ರಾಯಚೂರಿನ ಟ್ಯಾಗೋರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜನೆ
ಲಿಂಗಸುಗೂರು : ಗ್ರಾಮೀಣ ಭಾಗದ ಯುವಕ-ಯುವತಿಯಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ದೃಷ್ಠಿಯಿಂದ 2025 ಜನೆವರಿ 05ರಂದು ರಾಯಚೂರಿನ ಟ್ಯಾಗೋರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ 3ನೇ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆ (Quiz competition )ಏರ್ಪಡಿಸಲಾಗಿದೆ ಎಂದು ಉಪನ್ಯಾಸಕ ಅಮರೇಶ ವೆಂಕಟಾಪುರ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಭಾಗದ ಯುವ ಜನಾಂಗದವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಯತಾರು ಕುರಿತಾಗಿ ಜಾಗೃತಿ ಮೂಡಿಸುವ ಉದ್ದೇಶ ಹಾಗೂ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ಮಹತ್ವದ ಉದ್ದೇಶದಿಂದ ಸಹಾಯಕ ಪ್ರಾಧ್ಯಾಪಕ ಡಾ.ಮಾರುತಿ ಕುಮಾರ ಮಲದಕಲ್ ನಾಯಕತ್ವದಲ್ಲಿ ಮಲದಕಲ್ ಗೆಳೆಯರ ಬಳಗ, ದೇವದುರ್ಗದ ಜ್ಞಾನವೃಕ್ಷ ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ ಕೇಂದ್ರ ಸಹಯೋಗದಲ್ಲಿ ಮೂರನೇ ಭಾರಿಗೆ ರಾಜ್ಯಮಟ್ಟದ ರಸ ಪ್ರಶ್ನೆ ಸ್ಪರ್ಧೆ (Quiz competition) ಏರ್ಪಡಿಸಲಾಗಿದೆ ಎಂದರು.
ಜನೆವರಿ 5ಕ್ಕೆ ಸ್ಪರ್ಧೆ ಆಯೋಜನೆ :
ಮಲದಕಲ್ ಗ್ರಾಮದ ಆರಾಧ್ಯ ದೈವ ಹುಡೇದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜನೆವರಿ 05ರಂದು ರಾಯಚೂರು ನಗದಲ್ಲಿನ ಟ್ಯಾಗೋರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ರಸ ಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ 100ಕ್ಕೂ ಅಧಿಕ ತಂಡಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿವೆ ಎಂದರು.
ಸಂಸದರಿಂದ ಉದ್ಘಾಟನೆ :
ರಾಜ್ಯಮಟ್ಟದ ರಸ ಪ್ರಶ್ನೆ ಸ್ಪರ್ಧೆಯನ್ನು ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ್ ನಾಯಕ ಉದ್ಘಾಟಿಸಲಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಲದಕಲ್ ನಿಜಾನಂದ ಯೋಗಾಶ್ರಮದ ಗುರುಬಸವ ರಾಜಗುರುಗಳು ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
25 ಸಾವಿರ ಮೊದಲ ಬಹುಮಾನ :
ಸ್ಪರ್ಧೆಯಲ್ಲಿ ಎರಡು ಹಂತಗಳಿದ್ದು, ಮೊದಲನೆಯದಾಗಿ ಬಹು ಆಯ್ಕೆ ವಸ್ತು ನಿಷ್ಠ 100 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತಿದೆ. ನಂತರ ಮೊದಲ ಹಂತದ ಸ್ಪರ್ಧೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ಐದು ತಂಡಗಳಿಗೆ ಮೌಖಿಕ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಅಲ್ಲಿ ವಿಜೇತರಾದ ಮೊದಲ ತಂಡಕ್ಕೆ 25 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪುಸಕ್ತಗಳು,ದ್ವಿತೀಯ ಬಹುಮಾನ 15 ಸಾವಿರ ರೂಪಾಯಿ ನಗದು ಹಾಗೂ ಪುಸಕ್ತಗಳು ಮತ್ತು ತೃತೀಯ ಬಹುಮಾನ 10 ಸಾವಿರ ರೂಪಾಯಿ ನಗದು ಹಾಗೂ ಪುಸಕ್ತಗಳನ್ನು ವಿತರಿಸಲಾಗುವುದು ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡ ಎರಡು ನೂರು ರೂಪಾಯಿ ಶುಲ್ಕ ನೀಡಿ ತಮ್ಮ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 9980874770, 8861148523, 7090335942, 9731468883 ಸಂಪರ್ಕಿಸಬಹುದು, ಜನೆವರಿ 3ರೊಳಗೆ ನೋಂದಣಿ ಮಾಡಬಹುದಾಗಿದೆ ಎಂದರು.
ಈ ವೇಳೆ ಉಪನ್ಯಾಸಕರಾದ ಭೀಮಣ್ಣ ಭಂಡಾರಿ, ದುರಗಪ್ಪ ನಾಯಕ, ಮುಖಂಡರಾದ ಜೀವಾ ನಾಯಕ, ರಮೇಶ ಹಿರೇಮಠ ಇದ್ದರು.