ಲಿಂಗಸುಗೂರಿನ ಈಶ್ವರ ದೇವಸ್ಥಾನದಲ್ಲಿ ಆಯೋಜನೆ
ಲಿಂಗಸುಗೂರು : ಡಿಸೆಂಬರ್ 22ರಂದು ಸಂಜೆ 6ಕ್ಕೆ ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಸಾವಿರಾರು ವಿಶೇಷ ಚೇತನರ ಬಾಳಲ್ಲಿ ಬೆಳಕು ಮೂಡಿಸಿದ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಲಿಂ.ಡಾ.ಪುಟ್ಟರಾಜ ಕವಿ ಗವಾಯಿಗಳವರ (Puttaraja Gavayigalu )14 ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ.ಕಲ್ಲಯ್ಯ ಅಜ್ಜನವರ ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರು ಪುಟ್ಟರಾಜ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿಶ್ವನಾಥ ಹೂಗಾರ ತಿಳಿಸಿದ್ದಾರೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಧ, ಅಂಗವಿಕಲ ಮಕ್ಕಳು ಹುಟ್ಟಿದ ಮನೆಗೆ ಹಾಗೂ ಸಮಾಜಕ್ಕೆ ಭಾರ ಎನ್ನುವ ಕಾಲಘಟ್ಟದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳು (Puttaraja Gawai )ಅಂತಹ ಮಕ್ಕಳನ್ನು ನಮ್ಮ ಮಠಕ್ಕೆ ಕೊಡಿ ಅವರನ್ನು ತಮ್ಮ ಮಠದಲ್ಲಿ ಸಾಕು ಸಲುಹಿ ಅವರಿಗೆ ಶಿಕ್ಷಣ, ಸಂಗೀತ ಕಲಿಸಿ ಅವರನ್ನೂ ಕೂಡಾ ಸಂಗೀತ ಕಲಾವಿಧರನ್ನಾಗಿ ಮಾಡಿದ ಸಮಾಜಕ್ಕೆ ಅವರನ್ನೇ ಆಸ್ತಿಯನ್ನಾಗಿ ಮಾಡಿದ ಪುಣ್ಯಾತ್ಮರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ನೂರಾರು ಸಂಗೀತ ಕಲಾವಿಧರಲ್ಲಿ ನಾವು ಅವರನ್ನು ಕಾಣಬಹುದಾಗಿದೆ ಎಂದರು.
14ನೇ ಪುಣ್ಯಸ್ಮರಣೋತ್ಸವ :
ಡಿಸೆಂಬರ್ 22ರಂದು ಈಶ್ವರ ದೇವಸ್ಥಾನದಲ್ಲಿ ಲಿಂ.ಡಾ.ಪಂಡಿತ ಪುಟ್ಟರಾಜ ಗವಾಯಿಗಳ (Puttaraja Gavayigalu) 14ನೇ ಪುಣ್ಯಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ ಇದರ ಅಂಗವಾಗಿ ವಿರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಯ್ಯ ಅಜ್ಜನವರಿಗೆ ಸ್ನೇಹ ಬಳಗದಿಂದ(ಜೆಎಲ್ಜಿ.) ತುಲಾಭಾರ ಸೇವೆ ನಡೆಯಲಿದೆ. ಹಣದಿಂದ ಶ್ರೀಗಳಿಗೆ ತುಲಾಭಾರ ಮಾಡಲಾಗುತ್ತಿದೆ ಎಂದರು.
ಸ್ವರ ನಮನ ಅಹೋರಾತ್ರಿ ಸಂಗೀತ ಕಾರ್ಯಕ್ರಮ :
ಸಂಗೀತಕ್ಕಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡಿರುವ ಪುಟ್ಟರಾಜ ಗವಾಯಿಗಳ (Puttaraja Gavayigalu)ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಸಂಗೀತಕ್ಕಾಗಿ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಆಶ್ರಮದಲ್ಲಿ ಸಂಗೀತ ಶಿಕ್ಷಣ ಪಡೆದ ಹಾಗೂ ಪುಟ್ಟರಾಜ ಗವಾಯಿಗಳ ಶಿಷ್ಯ ಬಳಗದವರಾದ ವೆಂಕಟೇಶ ಕುಮಾರ ಅಲ್ಕೋಡ್, ಮಹಿಬೂಬ ಸಾಬ, ವಿಶ್ವೇಶ್ವರಯ್ಯ ಹಿರೇಮಠ, ಆನಂದ ಹೂಗಾರ, ಮನೋಹರ ಹಿರೇಮಠ, ಹನುಮಂತ ಕುಮಾರ, ಪ್ರಕಾಶ ಹೂಗಾರ, ಮೋನಮ್ಮ ಸೇರಿದಂತೆ ರಾಷ್ಟ್ರ, ಅಂತರಾಷ್ಟ್ರೀಯ ಕಲಾವಿಧರಿಂದ ವಿಶೇಷ ಸ್ವರ ನಮನ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಆರು ಜನ ಕಲಾವಿಧರಿಗೆ ಪುಟ್ಟರಾಜ ಶ್ರೀ ಪ್ರಶಸ್ತಿ :
ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಕಾಶವಾಣಿ ಕಲಾವಿಧರಾದ ಶಿವಕುಮಾರ ಹಿರೇಮಠ, ವಿರುಪಾಕ್ಷಯ್ಯ ಹಿರೇಮಠ ವಂದಲಿ, ಮೌನೇಶ ಕುಮಾರ ಹೂಗಾರ ಛಾವಣಿ, ಅಂಬಯ್ಯ ನುಲಿ, ಗದಗ ಪಿಪಿಜಿ ಕಾಲೇಜಿನ ಪ್ರಾಚಾರ್ಯ ಮೃತ್ಯಂಜಯ ಹಿರೇಮಠ, ಖ್ಯಾತ ಹಿನ್ನಲೆ ಗಾಯಕ ಅರುಣ್ ಕಾರ್ನಾಡ್ ಅವರಿಗೆ ಇದೇ ಸಮಾರಂಭದಲ್ಲಿ ಪುಟ್ಟರಾಜ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಸಮಾರಂಭದಲ್ಲಿ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು, ಮುರುಘೇಂದ್ರ ಶಿವಯೋಗಿಗಳು, ಮಾತೆ ಮಾಣಿಕೇಶ್ವರಿ ಅಮ್ಮನವರು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಸಮಾರಂಭವನ್ನು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಡಾ.ಕಲ್ಲಯ್ಯಜ್ಜನವರು ಉದ್ಘಾಟಿಸಲಿದ್ದಾರೆ. ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಶಾಸಕ ಮಾನಪ್ಪ ವಜ್ಜಲ್ ಪುಷ್ಟಾರ್ಚನೆ ಮಾಡಲಿದ್ದಾರೆ. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರು ಸಂಗೀತ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಹೆಡಿಗೊಂಡ ಶಾಸ್ತ್ರೀಗಳು, ವಿವಿ ಸಂಘದ ಆಡಳಿತಾಧಿಕಾರಿಗಳು ಸಮಾರಂಭಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಮಾರಂಭಕ್ಕೆ ಪುಟ್ಟರಾಜ ಗವಾಯಿಗಳು ( Puttaraja Gavayigalu )ಶಿಷ್ಯರು, ಭಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗುರು ಪುಟ್ಟರಾಜ ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರಯ್ಯ ಹಿರೇಮಠ, ಉಪಾಧ್ಯಕ್ಷ ಸಂಗಮೇಶ ಕುಂಬಾರ, ಮಹಾಂತೇಶ ಹೂಗಾರ, ಸೇರಿದಂತೆ ಇನ್ನಿತರಿದ್ದರು.