ವಕ್ಫ್ ವಿರುದ್ಧ ಒಗ್ಗೂಡಿ ಹೋರಾಟ ಮಾಡಿ
ಲಿಂಗಸುಗೂರು : ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿ ಸರ್ಕಾರ ರೈತರನ್ನು ಒಕ್ಕಲೆಬ್ಬಿಸುತ್ತಿದೆ, ಇದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ಬರುವ ಅಧಿವೇಶನದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ( Pramod Muthalik) ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪಹಣಿಯಲ್ಲಿ ಏಕಾಏಕಿಯಾಗಿ ವಕ್ಫ್ ಬೋರ್ಡ್ ಆಸ್ತಿ ನಮೂದಾಗಿರುವುದು ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರಕಾರ ಮಾಡುತ್ತಿದೆ. ರೈತರ ಭೂಮಿ ಪಹಣಿ ಅಷ್ಟೇ ಅಲ್ಲದೆ ಮಠಗಳು, ದೇವಸ್ಥಾನಗಳು, ರಸ್ತೆಗಳು, ಎಸ್‍ಪಿ ಕಚೇರಿ, ಸರ್ಕಾರದ ಕಚೇರಿಗಳು ಅಷ್ಟೇ ಏಕೆ ಬೆಂಗಳೂರಿನ ವಿಧಾನಸೌಧ, ಲಾಲ್ ಬಾಗ್ ಕೂಡಾ ನಮ್ಮ ಆಸ್ತಿ ಎಂದು ವಕ್ಫ್ ಹೇಳುತ್ತಿರುವುದು ಖಂಡನೀಯ. ವಕ್ಫ್ ಬೋರ್ಡ್ ಆಸ್ತಿ ನಮೂದಾಗಿರುವುದನ್ನು ನೋಡಿ ಸುಮ್ಮುನೆ ಕುಳಿತರೆ ನಡೆಯೋಲ್ಲ, ಎಲ್ಲಾ ಮಠಾಧೀಶರು, ದೇವಸ್ಥಾನದ ಅರ್ಚಕರು, ಸಾರ್ವಜನಿಕರು ಒಗ್ಗೂಡಿ ವಕ್ಫ್ ವಿರುದ್ಧ ಹೋರಾಟ ಮಾಡಬೇಕು, ಇದಕ್ಕೆ ಶ್ರೀರಾಮಸೇನೆ ಸಂಘಟನೆ ಬೆಂಬಲ ನೀಡುತ್ತದೆ ಎಂದರು.
ಸಿಎಂ ಆದೇಶ ನಾಟಕವಾ ..?:
ರೈತರನ್ನು ಒಕ್ಕಲೆಬ್ಬಿಸುವಂತಹ ವಕ್ಫ್ ಬೋರ್ಡ್ ವಕ್ಕರಿಸಿದೆ. ವಾಪಸ್ಸು ತೆಗೆದುಕೊಳ್ಳುತ್ತೇವೆ, ನೋಟಿಸ್ ನೀಡದಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು, ಆದರೂ ಕೂಡಾ ಇಂದಿಗೂ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬರುತ್ತಿದೆ, ಅಂದರೆ ಮುಖ್ಯಮಂತ್ರಿಗಳ ಆದೇಶವನ್ನು ವಕ್ಫ್ ಬೋರ್ಡ್ ಪಾಲಿಸುತ್ತಿಲ್ವಾ..? ಅಥವಾ ಮುಖ್ಯಮಂತ್ರಿಗಳ ಆದೇಶ ನಾಟಕವಾ ಎಂಬುದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ಪಷ್ಟಪಡಿಸಬೇಕು ಎಂದರು.
ನರೇಂದ್ರ ಮೋದಿಯವರಿಗೆ ಬೆಂಬಲಿಸಿ :
ನಮ್ಮ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬಂದಿಲ್ಲ ಎಂದು ಸುಮ್ಮನೆ ಕುಳಿತರೆ ನಡೆಯೋಲ್ಲ, ಒಂದಲ್ಲ ಒಂದು ದಿನ ನಿಮ್ಮ ಬುಡಕ್ಕೂ ವಕ್ಫ್ ಬೋರ್ಡ್ ವಕ್ಕರಿಸುತ್ತದೆ, ಈ ಬಗ್ಗೆ ಎಲ್ಲಾ ನಾಗರಿಕರು, ರೈತರು, ಎಚ್ಚತ್ತಗೊಳ್ಳಬೇಕು. ಎಲ್ಲಿವರಿಗೂ ವಕ್ಫ್ ಕಾಯ್ದೆಗೆ ತಿದ್ದುಪಡಿ ತರೋಲ್ಲವೋ ಅಲ್ಲಿವರಿಗೂ ವಕ್ಫ್ ನ ತೂಗು ಕತ್ತಿ ಪ್ರತಿಯೊಬ್ಬರ ನೆತ್ತಿ ಮೇಲೆ ತೂಗಾಡುತ್ತೆ ಇದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ವಕ್ಫ್ ಕಾಯ್ದೆ ತಿದ್ದುಪಡಿ ತರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಹಾಕಿದ್ದು, ಬರುವ ಚಳಿಗಾಲ ಅಧಿವೇಶನದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶದ ಎಲ್ಲಾ ರೈತರು, ನಾಗರಿಕರು ಬೆಂಬಲ ನೀಡಬೇಕೆಂದರು.
ಕೋರ್ಟ್ಗೆ ಅಲೆದಾಟ ಬೇಡ :
ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು, ನೋಟಿಸ್ ಬಂದಿದ್ದರಿಂದ ರೈತರು ಹೆದರಬಾರದು, ವಕ್ಫ್ ವಿರುದ್ಧ ಕೋರ್ಟಿಗೆ ಹಣ ಖರ್ಚು ಮಾಡಬೇಡಿ, ಪಹಣಿಯಲ್ಲಿ ಯಾವ ಆಧಾರದ ಮೇಲೆ ವಕ್ಫ್ ಬೋರ್ಡ್ ಹೆಸರು ಸೇರಿಸಿದ್ದೀರಿ ಎಂದು ತಹಶೀಲ್ದಾರ್ ರನ್ನು ಗಟ್ಟಿಯಾಗಿ , ಒಗ್ಗಟ್ಟಾಗಿ ಕೇಳಬೇಕು, ತಹಶೀಲ್ದಾರ ಅವರೇ ವಕ್ಫ್ ಬೋರ್ಡ್ ಆಸ್ತಿ ಬಂದಿರುವುದನ್ನು ಪಹಣಿಯಿಂದ ತೆಗೆದು ಹಾಕುತ್ತಾರೆ ರೈತರು ಜಾಗೃತರಾಗಬೇಕು ಎಂದರು.