ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ವಜ್ಜಲ್ ಗರಂ
ಲಿಂಗಸುಗೂರು : ನೀವು ಅಮಾಯಕರ ವಿರುದ್ಧ ದುರುದ್ದೇಶದಿಂದ ಕೇಸು ಹಾಕುವುದನ್ನು ಬಿಟ್ಟು ಮೊದಲು ತಾಲೂಕಿನಲ್ಲಿ ಅವ್ಯಾಹತವಾಗಿ ನಡೆದಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದು ಶಾಸಕ ಮಾನಪ್ಪ ವಜ್ಜಲ್ ಲಿಂಗಸುಗೂರು,ಹಟ್ಟಿ ಸಿಪಿಐಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ (KDP Meeting ) ಮಾತನಾಡಿದ ಅವರು, ತಾಲೂಕಿನಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದೇ ಮಟ್ಕಾ, ಜೂಜು, ಇಸ್ಟೀಟ್ ಆಟ ಬಹಿರಂಗವಾಗಿ ನಡೆಯುತ್ತಿದ್ದರೂ ಅಂತಹವರನ್ನು ರಕ್ಷಣೆ ಮಾಡಿ ಅಮಾಯಕರು ಪೊಲೀಸ್ ಸ್ಟೇಶನ್ ಮುಂದೆ ಬೈಕ್ ಸವಾರಿ ಮಾಡಿದರೆ ಅಂತಹವರನ್ನು ಹಿಡಿದು ದಂಡ ಹಾಕ್ತೀರಿ, ಯಾವೋದು ಹೊಲದಲ್ಲಿ ಡ್ರಿಂಕ್ಸ್ ಮಾಡಿದರೆ ಅಂತಹವರನ್ನು ಹಿಡಿದು ದಂಡ ಹಾಕ್ತೀರಿ, ಯಾವೋದು ಕೇಸ್ ಗೆ ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು, ಶಾಲಾ ಕಾಲೇಜು ಓದುತ್ತಿರುವ ವಿದ್ಯಾರ್ಥಿಗಳ ಹೆಸರನ್ನು ಕೇಸ್ ನಲ್ಲಿ ಸೇರಿಸಿ ಸುಳ್ಳು ಕೇಸು ಹಾಕಿ ಅವರ ಭವಿಷ್ಯಕ್ಕೆ ಕಲ್ಲು ಹಾಕುವ ದುರುದ್ದೇಶದ ಕೆಲಸ ಮೊದಲು ಬಿಡಬೇಕು, ನಿಪಕ್ಷಪಾತದಿಂದ ಕೆಲಸ ಮಾಡಬೇಕು ಎಂದು ಹಟ್ಟಿ, ಲಿಂಗಸುಗೂರು ಪಿಐಗಳಿಗೆ ತಾಕೀತು ಮಾಡಿದರು.
ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ :
ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ, ಇಸ್ಟೀಟ್ ಕ್ಲಬ್‍ಗಳು ಹೆಚ್ಚಾಗಿ ನಡೆಯುತ್ತಿದ್ದರಿಂದ ಅನೇಕ ಕುಟಂಬಗಳು ಬೀದಿ ಪಾಲಾಗುತ್ತಿದ್ದು, ಕೂಡಲೇ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಡಿವಾಣ ಹಾಕಬೇಕು. ಲಿಂಗಸುಗೂರು ಪಟ್ಟಣದ ಬಸ್ ನಿಲ್ದಾಣ ವೃತ್ತ, ಬೈಪಾಸ್ ರಸ್ತೆ, ಕಲಬುರಗಿ ರಸ್ತೆ, ಗಡಿಯಾರ ವೃತ್ತ, ಬಸವಸಾಗರ ವೃತ್ತ ಸೇರಿ ಪ್ರಮುಖ ಸ್ಥಳಗಳಲ್ಲಿ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗುತ್ತಿದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಸರ್ವಿಸ್ ರಸ್ತೆಗಳಲ್ಲಿ ಬೈಕ್ ನಿಲುಗಡೆ ಮಾಡುತ್ತಿದ್ದರಿಂದ ಆ್ಯಂಬಲೆನ್ಸ್ ಸುಗಮವಾಗಿ ಹೋಗಿ ಬರಲು ತೊಂದರೆಯಾಗುತ್ತಿದೆ, ಪುಟಪಾತ್ ಗಳಲ್ಲಿ ಡಬ್ಬಾ ಅಂಗಡಿಗಳಿಗೆ ಬಾಡಿಗೆ ವಸೂಲಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಪಿಐ ಪುಂಡಲಿಕ ಪಟೇದಾರ್ ರಿಗೆ ಸೂಚಿಸಿದರು.
ಕೆಲಸ ಮಾಡಿ ಇಲ್ಲವೇ ಇಲ್ಲಿಂದ ಹೋಗಿ :
ಕೆಡಿಪಿ ಸಭೆ ( KDP Meeting )ಎಂದರೆ ಕೆಲವು ಅಧಿಕಾರಿಗಳು ಹಗುರುವಾಗಿ ತೆಗೆದುಕೊಂಡಿದ್ದಾರಂತೆ ಕಾಣಿಸುತ್ತೆ, ಕೆಡಿಪಿ ಸಭೆ ಬರುವ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ವರದಿ ತರಬೇಕು, ನಿಮ್ಮ ವರದಿ ಆಧಾರಿಸಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ತಾಲೂಕಿನಲ್ಲಿರುವ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲು ಸಹಕಾರಿಯಾಗುತ್ತದೆ. ಇಲಾಖೆ ಪ್ರಗತಿ ವರದಿ ತರದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸುವೆ, ತಾಲೂಕಿನ ಅಭಿವೃದ್ಧಿ ಮನೋಭಾವನೆಯಿಂದ ಕೆಲಸ ಮಾಡಲು ಮನಸ್ಸು ಇದ್ದರೆ ಕೆಲಸ ಮಾಡಬಹುದು, ಆದರೆ ಬೇಕಾಬಿಟ್ಟಿ ಮಾಡಿದರೆ ನಾನು ಸಹಿಸೋಲ್ಲ, ಇಲ್ಲಿಂದ ಜಾಗ ಖಾಲಿ ಮಾಡಬಹುದು ಎಂದು ಶಾಸಕ ವಜ್ಜಲ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ನಾನು ಮೊದಲ ಭಾರಿಗೆ ಶಾಸಕನಾಗಿಲ್ಲ, ಮೂರನೇ ಭಾರಿಗೆ ಶಾಸಕನಾಗಿದ್ದೇನೆ, ನನಗೆ ಸಾಕಷ್ಟು ಅನುಭವ ಇದೆ, ನನಗೆ ಅನುಭವ ಇಲ್ಲ ಎಂದು ಕೆಲವು ಅಧಿಕಾರಿಗಳು ವರ್ತಿಸುತ್ತಿದ್ದಾರೆ ಅಂತಹ ಇಂತಹ ಮನೋಭಾವನೆಯಿಂದ ಹೊರಬಂದು ಕೆಲಸ ಮಾಡಿದರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.
ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಿ :
ಸಭೆಯಲ್ಲಿ ಜೆಸ್ಕಾಂ ಎಇಇ ಬನ್ನೆಪ್ಪ ಕರಿಬಂಟನಾಳ ಮಾತನಾಡಿ, 25 ಗಂಗಾಕಲ್ಯಾಣ ಯೋಜನೆಯ ಕಾಮಗಾರಿಗಳು ಪೆಂಡಿಂಗ್ ಇವೆ, ಆದರೆ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆ ಫಲಾನುಭವಿಗಳು ಟಿಸಿ ಅಳವಡಿಸುವಂತೆ ಒತ್ತಾಯ ಮಾಡುತ್ತಿದ್ದಾರೆ 75 ಸಾವಿರ ರೂಪಾಯಿಯಲ್ಲಿ ಕಾಮಗಾರಿ ಮಾಡಬೇಕಾಗಿದೆ, ಹತ್ತಿರದ ಟಿಸಿಯಿಂದ ವಿದ್ಯುತ್ ಸಂಪರ್ಕ ಒದಗಿಸಲು ಅವಕಾಶ ಇದೆ ಎಂದರು, ಗ್ರಾಮೀಣ ಪ್ರದೇಶದಲ್ಲಿ ಅನಧಿಕೃತ ವಿದ್ಯುತ ಸಂಪರ್ಕಗಳೇ ಹೆಚ್ಚಾಗಿರುವುದರಿಂದ ಖಾಯಂ ವಿದ್ಯುತ್ ಸಂಪರ್ಕ ಪಡೆಯಲು ಯಾರು ಮುಂದೆ ಬರುತ್ತಿಲ್ಲ, ಈಗಾಗಿ ಟಿಸಿ ಅಳವಡಿಸಲು ಅವಕಾಶ ಇಲ್ಲದಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು, ಯಾವುದೇ ಕೆಲಸ ಮಾಡಿ ಅದು ರೈತರಿಗೆ ಅನುಕೂಲವಾಗಬೇಕು ಅವರಿಗೆ ತೊಂದರೆಯಾಗಬಾರದು, ಗ್ರಾಮೀಣ ಜನರಿಗೆ ಖಾಯಂ ವಿದ್ಯುತ್ ಪಡೆಯಲು ಅರಿವು ಮೂಡಿಸುವಂತೆ ಶಾಸಕ ವಜ್ಜಲ್ ಸಲಹೆ ನೀಡಿದರು.
ಸ್ವಚ್ಚತೆ ಕಾಪಾಡಿ :
ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆ ಸೇರಿ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಚತೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಪಟ್ಟಣದಲ್ಲಿರುವ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳನ್ನು ಸಣ್ಣ ವಿಷಯಕ್ಕೂ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಸರ್ಕಾರ ಬಡವರಿಗಾಗಿ ಆಸ್ಪತ್ರೆಗಳನ್ನು ಮಾಡಿದೆ ಆದರೆ ವೈದ್ಯರು ವಿನಾಕಾರಣ ಖಾಸಗಿ ಆಸ್ಪತ್ರೆಗೆ ಕಳಿಸದಂತೆ ತಾಲೂಕು ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು.
ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪಿಆರ್ ಇಡಿ ಇಲಾಖೆಯಿಂದ ನಡೆದಿರುವ ಕಾಮಗಾರಿ ಪ್ರಾರಂಭ ಹಾಗೂ ಮುಕ್ತಾಯ ದಿನಾಂಕ ಇರುವ ಬೋರ್ಡ ಹಾಕಲಾಗಿದೆ, ಆದರೆ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ, ಆದರೂ ಮುಕ್ತಾಯ ದಿನಾಂಕ ಹಾಕುವುದು ಎಷ್ಟರಮಟ್ಟಿಗೆ ಸರಿ ಎಂದು ಎಇಇಗೆ ಪ್ರಶ್ನಿಸಿದರು. ಶಾಲಾ ಕೊಠಡಿ, ಶೌಚಾಲಯ, ಕುಡಿವ ನೀರಿನ ಯೋಜನೆ ಅನುಷ್ಠಾನ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವಂತೆ ಶಾಸಕ ವಜ್ಜಲ್ ಪಿಆರ್ ಇಡಿ ಎಇಇಗೆ ಸೂಚಿಸಿದರು.
ನೀರು ಪರೀಕ್ಷಿಸಿ :
ಕುಡಿವ ನೀರು ಸರಬರಾಜು ಮಾಡುವ ಮೊದಲು ನೀರನ್ನು ಪರೀಕ್ಷೆ ಮಾಡಬೇಕು, ನಾವೆಲ್ಲರೂ ಪ್ಲೂರೆಡ್ ಮುಕ್ತ ಕುಡಿವ ನೀರು ಪೂರೈಕೆಗೆ ಪ್ರಯತ್ನ ಪಡುತ್ತಿದ್ದರೆ ನೀವು ನೀರನ್ನು ಪರೀಕ್ಷೆ ಮಾಡದೇ ಹಾಗೇ ಸರಬರಾಜು ಮಾಡಿದರೆ ಹೇಗೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಆರ್ ಡಬ್ಲೂ ಎಸ್ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಈ ವೇಳೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸಣ್ಣ ಮೇಟಿ, ತಾ.ಪಂ ಆಡಳಿತಾಧಿಕಾರಿ ಡಾ.ರೋಣಿ, ತಹಶೀಲ್ದಾರ ಶಂಶಾಲಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.