ವಿದ್ಯಾರ್ಥಿಗಳೊಂದಿಗೆ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಸಂವಾದ
ಲಿಂಗಸುಗೂರು :ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಲ್ಲಿ ದುರಾಸೆ ಹೆಚ್ಚಾಗಿದ್ದರಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಎನ್. ಸಂತೋಷ ಹೆಗಡೆ (Jt.Santhosh Hegde ) ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಶಂಕರರೆಡ್ಡಿ ಕಲ್ಯಾಣ ಮಂಟಪದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಬುಧವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಸಮಾವೇಶ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದ್ಯಮ ಕ್ಷೇತ್ರವನ್ನು ಸಂವಿಧಾನದಲ್ಲಿ ಯಾವುದೇ ಆಧ್ಯತೆ ನೀಡಿಲ್ಲ, ಆದರೆ ಸಾರ್ವಜನಿಕರೇ ಪ್ರೀತಿಯಿಂದ ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಕಂಬ ಎಂದು ಒಪ್ಪಿಕೊಂಡಿದ್ದಾರೆ. ಸಮಾಜದಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ಪತ್ರಕರ್ತರಿಗೆ ಸಿಗಬೇಕಾದ ಸೌಕರ್ಯ ದೊರೆಯಬೇಕೆಂಬುದು ನನ್ನ ಒತ್ತಾಯವಾಗಿದೆ ಎಂದರು.
ಮೂರು ಅಂಗಗಳಲ್ಲಿ ದುರಾಸೆ ಹೆಚ್ಚಿದೆ :
ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳಲ್ಲಿ ದುರಾಸೆ ಹೆಚ್ಚಾಗಿದೆ ಇದರಿಂದ ಬ್ರಷ್ಟಚಾರ ಹೆಚ್ಚಾಗಲೂ ಕಾರಣವಾಗಿದೆ. ಅಂದು ತಮ್ಮ ಮಕ್ಕಳಿಗೆ ಇಂಜಿನಿಯರ್, ಡಾಕ್ಟರ್ ಆಗಬೇಕೆಂದು ಹೇಳುತ್ತಿದ್ದರು, ಆದರೆ ಇಂದು ನೀನು ರಾಜಕಾರಣಿಯಾಗಬೇಕು ಎಂದು ಹೇಳುತ್ತಿದ್ದಾರೆ ಇದನ್ನು ಗಮನಿಸಿದರೆ ಸಮಾಜ ಎತ್ತ ಸಾಗುತ್ತಿದೆ ಎಂಬುದು ಕಳವಳಕಾರಿಯಾಗಿದೆ.ಮೂರು ಅಂಗಗಳಿಗೆ ಹೋಗುವವರು ಇದೇ ಸಮಾಜದಿಂದ ಹೋಗುತ್ತಿದ್ದಾರೆ ಈಗಾಗಿ ಸಮಾಜ ಪರಿವರ್ತನೆ ಮಾಡುವ ಕೆಲಸವಾಗಬೇಕಾಗಿದೆ. ಅದು ಯುವಕರ ಕೈಯಲ್ಲಿದೆ ಎಂದರು. ಒಳ್ಳೆಯ ಕೆಲಸ ಮಾಡಿದವರಿಗೆ ಪ್ರೋತ್ಸಾಹಿಸಿ ಕೆಟ್ಟ ಕೆಲಸ ಮಾಡಿದವರಿಗೆ ಸಮಾಜದಲ್ಲಿ ತಕ್ಕಪಾಠ ಕಲಿಸುವ ಕೆಲಸವಾಗಬೇಕು ಎಂದರು.
ರಾಜಕಾರಣ ಶುದ್ಧೀಕರಣವಾಗಬೇಕು :
ಸಮಾಜದ ಬಗ್ಗೆ ಕಳಕಳಿ, ಪ್ರಮಾಣಿಕವಾಗಿ ಕೆಲಸ ಮಾಡುವ ಉದ್ದೇಶ ಇರುವ ಯುವಕರು ಹೆಚ್ಚಾಗಿ ರಾಜಕಾರಣಕ್ಕೆ ಬರಬೇಕು. ಈಗ ಅಶುದ್ಧವಾಗಿರುವ ರಾಜಕರಣ ಶುದ್ಧೀಕರಣಗೊಳಿಸಬೇಕಾಗಿದೆ.ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದ ಜವಬ್ದಾರಿ ಇಂದಿನ ಯು ಪೀಳಿಗೆ ಮೇಲೆ ಇದೆ ಎಂದರು.
ನೌಕರರಲ್ಲಿ ತೃಪ್ತಿಯೇ ಇಲ್ಲ :
ಅಂದು ಇರುವ ಸ್ವಲ್ಪ ಸಂಬಳದಲ್ಲಿ ತೃಪ್ತಿದಾಯಕ ಬದುಕು ಸಾಗಿಸಲಾಗುತ್ತಿತ್ತು, ಆದರೆ ಸಂಬಳ ಸಾಕಷ್ಟಿದ್ದರೂ ನೌಕರರಲ್ಲಿ ತೃಪ್ತಿಯೇ ಇಲ್ಲದಂತಾಗಿದೆ. ಶ್ರೀಮಂತರಾಗಲಿ ಯಾರೂ ಬೇಡ ಅನ್ನೋಲ್ಲ, ಆದರೆ ಕಾನೂನಿನ ಚೌಕಟ್ಟಿನಲ್ಲಿ ಆಗಬೇಕೇ ವಿನಾ: ಇನ್ನೂಬ್ಬರ ಜೇಬಿಗೆ ಕೈಹಾಕಿ, ಕಳ್ಳತನ ಮಾಡಿ ಶ್ರೀಮಂತರಾಗೋದು ಬೇಡವೆಂದರು. ಸಾಕಷ್ಟು ಹಣ ಗಳಿಸಿದರೂ ಅವರಿಗೆ ನೆಮ್ಮದಿ ಇಲ್ಲದಂತಾಗಿದೆ, ಯಾವಾಗ ಆದಾಯ ತೆರಿಗೆ, ಲೋಕಾಯುಕ್ತರು ದಾಳಿ ಮಾಡುತ್ತಾರೋ ಎಂಬ ಆತಂಕದಲ್ಲಿ ಜೀವನ ನಡೆಸುವಂತಹ ಸ್ಥಿತಿ ಕೆಲವು ನೌಕರರಲ್ಲಿ ಇದೆ ಎಂದರು.
ಅತ್ಯಾಚಾರಿಗಳಿಗಾಗಿ ಕಾನೂನು ಬದಲಾಗಬೇಕು :
ಸಂವಾದದಲ್ಲಿ ಅತ್ಯಾಚಾರಿಗಳಿಗೆ ಜೈಲು ಸೇರಿದ ನಂತರ ಜಾಮೀನು ಮೇಲೆ ಬಿಡುಗಡೆಯಾಗುತ್ತಾರೆ ನಂತರ ಸಾರ್ವಜನಿಕವಾಗಿ ತಿರುಗಾಡುತ್ತಾರೆ ಇದರಿಂದ ಅತ್ಯಾಚಾರಕ್ಕೊಳಗಾದ ಮಹಿಳೆ, ಬಾಲಕಿಗೆ ನ್ಯಾಯಸಿಕ್ಕವುದಾದರೂ ಹೇಗೆ..? ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ ಹೆಗ್ಡೆ, ಭಾರತದಲ್ಲಿ ಐದು-ಆರು ಹಂತದ ನ್ಯಾಯಾಲಯಗಳಿರುವುದರಿಂದ ಯಾವುದೇ ಅತ್ಯಾಚಾರಿ ಆರೋಪಿ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದು ಬಿಡುಗಡೆಯಾಗಬಹುದು, ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಲು ಭಾರತದ ಕಾನೂನಿನಲ್ಲಿ ಅವಕಾಶ ಇಲ್ಲ,ಆದರೆ ಅಮೇರಿಕಾ, ಸೇರಿ ಇತರೆ ದೇಶಗಳಲ್ಲಿ ಎರಡು ಹಂತದ ನ್ಯಾಯಾಲಯಗಳು ಇರುವದರಿಂದ ಅತ್ಯಾಚಾರಿಗಳಿಗೆ ಆದಷ್ಟು ಬೇಗ ಶಿಕ್ಷೆ ವಿಧಿಸಲಾಗುತ್ತಿದೆ. ಇಲ್ಲೂ ಕೂಡಾ ಕೆಲವು ಕಾನೂನು ಮಾಪಾರ್ಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಸಂಘಟನೆ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ಹನುಮಂತ ನಂದಿಹಾಳ, ಪಿಐ ಪುಂಡಲಿಕ ಪಟಾತಾರ್, ಭೂಪನಗೌಡ ಕರಡಕಲ್, ಪಾಮಯ್ಯ ಮುರಾರಿ, ಗುಂಡಪ್ಪ ನಾಯಕ, ಸೋಮಶೇಖರ್ ಐದನಾಳ, ಸೇರಿದಂತೆ ಇನ್ನಿತರಿದ್ದರು.