ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಾವೇಶ
ಲಿಂಗಸುಗೂರು : ಮಹಿಳೆಗೆ ದಿನನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯ, ಕಿರಕುಳಗಳನ್ನು (Harassment )ಎದುರಿಸುತ್ತಲೇ ಬದುಕಬೇಕಾಗಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಹಟ್ಟಿ ಪಟ್ಟಣದ ಪೈ ಭವನದ ಆವರಣದಲ್ಲಿ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿನಿತ್ಯ ಮಹಿಳೆಯರ ಮೇಲೆ ದೌರ್ಜನ್ಯಗಳು ದಬ್ಬಾಳಿಕೆ, ಲೈಂಗಿಕ ಕಿರುಕುಳ,( Harassment )ಜಾತಿ ಧರ್ಮದ ಜನಾಂಗ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿದೆ. ಮೋದಿ ಸರ್ಕಾರದ ಭೇಟಿ ಪಡಾವ್ ಭೇಟಿ ಬಚಾವ್ ಘೋಷಣೆ ಘೋಷಣೆಗಳಾಗಿಯೇ ಉಳಿದಿವೆ. ಕಳೆದ 10 ವರ್ಷದ ಅವಧಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಾಳಿಯಿಂದಾಗಿ ಮಂಡ್ಯ, ಕಲಬುರ್ಗಿ, ಕೊಪ್ಪಳ, ತುಮಕೂರು, ರಾಯಚೂರು ಜಿಲ್ಲೆಗಳಲ್ಲಿ ಕಿರುಕುಳ (Harassment )ತಾಳಲಾರದ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಯೇತರ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಜನ ಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ನರೇಂದ್ರ ಮೋದಿ ಕಾರ್ಪೊರೇಟ್ ಕುಳಗಳ ಪರವಾಗಿ ಬಜೆಟ್ ನಲ್ಲಿ ಆದ್ಯತೆ ನೀಡಿ ಮಹಿಳಾ ಸಬಲೀಕರಣಕ್ಕೆ ಉದ್ಯೋಗ ಖಾತ್ರಿ ಯೋಜನೆ ಬ್ಯಾಂಕುಗಳಲ್ಲಿ ಮಹಿಳೆಯರಿಗೆ ಸಾಲ ಸೌಲಭ್ಯ ಕೊಡುವುದರಲ್ಲಿ ವಿಫಲವಾಗಿದೆ ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಮಾತನಾಡಿ, ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ, ಗ್ರಂಥಾಲಯ, ವಿದ್ಯುತ್ ದೀಪಗಳು, ಉತ್ತಮ ಪರಿಸರ ಇಲ್ಲದೇ ಜನ ಜ್ವಲಂತ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಇನ್ನೊಂದು ಕಡೆ ಮಟಕಾ, ಇಸ್ಪೀಟ್, ಕ್ರಿಕೇಟ್ ಬೆಟ್ಟಿಂಗ್, ಗಾಂಜಾ ದಂಧೆಗಳು ಪಟ್ಟಣ ಸೇರಿ ಸುತ್ತಮುತ್ತಲ ಗ್ರಾಮಗಳ ಕುಟುಂಬಗಳನ್ನು ಬೀದಿಗೆ ತಂದಿವೆ. ಸ್ಥಳೀಯ ಪೊಲೀಸ್ ಠಾಣೆ ಈ ದಂಧೆಗಳಲ್ಲಿ ಸಂಪೂರ್ಣವಾಗಿ ಶಾಮೀಲಾಗಿದೆ. ಇದರ ವಿರುದ್ಧವಾಗಿ ಮಹಿಳಾ ಸಂಘಟನೆ ಹೋರಾಟ ರೂಪಿಸಬೇಕು. ಜನರ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳು ಸ್ಪಂದಿಸದೇ ಅಸಡ್ಡೆ ತೋರುತ್ತಿದ್ದಾರೆ. ಹಟ್ಟಿಯ ಮಹಿಳೆಯರಿಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಶಕುಂತಲಾ ಪಾಟೀಲ್, ಕಾರ್ಯದರ್ಶಿ, ವರಲಕ್ಷ್ಮೀ, ಮುಖಂಡರಾದ ದಿಲ್ ಶಾದ್, ರಾಜೇಶ್ವರಿ, ಯಮನಮ್ಮ ನಾಯಕ್, ರಾಧಿಕಾ, ಉಮಾದೇವಿ, ನಾಗಮ್ಮ, ಹುಲಿಗೆಮ್ಮ, ಸಾಹಿರಾ ಬೇಗಂ, ಕುಮಾರಿ, ಲಕ್ಷ್ಮೀ ಒಡಕಿ, ಫಾತೀಮಾ, ಅಮೀನುದ್ದೀನ್ ಸಾಸಿಹಾಳ, ಚನ್ನಬಸವ ಅಂಬೇಡ್ಕರ್ ನಗರ, ನಿಂಗಪ್ಪ, ಹನೀಫ್, ಮಹಾಂತೇಶ್, ದಾವೂದ್, ಅಲ್ಲಾಭಕ್ಷ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನೂತನ ತಾಲೂಕು ಸಮಿತಿ ರಚನೆ :
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಸಮಿತಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವನಜಾಕ್ಷಿ, ಕಾರ್ಯದರ್ಶಿಯಾಗಿ ಸುಗಂಧಿ, ಉಪಾಧ್ಯಕ್ಷರಾಗಿ ಗಾಯತ್ರಿ, ಶಾಂತಕುಮಾರಿ, ಸಹಕಾರ್ಯದರ್ಶಿಯಾಗಿ ನಿಂಗಮ್ಮ ವೀರಾಪೂರು, ಈರಮ್ಮ ಭಂಡಾರಿ ಖಜಾಂಚಿಯಾಗಿ ದುರುಗಮ್ಮ ಆಯ್ಕೆಯಾದರು. ಒಟ್ಟು 19 ಸದಸ್ಯರನ್ನೊಳಗೊಂಡ ತಾಲೂಕು ಸಮಿತಿ ರಚನೆಯಾಯಿತು.
ಸಮಾವೇಶದಲ್ಲಿ ನಿರ್ಣಯಗಳು :
ಇದೇ ವೇಳೆ ಶಾಶ್ವತ ಕುಡಿಯುವ ನೀರು ಹಾಗೂ ಶೌಚಾಲಯಕ್ಕಾಗಿ ಹೋರಾಟ ರೂಪಿಸುವುದು ಸೇರಿದಂತೆ ಮಟಕಾ, ಇಸ್ಪೀಟ್, ಕ್ರಿಕೇಟ್ ಬೆಟ್ಟಿಂಗ್, ಗಾಂಜಾ ದಂಧೆಗಳ ವಿರುದ್ಧ ಹೋರಾಟ ರೂಪಿಸಲು ಸರ್ವಾನುಮತದಿಂದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
Table of Contents
: