ಹೋಬಳಿ ಮೂರು, ಸಮಸ್ಯೆ ನೂರಾರು
ಲಿಂಗಸುಗೂರು : 142 ಹಳ್ಳಿಗಳಿಗೆ ಮೂರೇ ಮೂರು ಹೋಬಳಿಗಳು( New Hobli ) ಕೊನೆಭಾಗದ ಹಳ್ಳಿಗಳ ಜನ ಸರ್ಕಾರಿ ಕೆಲಸಕ್ಕಾಗಿ ಅಲೆದಾಡುವ ಸ್ಥಿತಿ ಇದು ಲಿಂಗಸುಗೂರು ತಾಲೂಕಿನಲ್ಲಿ ಹೋಬಳಿ ಮೂರು, ಸಮಸ್ಯೆ ನೂರಾರು ಎನ್ನುವಂತಾಗಿದೆ.ಹೊಸ ಹೋಬಳಿ(New Hobli) ರಚನೆಗೆ ಹಿಂದೇಟು ಏಕೆ,..? ಎನ್ನುವಂತಾಗಿದೆ.
1905ವರಿಗೆ ಜಿಲ್ಲಾ ಕೇಂದ್ರವಾಗಿದ್ದ ಲಿಂಗಸುಗೂರು ಸ್ವಾತಂತ್ರ್ಯದ ನಂತರ ಕಂದಾಯ ಮತ್ತು ಪೋಲಿಸ್ ಉಪವಿಭಾಗ ಕೇಂದ್ರವನ್ನಾಗಿ ಮಾಡಲಾಗಿದೆ. ಲಿಂಗಸುಗೂರು ತಾಲೂಕಿನಲ್ಲಿ 1.94.010 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಾಗಿದೆ. ಇದರಲ್ಲಿ 1.55.240 ಬಿತ್ತನೆ ಕ್ಷೇತ್ರವಾಗಿದೆ. ತಾಲೂಕಿನಲ್ಲಿ 53529 ರೈತ ಕುಟಂಬಗಳಿವೆ. ಈ ಪೈಕಿ 12126 ಅತಿಸಣ್ಣ ರೈತರು, 20381 ಸಣ್ಣ ರೈತರು, 6773 ಮಧ್ಯಮ ರೈತರು, 14246 ದೊಡ್ಡ ಹಿಡುವಳಿ ರೈತರಿದ್ದಾರೆ. ತಾಲೂಕಿನಲ್ಲಿ 4.22.538 ಜಾನುವಾರುಗಳಿವೆ. ಇದರಲ್ಲಿ 85240 ಎತ್ತು ಹಾಗೂ ಆಕಳು ಇವೆ. ರೈತರಿಗೆ ತರಬೇತಿಗಾಗಿ ಲಿಂಗಸುಗೂರಿನಲ್ಲಿ 2011 ರಿಂದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.
ಹೋಬಳಿ ರಚನೆಗೆ ಸಾಮಾನ್ಯವಾಗಿ ಭೌಗೋಳಿಕ ಪ್ರದೇಶವನ್ನು ಪರಿಗಣಿಸಲಾಗುತ್ತಿದೆ. ಇದರೊಂದಿಗೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರ ಮತ್ತು ಹೋಬಳಿ ರಚನೆಯಿಂದ ಸಾರ್ವಜನಿಕರಿಗೆ ಸರ್ಕಾರದ ಸೇವೆ ಒದಗಿಸಲು ಅನಕೂಲಕರ ವಾತಾವರಣದ ಉದ್ದೇಶಗಳನ್ನು ಒಳಗೊಂಡ ಮಾನದಂಡಗಳನ್ನು ಆಧಾರಿಸಿ ಹೋಬಳಿ ರಚನೆ ಮಾಡಲಾಗುತ್ತಿದೆ.
ಹೋಬಳಿ ಸಂಖ್ಯೆ ಹೆಚ್ಚಿಸಿ :
ತಾಲೂಕಿನಲ್ಲಿ 142 ಗ್ರಾಮಗಳಿಗೆ ಕೇವಲ 3 ಹೋಬಳಿಗಳಿವೆ. ಲಿಂಗಸುಗೂರು, ಗುರುಗುಂಟಾ, ಮುದಗಲ್‍ಹೋಬಳಿಗಳಿಂದ ರೈತರು ಸರ್ಕಾರದ ಯೋಜನೆ ಪಡೆಯುವಲ್ಲಿ ಹರಸಾಹಸ ಪಡುವಂತಾಗಿದೆ. ರೈತ ಸಂಪರ್ಕ ಕೇಂದ್ರ ಹಾಗೂ ಹೋಬಳಿ ಕೇಂದ್ರದ ವ್ಯಾಪ್ತಿಯ ಕೊನೆ ಹಳ್ಳಿ ಜನರು ಹೋಬಳಿ ಕೇಂದ್ರಗಳಿಗೆ ತೆರಳಲು ಕನಿಷ್ಠವೆಂದರೂ 50 ಕಿ.ಮೀ ದೂರ ಕ್ರಮಿಸಬೇಕಾಗುತ್ತಿದೆ. ಈಗಿರುವ ಮೂರು ಹೋಬಳಿ ಕೇಂದ್ರಗಳಿಗೆ ಒತ್ತಡ ಕಡಿಮೆ ಮಾಡಲು, ಸಾರ್ವಜನಿಕರಿಗೆ ಅಲೆದಾಟ ತಪ್ಪಿಸಲು ಹಾಗೂ ಸರ್ಕಾರ ಯೋಜನೆಗಳನ್ನು ಸಕಾಲಕ್ಕೆ ರೈತರಿಗೆ ತಲುಪಿಸಲು ಲಿಂಗಸುಗೂರು ತಾಲೂಕಿಗೆ ನಾಗರಾಳ, ಹಟ್ಟಿ, ನಾಗಲಾಪುರ, ಆನಾಹೊಸೂರು ಸೇರಿ ಇನ್ನಿತರ ಗ್ರಾಮವನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡಬೇಕಾಗಿದೆ.
ಲಿಂಗಸುಗೂರು ತಾಲೂಕಿನಲ್ಲಿ ರೈತರ ಗೋಳು :
ಲಿಂಗಸುಗೂರು ಹೋಬಳಿಯಲ್ಲಿ 44 ಗ್ರಾಮಗಳು, ಗುರುಗುಂಟಾ ಹೋಬಳಿಯಲ್ಲಿ 47 ಗ್ರಾಮಗಳು, ಮುದಗಲ್‍ಹೋಬಳಿಯಲ್ಲಿ 51 ಗ್ರಾಮಗಳಿವೆ. ಒಟ್ಟು 142 ಗ್ರಾಮಗಳಿವೆ. ಲಿಂಗಸುಗೂರು ಗುರುಗುಂಟಾ, ಮುದಗಲ್‍ಹೋಬಳಿಯ ಕೊನೆ ಹಳ್ಳಿ ಜನರು ಹೋಬಳಿ ಕೇಂದ್ರಕ್ಕೆ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬರುವುದು ಎಂದರೆ ಒಂದು ದಿನವೇ ಬೇಕಾಗುತ್ತದೆ.
ಹೋಬಳಿಗಳ ಮಂಜೂರಾತಿಯಲ್ಲಿ ತಾರತಮ್ಯ
ರಾಯಚೂರು ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಹೋಬಳಿ ಕೇಂದ್ರ ಇರುವ ತಾಲೂಕು ಅಂದರೆ ಅದು ( New Hobli ) ಲಿಂಗಸುಗೂರು ತಾಲೂಕು ಮಾತ್ರವಾಗಿದೆ..ಮಸ್ಕಿ ತಾಲೂಕಿನಲ್ಲಿ 8 ಹೋಬಳಿ ಕೇಂದ್ರಗಳಿವೆ. ದೇವದುರ್ಗದಲ್ಲಿ ನಾಲ್ಕು, ಮಾನವಿಯಲ್ಲಿ 6, ರಾಯಚೂರು ತಾಲೂಕಿನಲ್ಲಿ 6, ಸಿರವಾರ ತಾಲೂಕಿನಲ್ಲಿ 4 ಹೋಬಳಿಗಳಿವೆ. ಸಿಂಧನೂರು ತಾಲೂಕಿನಲ್ಲಿ 134 ಗ್ರಾಮಗಳಿಗೆ 11 ಹೋಬಳಿ ಕೇಂದ್ರಗಳಿವೆ, 8-9 ಹಳ್ಳಿಗಳಿಗೊಂದು ಹೋಬಳಿ ಕೇಂದ್ರವನ್ನಾಗಿ ಮಾಡಲಾಗಿದೆ. ಆದರೆ ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿಯೊಂದರಲ್ಲಿ 51 ಗ್ರಾಮಗಳಿವೆ, ಇಷ್ಟು ಸಂಖ್ಯೆಯಲ್ಲಿರುವ ಮುದಗಲ್ ಹೋಬಳಿ ಜಿಲ್ಲೆಯಲ್ಲಿಯೇ ದೊಡ್ಡ ಹೋಬಳಿಯಾಗಿದೆ.ಸರಕಾರವು ಹೋಬಳಿ ಸಂಖ್ಯೆಗಳನ್ನು ಹೆಚ್ಚಿಸುವಲ್ಲಿ ತಾರತಮ್ಯ ನೀತಿ ಅನುಸರಿಸಿದ್ದರಿಂದ ಮುದಗಲ್, ಗುರುಗುಂಟಾ, ಲಿಂಗಸುಗೂರು ಹೋಬಳಿಯ ಕೊನೆಭಾಗದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಕಚೇರಿ ಎತ್ತಂಗಡಿಗೆ ಇದೇ ಕಾರಣ :
ಸಿಂಧನೂರು ತಾಲೂಕಿನಲ್ಲಿ 11 ಹೋಬಳಿ ಕೇಂದ್ರಗಳಿವೆ ಎಂಬ ಕಾರಣಕ್ಕೆ ಲಿಂಗಸುಗೂರಿನಲ್ಲಿರುವ ಕೃಷಿ ಉಪನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಎತ್ತಂಗಡಿ ಮಾಡಲು ಪ್ರಕ್ರೀಯೆ ಈ ಕಳೆದ ತಿಂಗಳು ನಡೆದಿತ್ತು. ಆದರೆ ಲಿಂಗಸುಗೂರು ತಾಲೂಕಿನಲ್ಲಿ ಹಳ್ಳಿಗಳ ಸಂಖ್ಯೆ ಹೆಚ್ಚು ಆದರೆ ಮೂರೇ ಹೋಬಳಿ ಸಂಖ್ಯೆ ಕಡಿಮೆ. ಇದನ್ನೇ ನೆಪವಾಗಿಸಿಕೊಂಡ ಕೆಲವು ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಚೇರಿ ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ.
ಇಚ್ಛಾಸಕ್ತಿ ಅಗತ್ಯ :
ಹೊಸ ಹೋಬಳಿ ರಚನೆಗೆ ಇರುವ ಮಾನದಂಡಗಳ ಅನುಸಾರವಾಗಿ ಸರ್ಕಾರಕ್ಕೆ ವರದಿ ನೀಡಿ ಹೋಬಳಿಗೆ ರಚನೆ ಮಾಡಬೇಕಾದ ತಹಶೀಲ್ದಾರರು ಆಸಕ್ತಿ ತೋರುತ್ತಿಲ್ಲ, ಇದಕ್ಕೆ ಚುನಾಯಿತ ಪ್ರತಿನಿಧಿಗಳು ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೊಸದಾಗಿ ಹೋಬಳಿಗಳು ರಚನೆಯಾಗುತ್ತಿಲ್ಲ ಎಂದು ಜನರ ಮಾತಾಗಿದೆ.
ವರದಿ ನೀಡಲು ಹಿಂದೇಟು :
ತಾಲೂಕಿನ ಹಟ್ಟಿ ಹೋಬಳಿಯನ್ನಾಗಿ ಮಾಡಲು ಹೋಬಳಿ ರಚನೆಗೆ ( New Hobli ) ಇರುವ ಮಾನದಂಡ, ಪ್ರಯೋಜನಗಳ ಬಗ್ಗೆ, ಜನಸಂಖ್ಯೆ, ಗ್ರಾಮಗಳ ವಿವರ, ಮೂಲ ಮತ್ತು ಪ್ರಸ್ತಾಪಿತ ಹೋಬಳಿಗಳ ಬೌಗೋಳಿಕತ್ವ ವಿಸ್ತಿರ್ಣದೊಂದಿಗೆ ಮಾಹಿತಿ ಸಲ್ಲಿಸುವಂತೆ 2016ರಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಹೋಬಳಿ ರಚನೆಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಹಿಂದೇಟು ಹಾಕುತ್ತಿದ್ದರಿಂದ ಇಲ್ಲಿನ ಜನರು ಅನುಭವಿಸುವ ತೊಂದರೆ ತಪ್ಪುತ್ತಿಲ್ಲ.
ಜನಸಾಮಾನ್ಯರ ಹಿತ ದೃಷ್ಟಿಯಿಂದ ಆದಷ್ಟು ಬೇಗ ಹೋಬಳಿ ಕೇಂದ್ರಗಳು ರಚೆನೆಯಾಗಲಿ
ಇದಕ್ಕೆ ಜನಸಾಮಾನ್ಯರ ಒತ್ತಡವೂ ಬೇಕು