ವಿವಿಧ ಧಾರ್ಮಿಕ ಪೂಜೆ ಕಾರ್ಯಕ್ರಮ
ಲಿಂಗಸುಗೂರು : ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23ರಂದು ಪ್ರತಿವರ್ಷದಂತೆ ಈ ವರ್ಷವೂ ಮಂಡಲ ಪೂಜಾ (Mandala Puja ) ಕಾರ್ಯಕ್ರಮ ಹಾಗೂ 8ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮನೋಹರ ರೆಡ್ಡಿ ಮುನ್ನೂರು ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23ರಂದು ದೇವಸ್ಥಾನದ 8ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ಸುಪ್ರಭಾತಂ, ನೈರ್ಮಲ್ಯ ದರ್ಶನಂ, ಕೇರಳದ ತಂತ್ರಿ ರತ್ನಾ ವೇದ ವಿಭೂಷಣ ಪ್ರಶಾಂತ ನಂಬೋದರಿ ಅವರಿಂದ ಮಹಾ ಗಣಪತಿ ಹೋಮ, ಅಯ್ಯಪ್ಪಸ್ವಾಮಿ ಹಾಗೂ ಉಪ ದೇವತೆಗಳಿಗೆ ವಿಶೇಷ ಪೂಜೆ, ಹೋಮ ಹವನ ನಡೆಯಲಿದೆ ಎಂದರು.
ಭವ್ಯ ಮೆರವಣಿಗೆ :
ಬೆಳಿಗ್ಗೆ 10.30ರಿಂದ 11.30ವರಿಗೆ ಈಶ್ವರ ದೇವಸ್ಥಾನದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನವರಿಗೆ ಅಯ್ಯಪ್ಪಸ್ವಾಮಿಗಳ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ದೀಪೋತ್ಸವ, ಭಗವತಿ ಸೇವಾ ನಡೆಯಲಿದ್ದು, ಅಯ್ಯಪ್ಪಸ್ವಾಮಿ ಮಾಲೆಧಾರಿಗಳಿಂದ 18 ಮೆಟ್ಟಿಲು ಪಡಿಪೂಜೆ, ಹತ್ತಾಯ ಪೂಜೆ, ಪುಷ್ಟಾಭಿಷೇಕ, ಪಾನಕ ನೈವೇದ್ಯ, ಹರಿವರಾಸನಂ ನಡೆಯಲಿದೆ ಎಂದರು.
ವಾರ್ಷಿಕ ಮಂಡಲ ಪೂಜೆ :
ಮಂಡಲ ಪೂಜೆ (Mandala Puja ) ಅಂಗವಾಗಿ ಮಹಾಗಣಪತಿ ಹೋಮ, ವೇದಸೂಕ್ತ ಜಪ, ಬ್ರಹ್ಮಕಲಶ ಪೂಜಾ ಉಪದೇವತಾ ಕಲಶ ಪೂಜೆಗಳು, ಮಹಾನಿರಂಜನಮ್, ಕಲಶಾಭಿಷೇಕಮ್, ನಾಗದೇವತೆ ವಿಶೇಷ ಪೂಜೆ, ಇನ್ನಿತರ ಪೂಜೆಗಳು ನೆರವೇರಲಿದೆ.
ಜನೆವರಿ 8ರಂದು ಗುರುಸ್ವಾಮಿಗಳಿಂದ ಅಯ್ಯಪ್ಪಸ್ವಾಮಿ ಮಾಲೆಧಾರಿಗಳಿಗೆ ತುಪ್ಪದಕಾಯಿ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ಮಾಲೆಧಾರಿಗಳು ಶಬರಿಮಲೆಗೆ ಪ್ರಯಾಣ ಬೆಳೆಸುತ್ತಾರೆ ಎಂದರು.ಜನೆವರಿಯಿಂದ ದೇವಸ್ಥಾನದಲ್ಲಿ ಅಭಿಷೇಕ, ಪ್ರತಿ ಶನಿವಾರ ವಿಶೇಷ ಪೂಜೆ ನಡೆಯಲಿದೆ ಎಂದರು. ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ವೇಳೆ ಅಯ್ಯಪ್ಪಸ್ವಾಮಿ ದೇವಸ್ಥಾನ ಚಾರಿಟೇಬಲ್ ಟ್ರಸ್ಟ್ ಈ ಬಾಲನ್, ಸಿದ್ರಾಮಪ್ಪ ಗುರುಸ್ವಾಮಿ, ರಾಜೇಶ ಮಾಣಿಕ್ ಇದ್ದರು.