ಸ್ವಾಲಿಡಾರಿಟಿ ಸಂಘಟನೆಯಿಂದ ಎಸಿಗೆ ಮನವಿ
ಲಿಂಗಸುಗೂರು : ತಾಲೂಕಿನಲ್ಲಿರುವ ಎಲ್ಲಾ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಳಪೆಮಟ್ಟದ ಶೂಗಳನ್ನು ಸರಬರಾಜು ಮಾಡಿದ್ದು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸುವಂತೆ ಆಗ್ರಹಿಸಿ ಸ್ವಾಲಿಡಾರಿಟಿ ಯುವ ಸಂಘಟನೆಯಿಂದ ಎಸಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. (ಕಳಪೆ ಮಟ್ಟ ಶೂ ಸರಬರಾಜು : ಕ್ರಮಕ್ಕೆ ಜರುಗಿಸಿ )
ತಾಲೂಕಿನ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಕಳಪೆಮಟ್ಟದ ನಕಲಿ ಕಂಪನಿಯ ಶೂಗಳನ್ನು ಸರಬರಾಜು ಮಾಡಲಾಗಿದೆ. ತಾಲೂಕಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಎಸ್‍ಡಿಎಂಸಿ ಇಲ್ಲದೆ ಮುಖ್ಯ ಶಿಕ್ಷಕರು ತಮ್ಮ ಮನಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಆ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಸರ್ಕಾರವು ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಿ ಅವರಿಗೆ ಉನ್ನತಮಟ್ಟದ ಸಾಮಾಗ್ರಿಗಳನ್ನು ಒದಗಿಸುವ ಮುಖಾಂತರ ಶಿಸ್ತು ಪಾಲನೆ ಮಾಡುತ್ತಿದೆ. ಆದರೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಹಣ ದುರಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.(ಕಳಪೆ ಮಟ್ಟ ಶೂ ಸರಬರಾಜು : ಕ್ರಮಕ್ಕೆ ಜರುಗಿಸಿ)
ಎಸ್‍ಡಿಎಂಸಿ ರಚನೆ ಇಲ್ಲ :
ಪಟ್ಟಣದ ಈಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಆರು ವರ್ಷಗಳಿಂದ ಎಸ್‍ಡಿಎಂಸಿ ರಚನೆ ಮಾಡಿಲ್ಲ, ಈ ಬಗ್ಗೆ ಮುಖ್ಯ ಶಿಕ್ಷಕರಿಗೆ ವಿಚಾರಿಸಿದರೆ ಶಾಲೆಯ ವಿದ್ಯಾರ್ಥಿಗಳ ಪಾಲಕರು ಸ್ಪಂದಿಸುತ್ತಿಲ್ಲ ಹಾಗೂ ಶಾಲೆಗೆ ಎಸ್‍ಡಿಎಂಸಿ ಯಾಕೆ ಬೇಕು ಹೇಗೋ ಶಾಲೆ ನಡೆಯುತ್ತಿದೆ ಎಂದು ಉಢಾಫೆ ಉತ್ತರ ನೀಡುತ್ತಿದ್ದಾರೆ. ಸುಮಾರು 5-6 ವರ್ಷಗಳ ಹಿಂದೆ ಶಾಲೆಯಲ್ಲಿ 800ಕ್ಕೂ ಅಧಿಕ ವಿದ್ಯಾರ್ಥಿಗಳ ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು ಆದರೆ ಈಗ 300-400 ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ ಶೇ.50ರಷ್ಟ ದಾಖಲಾತಿ ಕಡಿಮೆಯಾಗಿದೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಜರಗಿಸಬೇಕು. ಹೀಗೇ ನಿರ್ಲಕ್ಷ್ಯ ಮುಂದುವರಿದರೆ ಶಾಲೆಗೆ ಬೀಗ ಹಾಕುವ ಸ್ಥಿತಿ ಬಂದೊಗುತ್ತದೆ.
ಉನ್ನತ ಮಟ್ಟದ ತನಿಖೆ ನಡೆಸಿ :
ಇದೇ ಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶಾಲೆಗೆ ಬಂದಿದ್ದ ಶಾಸಕ ಮಾನಪ್ಪ ವಜ್ಜಲ್‍ಅವರು ಕಳಪೆ ಮಟ್ಟದ ಶೂ ಸಾಕ್ಸ ಕಂಡು ಸ್ಥಳದಲ್ಲಿಯೇ ಇದ್ದ ಡಿಡಿಪಿಐ, ಬಿಇಒ ಹಾಗೂ ಶಾಲೆ ಮುಖ್ಯ ಶಿಕ್ಷಕ ವಿರುದ್ಧ ಗರಂ ಆದ ಪ್ರಸಂಗವೂ ನಡೆದಿದೆ. ಸರ್ಕಾರಿ ನಿಯಮದ ಪ್ರಕಾರ ಶೂ ಸಾಕ್ಸ ಸರಬರಾಜು ಮಾಡದೇ ಕಳಪೆಮಟ್ಟದ ಶೂ ಸಾಕ್ಸ ಹಾಗೂ ಇತರೆ ಸಾಮಾಗ್ರಿಗಳನ್ನು ಪೂರೈಕೆ ಮಾಡಿದ ಗುತ್ತಿಗೆದಾರರಿಗೆ ಹಾಗೂ ಕಳಪೆಮಟ್ಟ ಇದ್ದರೂ ಬಿಲ್‍ಪಾಸು ಮಾಡಿದ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತಮಟ್ಟದ ಅಧಿಕಾರಿಗಳ ತಂಡದಿಂದ ತನಿಖೆ ನಡೆಸಿ ಸರ್ಕಾರದ ಹಣ ದುರುಪಯೋಗ ಮಾಡಿದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಬರೆದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಜಿಎಸ್‍ಟಿ ಬಿಲ್ ನೀಡಲಿ :
ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೆ ಗುಣಮಟ್ಟದ ಪಾರಾಗಾನ, ಲೂನಾರ್ಸ, ಬಾಟಾ, ಸ್ಪಾರ್ಕ, ವಿಕೆಸಿ ಕಂಪನಿಗಳ ಶೂ ಹಾಗೂ ಸಾಕ್ಸಗಳನ್ನು ಸರಬರಾಜು ಮಾಡಬೇಕು. ನಕಲಿ ಶೂ ಸಾಕ್ಸ ಸರಬರಾಜಿಗೆ ಪರವಾನಿಗೆ ನೀಡಬಾರದು, ಶೂ ಸರಬರಾಜು ಮಾಡುವವರು ತೆರಿಗೆ ಇಲಾಖೆಯ ಅನುಗುಣವಾಗಿ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು, ಶಾಲೆಗಳಿಗೆ ಸರಬರಾಜು ಮಾಡಿದ ಗುತ್ತಿಗೆದಾರರು ಮೂಲ ಜಿಎಸ್‍ಟಿ ಬಿಲ್‍ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಸ್ವಾಲಿಡಾರಿಟಿ ಯುವ ಸಂಘಟನೆ ತಾಲೂಕಾಧ್ಯಕ್ಷ ಅಮ್ಜದ್ ಅಲಿ, ಬಾಬಾ ಕೆಬಿಎನ್, ಪಾಶಾ ಗಿರಣಿ, ನವಾಬ್,ಅಬ್ದುಲ್ ಸತ್ತರ್,ಅಹ್ಮದ್ ಅಲಿ, ಸಾಲಾರ, ಅಹ್ಮದ್, ಸೇರಿದಂತೆ ಇನ್ನಿತರಿದ್ದರು.