ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿರುವುದು ಸಮಂಜಸವಲ್ಲ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಮುಖಂಡರಾದ ಮಹ್ಮದ್ ರಫಿ, ಕಂಠೆಪ್ಪಗೌಡ, ಬಾಬಾಖಾಜಿ, ಸಂಜೀವ ಕಂದಗಲ್, ಸಂಜೀವಪ್ಪ ಹುನಕುಂಟಿ ಹಾಗೂ ಇನ್ನಿತರಿದ್ದರು.