ಅ.4ಕ್ಕೆ ಬೃಹತ್ ಹೋರಾಟ :
ಲಿಂಗಸುಗೂರು : ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ವಿರುದ್ಧ ಅಕ್ಟೋಬರ್ 4ರಂದು ತಾಲೂಕಿನ ಅಮರೇಶ್ವರ ಕ್ರಾಸ್‌ನಲ್ಲಿ ನಮ್ಮ ಭೂಮಿ ನಮ್ಮ ಹಕ್ಕು(Our land is our right) ಎಂಬ ಘೋಷಣೆಯಡಿಯಲ್ಲಿ ಬೃಹತ್ ಹೋರಾಟ(Massive protest) ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಜಾಗಿರನಂದಿಹಾಳ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹುರಾಷ್ಟಿಯ ಕಾರ್ಪೋರೇಟರ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರಗಳಾಗಿದ್ದು, ಕಂಪನಿಗಳ ಕೈಗೊಂಬೆಗಳ0ತೆ ಕೆಲಸ ಮಾಡುತ್ತಿದ್ದು, ತಮ್ಮ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಕೈಯಲ್ಲಿ ಕೃಷಿಗೆ ಸಂಬAಧಪಟ್ಟ ಭೂಮಿ, ವಿದ್ಯುತ್, ನೀರು ಕೃಷಿ ಮಾರುಕಟ್ಟೆ ಪ್ರಾಂಗಣ ತಮ್ಮ ಕೈಯಲ್ಲಿ ಹಿಡಿದಿಟ್ಟು ರೈತರನ್ನು ದಿಕ್ಕುಪಾಲು ಮಾಡುವ ನಿಟ್ಟಿನಲ್ಲಿ ತಮಗೆ ಬೇಕಾದ ಕಾನೂನು ರೂಪಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ರೈತರು ಕೈಯಲ್ಲಿ ಜಮೀನುಗಳು ಇಲ್ಲದಂತೆ ನೋಡಿಕೊಳ್ಳುವ ಹುನ್ನಾರ ನಡೆದಿದೆ. ರೈತರ ಜಮೀನುಗಳನ್ನು ನಾನಾ ರೀತಿಯ ಹೆಸರಿನಲ್ಲಿ ವಶಪಡಿಸಿಕೊಂಡು ರೈತರನ್ನು ಕೃಷಿಯಿಂದ ಹೊರದಬ್ಬಿ ಅವರನ್ನು ಜೀತದಾಳುಗಳನ್ನಾಗಿ ಮಾಡಿಕೊಳ್ಳುವ ಒಳಸಂಚು ನಿರಂತರವಾಗಿ ನಡೆದಿದೆ.
ರೈತರನ್ನು ಒಕ್ಕಲೆಬ್ಬಿಸಿದ ಅಧಿಕಾರಿ :
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬ ಸರ್ಕಾರದ ಆದೇಶ ಹಾಗೂ ಖುದ್ದಾಗಿ ಅರಣ್ಯ ಸಚಿವರೇ ಹೇಳಿದ್ದರೂ ಕೂಡಾ ತಾಲೂಕಿನ ಯರಡೋಣಾ ಗ್ರಾಮದ ಸರ್ವೆ ನಂಬರ್ 32 ಹಾಗೂ ಇತರೆ ಸರ್ವೆನಂಬರ್‌ನಲ್ಲಿ ಕಂದಾಯ ದಾಖಲಾತಿ ಇರುವ ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ನುಗ್ಗಿ ಬೆಳೆ ನಾಶ ಮಾಡಿ ತಮ್ಮ ಅಧಿಕಾರದ ಧರ್ಪ ತೋರಿಸಿದ್ದಾರೆ. ಅಲ್ಲಿ ಸುಮಾರು 25 ರೈತರ ಜಮೀನಿನಲ್ಲಿ ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ಬೆಳೆ ನಾಶ ಮಾಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಅ.4ಕ್ಕೆ ಬೃಹತ್ ಹೋರಾಟ:
ರೈತರನ್ನು ಒಕ್ಕಲೆಬ್ಬಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಹಾಗೂ ರೈತರ ಮತ್ತು ಕೃಷಿಗೆ ಮಾರಕ ಕಾನೂನುಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಎತ್ತುಗಳೊಂದಿಗೆ ನೇಗಿಲನ್ನು ಹಾಕಿಕೊಂಡು, ಟ್ರಾಕ್ಟರ್‌ಗಳೊಂದಿಗೆ ರೈತರು ಅಕ್ಟೋಬರ್ 4ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಅಮರೇಶ್ವರ ಕ್ರಾಸ್‌ನಿಂದ ಬೆಳೆ ನಾಶವಾದ ರೈತರ ಜಮೀನಿನವರಿಗೆ ಪಾದಯಾತ್ರೆ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ ಜಮೀನಿನಲ್ಲಿ ಉಳಿಮೆ ಮಾಡುವ ವಿನೂತನ ಭೂ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಕೋಡಿಹಳ್ಳಿ ಚಂದ್ರಶೇಖರ್ ಭಾಗಿ :
ಅಕ್ಟೋಬರ್ 4ರಂದು ನಡೆಯುವ ನಮ್ಮ ಭೂಮಿ ನಮ್ಮ ಹಕ್ಕು ಭೂ ಹೋರಾಟದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತ್ರತ್ವ ವಹಿಸಲಿದ್ದಾರೆ. ಈಗಾಗಿ ಗುರುಗುಂಟಾ ಹೋಬಳಿ ಸೇರಿದಂತೆ ತಾಲೂಕು, ಜಿಲ್ಲೆಯ ವಿವಿಧಡೆಯ ರೈತರು ಎತ್ತುಗಳೊಂದಿಗೆ ನೇಗಿಲು ಹಾಕಿಕೊಂಡು ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಹೋರಾಟಕ್ಕೆ ದಸಂಸ ಬೆಂಬಲ :
ಈ ವೇಳೆ ದಲಿತ ಸಂಘರ್ಷ ಸಮಿತಿ(ಪ್ರೋ.ಬಿ.ಕೆ.ಕೃಷ್ಣಪ್ಪ ಸ್ಥಾಪಿತ) ಮುಖಂಡ ಮಹಾದೇವಪ್ಪ ಪರಾಂಪುರ ಮಾತನಾಡಿ, ಅರಣ್ಯ ಇಲಾಖೆಯುವರು ಎರಡ್ಮೂರು ಎಕರೆಗಳಲ್ಲಿ ಸಾಗುವಳಿ ಮಾಡುತ್ತಿದ್ದ ಸಣ್ಣ ಸಣ್ಣ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದು ಖಂಡನೀಯ. ಅಕ್ಟೋಬರ್ 4ರಂದು ರೈತ ಸಂಘ ಹಮ್ಮಿಕೊಂಡಿರುವ ನಮ್ಮ ಭೂಮಿ ನಮ್ಮ ಹಕ್ಕು ಭೂ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಬೆಂಬಲ ನೀಡುವ ಜೊತೆ ಸಮಿತಿ ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್‌ನೊಂದಿಗೆ ಸಮಿತಿ ಮುಖಂಡರು ಭಾಗವಹಿಸಲಾಗುವುದು ಎಂದರು.
ಕಾನೂನು ಸಲಹೆಗಾರ ಕುಪ್ಪಣ್ಣ ಮಾಣಿಕ್ ಮಾತನಾಡಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರೊಬ್ಬರು 25 ಎಕರೆ ಸಾಗುವಳಿ ಮಾಡುತ್ತಿದ್ದರೂ ಸುಮ್ಮನೆ ಇರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ನಮ್ಮ ಜಿಲ್ಲೆಯಲ್ಲಿ ಕೇವಲ ಎರಡು ಅಥವಾ ಮೂರು ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ ಅಂತಹ ರೈತರನ್ನು ಒಕ್ಕಲೆಬ್ಬಿಸುವುದು, ಬೆಳೆ ನಾಶ ಮಾಡಿ ರೈತರನ್ನು ಮತ್ತಷ್ಟು ಸಂಕಷಕ್ಕೀಡು ಮಾಡುತ್ತಿದ್ದಾರೆ. ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಕಾನೂನು ನಮ್ಮ ಜಿಲ್ಲೆಯಲ್ಲಿ ಇಲ್ವಾ ಎಂಬ ಅನುಮಾನ ಮೂಡುತ್ತಿದೆ. ಸರ್ಕಾರ ರೈತರನ್ನು ಹಗುರುವಾಗಿ ಕಾಣದೇ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಪ್ರಸಾದರೆಡ್ಡಿ, ಮುಖಂಡರಾದ ಆದಪ್ಪ, ಸೇರಿದಂತೆ ಅನೇಕರಿದ್ದರು.