ಜಿಲ್ಲಾಮಟ್ಟದ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಕಾನೂನು ಅರಿವು ಕಾರ್ಯಕ್ರಮ
ಲಿಂಗಸುಗೂರು : ಆರೋಗ್ಯ ಇಲಾಖೆಯಲ್ಲಿ ಸೇವೆಯಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಿಬಿಎಂಪಿ ಮಾದರಿಯಲ್ಲಿ ನೇರ ವೇತನ ಪಾವತಿಸುವಂತೆ ಆರೋಗ್ಯ ಇಲಾಖೆ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಅಕ್ಷಯ ಡಿ.ಎಂ.ಗೌಡ ಒತ್ತಾಯಿಸಿದ್ದಾರೆ.

ಪಟ್ಟಣದ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರಿಗೆ (outsourced employees ) ಕಾನೂನು ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರಿಗೆ ಏಜನ್ಸಿ ಮೂಲಕ ವೇತನ ನೀಡುತ್ತಿದ್ದರಿಂದ ನೌಕರರಿಗೆ ವೇತನದಲ್ಲಿ ನಾನಾ ಕಾರಣಗಳನ್ನು ತೋರಿಸಿ ವೇತನದಲ್ಲಿ ಕಡಿತ ಮಾಡುತ್ತಿದ್ದಾರೆ. ಇದರಿಂದ ನೌಕರರಿಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಮಾದರಿಯಲ್ಲಿ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಮಾಡುವಂತೆ ಆರೋಗ್ಯ ಸಚಿವರಿಗೆ ಲಿಖಿತ ಮನವಿ ಮಾಡಿದ್ದೇವೆ, ಬರುವ ಏಪ್ರೀಲ್ 1ರಿಂದ ಜಿಲ್ಲಾಧಿಕಾರಿಗಳ ಮೂಲಕ ನೇರ ವೇತನ ಪಾವತಿಗೆ ಕ್ರಮ ವಹಿಸುವುದಾಗಿ ಸಚಿವರು ಮೌಖಿಕವಾಗಿ ಭರವಸೆ ನೀಡಿದ್ದಾರೆ, ಈಗಾಗಿ ನೇರ ವೇತನ ಪಾವತಿ ಅತಿ ಶೀಘ್ರವೇ ಬೇಡಿಕೆ ಈಡೇರಲಿದೆ ಎಂದರು.
ರಾಜ್ಯದಲ್ಲಿ 25 ಸಾವಿರ ಹೊರಗುತ್ತಿಗೆ ನೌಕರರು :
ಹೊರಗುತ್ತಿಗೆ ನೌಕರರು ಈ ಹಿಂದೆ ಎನ್‌ಹೆಚ್‌ಎಮ್ ಹಾಗೂ ಬಿಎಂಎಸ್ ಸಂಘದಲ್ಲಿ ಇದ್ದುಕೊಂಡು ಸರಕಾರದ ಸೌಲಭ್ಯಗಳಿಗಾಗಿ ಹೋರಾಟ ಮಾಡಲಾಗುತ್ತಿತ್ತು, ಆದರೆ 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಹೊರಗುತ್ತಿಗೆ ನೌಕರರನ್ನು ವಿವಿಧ ಹೋರಾಟಕ್ಕೆ ಬಳಸಿಕೊಂಡರೂ ಆದರೆ ಯಾವುದೇ ಸೌಲಭ್ಯಗಳು ನಮ್ಮ ನೌಕರರಿಗೆ (outsourced employees ) ಸಿಗಲಿಲ್ಲ ಬದಲಾಗಿ ಎನ್‌ಹೆಚ್‌ಎಮ್ ನೌಕರರಿಗೆ ಸಿಗುತ್ತಿತ್ತು, ಇದರಿಂದ ನಮ್ಮ ನೌಕರರಿಗೆ ಅನ್ಯಾಯವಾಗುತ್ತಿತ್ತು, ಇದರಿಂದ ಹೊರಬಂದು ಕಳೆದ ಎರಡು ವರ್ಷದಿಂದ ಪ್ರತ್ಯೇಕವಾಗಿ ಸಂಘ ಅಸ್ಥಿತ್ವ ರಚನೆ ಮಾಡಿ ಸರಕಾರದ ಸೌಲಭ್ಯಗಳಿಗಾಗಿ ಸ್ವತಂತ್ರವಾಗಿ ಹೋರಾಟ ಮಾಡಲಾಗುತ್ತಿದೆ ಎಂದರು.

ರಾಯಚೂರು ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರಿಗೆ ಕಳೆದ 11 ತಿಂಗಳಿ0ದ ವೇತನ ನೀಡಿಲ್ಲ, ಬೇರೆ ಜಿಲ್ಲೆಗಳಲ್ಲಿ ವೇತನ ನೀಡಲಾಗಿದೆ ಆದರೆ ರಾಯಚೂರು ಜಿಲ್ಲೆಯ ಡಿಹೆಚ್‌ಓ ನಿರ್ಲಕ್ಷ್ಯತನದಿಂದಾಗಿ ಜಿಲ್ಲೆಯ ಹೊರಗುತ್ತಿಗೆ ನೌಕರರು ಪರದಾಡುವಂತಾಗಿದೆ. ಬೇರೆ ಜಿಲ್ಲೆಯ ಸಕಾಲಕ್ಕೆ ವೇತನವಾದರೂ ರಾಯಚೂರಿನಲ್ಲಿ ಯಾಕೆ ಆಗುತ್ತಿಲ್ಲ, ಇಲ್ಲಿ ಹೊರ ಗುತ್ತಿಗೆ ನೌಕರರಲ್ಲಿ ಸಂಘಟನೆ ಕೂರತೆ ಇದೆ. ಇಲ್ಲಿ ಸಂಘಟನೆ ಮತ್ತಷ್ಟು ಬಲಗೊಳ್ಳಬೇಕಾಗಿದೆ. ವೇತನ ಸಕಾಲಕ್ಕೆ ನೀಡದ ಅಧಿಕಾರಿಗಳ ವಿರುದ್ಧ ಕಲುಬುರಗಿ ಉಪ ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ದೂರು ನೀಡಿದ್ದರಿಂದ ಆರೋಗ್ಯ ಇಲಾಖೆಗೆ 14.31 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಮಾತನಾಡಿ, ಕಾರ್ಮಿಕನ ಬೆವರ ಹನಿ ಒಣಗುವ ಮುಂಚೆ ಅವರಿಗೆ ವೇತನ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಕಾರ್ಮಿಕ ಇಲಾಖೆ ಮುನ್ನೆಡೆಯುತ್ತಿದೆ. 1936ರ ವೇತನ ಕಾಯ್ದೆ ಪ್ರಕಾರ ಪ್ರತಿ ತಿಂಗಳು 7ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಹಾಗೂ 1948ರ ಕನಿಷ್ಠ ವೇತನ ಕಾಯ್ದೆ ಜಾರಿಯಾಗಿದೆ. ಈ ಕಾಯ್ದೆ ಅನ್ವಯ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಕನಿಷ್ಠ ವೇತನ ನೀಡಿರುವ ಬಗ್ಗೆ ಪ್ರಾದೇಶಿಕ ಕಾರ್ಮಿಕರ ಆಯುಕ್ತರಿಗೆ ದೂರು ನೀಡಿದರೆ ಈ ಕ್ರಮವಹಿಸಲಾಗುತ್ತಿದೆ. ಹೊರ ಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿಸುವ ಪದ್ಧತಿ ಬೀದರ ಜಿಲ್ಲೆಯಿಂದ ಆರಂಭಗೊಂಡಿದೆ ಅದು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಗೆ ಸರಕಾರ ಚಿಂತನೆ ನಡೆದಿದೆ. ಹೊರ ಗುತ್ತಿಗೆ ನೌಕರರಿಗೆ ವೇತನ ನೀಡುವುದು ಎಷ್ಟು ಜವಬ್ದಾರಿಯೋ ಅಷ್ಟೇ ಜವಬ್ದಾರಿ ಆಯಾ ಇಲಾಖೆಯದ್ದಾಗಿ ಆಗುತ್ತಿದೆ ಎಂದರು.
ಈ ವೇಳೆ ಸಾರ್ವಜನಿಕ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಕರಪ್ಪ ಗುಂಡಸಾಗರ, ತುಮಕೂರು ಜಿಲ್ಲಾಧ್ಯಕ್ಷ ಸಿದ್ದಪ್ಪ ಬಿ, ದೌಲಪ್ಪ ಮನಗೂಳಿ, ನಬಿಸಾಬ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ಯಾಮಣ್ಣ ಕಟ್ಟಿ, ತಾಲೂಕಾಧ್ಯಕ್ಷ ಮೌನೇಶ ಉಪ್ಪಾರ, ಉಪಾಧ್ಯಕ್ಷ ಸುನೀಲ್‌ಸಿಂಗ್ ಮುದಗಲ್, ಸೇರಿದಂತೆ ಅನೇಕರಿದ್ದರು.