ಕರವೇಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಲಿಂಗಸುಗೂರು : ಅಖಂಡ ಕರ್ನಾಟಕದ ಏಕತೆಗೆ ಧಕ್ಕೆ ತರುವ ಕೆಲಸಗಳು ಅದರಲ್ಲೂ ರಾಜ್ಯೋತ್ಸವ ಸಂದರ್ಭದಲ್ಲಿ ಹೆಚ್ಚು ನಡೆಯುತ್ತಿವೆ, ದಕ್ಕೆ ತರುವ ಕೆಲಸಗಳ ವಿರುದ್ಧ ಹೋರಾಡಿ ಮನೆಮನಗಳಲ್ಲಿ ಕನ್ನಡದ ಕಿಚ್ಚನ್ನು ಹತ್ತಿಸಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಗಡಿಯಾರ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ತಾಲೂಕು ಘಟಕ ಹಮ್ಮಿಕೊಂಡಿದ್ದ ( Kannada Rajyotsava) ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡವೆಂದರೆ ಕೇವಲ ಭಾಷೆಯಲ್ಲ, ಅದು ಪ್ರತಿಯೊಬ್ಬ ಕನ್ನಡಿಗರ ಅಸ್ಮಿತೆಯಾಗಿದೆ. ಸ್ಪಷ್ಟ ಕನ್ನಡ, ಸ್ಪುಟ ಕನ್ನಡ, ನಮ್ಮ ನಾಲಿಗೆಗಳಲ್ಲಿ ನಲಿದಾಡಲಿ ಕನ್ನಡವು ಅಭಿಜಾತ ಭಾಷೆ ವೈಜ್ಞಾನಿಕ ತಳಹದಿಯ ಭಾಷೆ, ಗಡಿಗಳನ್ನು ಮೀರಿ ಕನ್ನಡ ಬೆಳೆಯಬೇಕು. ದೇಶದಲ್ಲಿ ಯಾವುದೇ ಪ್ರಾದೇಶಿಕ ಭಾಷೆ ಇರದ ಅಗ್ರಸ್ಥಾನ ಕನ್ನಡ ಭಾಷೆಗೆ ಇದೆ. ಕನ್ನಡದ ಎಂಟು ಮೇರು ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದೇ ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ. ಈ ಕನ್ನಡ ವಿಶ್ವವನ್ನು ಪಸರಿಸಲಿ ಕರ್ನಾಟಕವು ಅಖಂಡವಾಗಿ ಉಳಿಯಬೇಕು. ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಕೇಳಿಬರುತ್ತಿರುವುದು ಸರಿಯಲ್ಲ, ಉತ್ತರ,ದಕ್ಷಿಣ ಎಂಬ ಭೇದಭಾವ ಇಲ್ಲದೆ ಇಡೀ ಕರ್ನಾಟಕ ಒಂದೇ ಭಾವನೆ ನಮ್ಮಲ್ಲರಿಗೂ ಇರಬೇಕು. ಗಡಿವಿವಾದಗಳು ಕೇವಲ ಭೌಗೋಳಿಕ ಅಡೆತಡೆಗಳಾಗಿದ್ದು ಕನ್ನಡ ಮನಸುಗಳನ್ನು ವಿಶ್ವವ್ಯಾಪಿಯಾಗಿ ಬೆಳೆಸ ಬೇಕು.ಅಖಂಡ ಕರ್ನಾಟಕ ಒಡೆಯುವ, ಓಳಾಗದಂತೆ ನೋಡಿಕೊಳ್ಳುವ ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವಾಗಿದೆ ಎಂದರು.
ಉಸಿರಾಗಲಿ ಕನ್ನಡ :
1972ರಲ್ಲಿ ಮೈಸೂರು ರಾಜ್ಯಕ್ಕೆ ಅಂದಿನ ಮುಖ್ಯಮಂತ್ರಿ ಡಿ.ದೇವರಾಜು ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು, ಹೆಸರಾಯಿತು ಕನ್ನಡ, ಆದರೆ ಕನ್ನಡ ಉಸಿರಾಗಬೇಕು,ಮಾನ, ಪ್ರಾಣವಾಗಬೇಕಾಗಿದೆ. ನಮ್ಮ ತಾಯಿಗೆ ನೀಡಿದ ಪೂಜ್ಯನೀಯ ಸ್ಥಾನ ಕನ್ನಡ ಭಾಷೆಗೆ ನೀಡಬೇಕು. ಪ್ರಪಂಚ ಇರೋವರಿಗೂ ಕನ್ನಡ ಇರಬೇಕು ಎಂದರು.
ಕನ್ನಡದ ನೆಲಕ್ಕೆ ಕೈಹಾಕದಂತೆ ನೋಡಿಕೊಳ್ಳಿ :
ಗಡಿವಿವಾದದ ನೆಪದಲ್ಲಿ ಅಕ್ಕಪಕ್ಕದ ರಾಜ್ಯಗಳು ಕನ್ನಡದ ನೆಲ, ಜಲಕ್ಕೆ ಕೈಹಾಕುವ ಕೆಲಸ ಮಾಡುತ್ತಿವೆ, ಆದರೆ ಕನ್ನಡದ ನೆಲಕ್ಕೆ ಬೇರೆಯವರು ಕೈಹಾಕದಂತೆ ನೋಡಿಕೊಳ್ಳುವ ಜವಬ್ದಾರಿ, ಕರ್ತವ್ಯ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದರು.
ಕನ್ನಡ ನಿತ್ಯ ಭಾಷೆಯಾಗಿ ಬೆಳೆಯಬೇಕು :
ಕನ್ನಡವು ಕಲಿಕಾ ಮಾಧ್ಯಮವಾಗಬೇಕು ಯುವ ಪೀಳಿಗೆಯಲ್ಲಿ ಓದುವ ಅಭಿರುಚಿ ಹುಟ್ಟಿಸುವಂತಹ ಪ್ರಯತ್ನಗಳಾಗ ಬೇಕು. ಸಾಹಿತ್ಯಾಭಿರುಚಿ ಮೂಡಿಸಬೇಕು ಕನ್ನಡ ವ್ಯಾವಹಾರಿಕ ಭಾಷೆಯಾಗಿ, ನಿತ್ಯದ ಭಾಷೆಯಾಗಿ ಬೆಳೆಯಬೇಕು. ಕನ್ನಡವು ವಿಶ್ವದೆಲ್ಲೆಡೆ ಪಸರಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕನ್ನಡವು ಮೃತ ಭಾಷೆಯಾಗದೆ ಅಮೃತ ಭಾಷೆಯಾಗಬೇಕು. ಕನ್ನಡವು ಕನ್ನಡಿಗರ ಅಸ್ಮಿತೆ, ಕನ್ನಡಿಗರ ಹೆಗ್ಗುರುತು,ಕನ್ನಡವು ಮನಸಿನ-ಕನಸಿನ ಭಾಷೆಯಾಗಬೇಕು ಎಂದರು. ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಲ್ಲದಿದ್ದರೆ ಶೇ.80 ರಷ್ಟು ತಮಿಳರೇ ಆಳುತ್ತಿದ್ದರು, ಅನ್ಯರಾಜ್ಯದವರ ಪ್ರಭಾವ ಮತ್ತಷ್ಟು ತಗ್ಗಿಸಬೇಕಾಗಿದೆ ಎಂದರು.
ಸನ್ಮಾನ :
ಕರವೇಯಿಂದ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್, ಸಿಪಿಐ ಪುಂಡಲಿಕ ಪಟೇದಾರ್, ಗ್ರೇಡ್-2 ತಹಶೀಲ್ದಾರ ಬಸವರಾಜ ಝಳಕಿಮಠ, ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಜಿಲ್ಲಾ ವಕ್ತಾರ್ ಶಾಂತಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಅದ್ಧೂರಿ ಮೆರವಣಿಗೆ : ರಾಜ್ಯೋತ್ಸವ ನಿಮಿತ್ಯ ಕರವೇಯಿಂದ ತಾಯಿ ಭುವನೇಶ್ವರಿ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಕರವೇ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಕರವೇ ಕಚೇರಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು.
ಸಮಾರಂಭದಲ್ಲಿ ಇಲಕಲ್‍್‍ನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ, ಶಿರೂರು-ಸತ್ತಿ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ, ಮನಗೂಳಿ ವಿರಕ್ತ ಸಂಸ್ಥಾನದ ಮಠದ ವಿರತಿಶಾನಂದ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಪುರಸಭೆ ಮಾಜಿ ಅಧ್ಯಕ್ಷ ಖಾದರಪಾಶಾ, ಕರವೇ ತಾಲೂಕು ಗೌರವಾಧ್ಯಕ್ಷ ಭೂಪನಗೌಡ ಪಾಟೀಲ್, ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ಮಸ್ಕಿ ತಾಲೂಕು ಅಧ್ಯಕ್ಷ ದುರಗರಾಜ, ದೇವದುರ್ಗ ತಾಲೂಕಾಧ್ಯಕ್ಷ ನಂದಪ್ಪ, ಹನುಮಂತ ನಾಯಕ, ರವಿ ಬರಗುಂಡಿ, ಅಜೀಜ್ ಪಾಶಾ ಸೇರಿದಂತೆ ಇನ್ನಿತರಿದ್ದರು ಹಾಗೂ ಕಾರ್ಯಕ್ರಮವನ್ನು ಶಿಕ್ಷಕ ಶರಣಬಸವ ಕೆ.ಗುಡದಿನ್ನಿ ನಿರ್ವಹಿಸಿದರು.