ಅಲ್ಪಸಂಖ್ಯಾತರ ಹಾಸ್ಟೇಲ್ ಪ್ರಾರಂಭೋತ್ಸವ
ಲಿಂಗಸುಗೂರು : ತಾಲೂಕಿನಲ್ಲಿ ಮಕ್ಕಳ ಸಂಖ್ಯೆಗಳ ಅನುಗುಣವಾಗಿ ಹಾಸ್ಟೇಲ್ ಪ್ರಾರಂಭಿಸಲು ಸಂಬಂಧಿಸಿದ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆವತಿಯಿಂದ ಪಟ್ಟಣದಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರ ಹಾಸ್ಟೇಲ್ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕಿಯರಿಗೆ ಹಾಸ್ಟೇಲ್ ಬಹಳ ಅವಶ್ಯಕತೆ ಇತ್ತು. ಅದು ಇಂದು ಪೂರೈಸಿದೆ. ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಹಾಸ್ಟೇಲ್ ವ್ಯವಸ್ಥೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಅದಕ್ಕೆ ಅನುಗುಣವಾಗಿ ಹಾಸ್ಟೇಲ್‍ಗಳು ಇಲ್ಲದಾಗಿದೆ ಎಂದರು.

ಎಸ್ಸಿ-ಎಸ್ಟಿ ಹೆಚ್ಚುವರಿ ಹಾಸ್ಟೇಲ್ ಮಂಜೂರಾತಿಗೆ ಮನವಿ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ನಿಲಯದಲ್ಲಿ ಶೇ.100ಕ್ಕೆ 100ರಷ್ಟು ಪ್ರವೇಶಾತಿ ನೀಡಬೇಕೆಂದು ಸರಕಾರದ ಆದೇಶವಾಗಿದೆ. 200 ಸೀಟುಗಳಿಗೆ 400 ಅರ್ಜಿಗಳು ಬರುತ್ತವೆ, 400 ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಸೌಲಭ್ಯ ಒದಗಿಸಲು ವಾರ್ಡನ್‍ಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಈ ಹಿನ್ನಲೆಯಲ್ಲಿ ಹೆಚ್ಚುವರಿ ಹಾಸ್ಟೇಲ್‍ಗಳ ಮಂಜೂರಾತಿ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ :
ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್‍ಗಳ ಕೊರತೆ, ಹಾಸ್ಟೇಲ್‍ಗಳಲ್ಲಿ ಅವಕಾಶ ದೊರೆಯುತ್ತಿಲ್ಲ, ನಮ್ಮ ಅಧ್ಯಕ್ಷತೆಯಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳ ಆಯ್ಕೆ ಮಾಡಲಾಗುತ್ತಿದೆ. ಮೆರೀಟ್ ಆಧಾರದಲ್ಲಿ ಆಯ್ಕೆ ಮಾಡಬೇಕೆಂಬ ನಿಯಮ ಇರುವುದರಿಂದ ನಿಯಮ ಮೀರದಂತೆ ಆಯ್ಕೆ ಮಾಡಲಾಗುತ್ತಿದೆ. ನಿಗದಿತ ವಿದ್ಯಾರ್ಥಿಗಳಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿಸಿದರೆ ಸಾಕಷ್ಟು ತೊಂದರೆ ಎದುರಾಗುತ್ತದೆ ಎಂದರು.

ಸ್ವಂತ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಆಧ್ಯತೆ :
ಬಾಡಿಗೆ ಕಟ್ಟಡದಲ್ಲಿ ಕೆಲವು ಹಾಸ್ಟೇಲ್ ನಡೆಯುತ್ತಿವೆ ಅಲ್ಲಿ ಏನೇ ಸೌಲಭ್ಯ ಒದಗಿಸಿದರೂ ಅದು ತಾತ್ಕಾಲಿಕವಾಗಿರುತ್ತದೆ. ಸ್ವಂತ ಕಟ್ಟಡ ಇದ್ದರೆ ಸರಕಾರದಿಂದ ಹೆಚ್ಚಿನ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೇಲ್ ಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.
ಪಟ್ಟಣದಲ್ಲಿ ಉರ್ದು ಪ್ರೌಢಶಾಲೆಗೆ ಅನುದಾನಿತ ಸೌಲಭ್ಯ ಒದಗಿಸಲು ಸಾಕಷ್ಟು ಶ್ರಮವಹಿಸಿದ್ದೇನೆ. ತಾಲೂಕಿನ ಶೈಕ್ಷಣಿಕವಾಗಿ ಪ್ರಗತಿ ಹೊಂದುತ್ತಿದೆ. ಶಿಕ್ಷಣ ಗುಣಮಟ್ಟವೂ ಹೆಚ್ಚಿದೆ. ಶಿಕ್ಷಣದ ಪ್ರಗತಿಗಾಗಿ ಶಾಲಾ ಕೊಠಡಿ, ಕುಡಿವ ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವುದಕ್ಕೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.
ಈ ವೇಳೆ ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೇಹೆಸರೂರು, ಎಜೆ ಚರ್ಚ್ ಫಾದರ್ ಜಾನ್ ಪಾಲ್ಸನ್, ಯೂನಸ್ ಮುಫ್ತಿ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ನಾಗಭೂಷಣ, ಮುದಗಲ್ ಬಿಜೆಪಿ ಮಂಡಲ ಅಧ್ಯಕ್ಷ ಹುಲ್ಲೇಶ ಸಾಹುಕಾರ, ಪರುಶುರಾಮ ಕೆಂಭಾವಿ, ವೆಂಕನಗೌಡ ಐದನಾಳ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಆದಿಮನಿ ಷಡಕ್ಷರಿ ಸೇರಿದಂತೆ ಅನೇಕರಿದ್ದರು.