ಮೌನ ಅನುಷ್ಠಾನ ಮಂಗಲ ಸಮಾರಂಭದಲ್ಲಿ ರಂಭಾಪುರಿ ಶ್ರೀಗಳು ಆಶೀರ್ವಚನ
ಲಿಂಗಸುಗೂರು : ಮನುಷ್ಯನಿಗೆ ಶಾಸ್ತ್ರ ಹಾಗೂ ಶಸ್ತ್ರ ಭಯವಿಟ್ಟುಕೊಂಡು ಬದುಕು ಸಾಗಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ (Rambhapuri peetha) ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಸರ್ಜಾಪುರ-ಕುಪ್ಪಿಗುಡ್ಡ ಗ್ರಾಮದಲ್ಲಿ ಬ್ರಹ್ಮ ವಿದ್ಯಾಶ್ರಮದ ಹನುಮಯ್ಯ ತಾತನವರ 175 ದಿನದ ಮೌನ ಅನುಷ್ಠಾನದ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾನವರು ಶಾಸ್ತ್ರ ಮತ್ತು ಶಸ್ತ್ರಕ್ಕೆ ಅಂಜುತ್ತಿಲ್ಲ, ಇದರಿಂದ ಕಾಯ್ದೆ-ಕಾನೂನುಗಳಿಗೆ ತಲೆಭಾಗದೇ ಇರುವಂತಹ ವಾತವಾರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರು ಶಾಸ್ತ್ರ-ಶಸ್ತ್ರ ಅಡಿಯಲ್ಲಿ ಜೀವನ ನಡೆಸಬೇಕು. ಕೆಲ ಸಂದರ್ಭದಲ್ಲಿ ಶಸ್ತ್ರದಿಂದ ಆಗದೇ ಕಾರ್ಯ ಶಾಸ್ತ್ರದಿಂದ ಮನ ಪರಿವರ್ತನೆ ಕಾರ್ಯದಿಂದಾಗಿ ಸರಿದಾರಿಗೆ ತರುವಂತಹ ಕೆಲಸವಾಗಿದೆ ಎಂದರು.
ಜೀವನದಲ್ಲಿ ಜ್ಞಾನ,ಕರ್ಮ ಮುಖ್ಯ :
ಮನುಷ್ಯ ತನ್ನ ಜೀವನದಲ್ಲಿ ಶ್ರೇಯಸ್ಸು ಕಾಣಬೇಕಾದರೆ ಜ್ಞಾನ, ಕರ್ಮ ಇವರೆಡು ಅತಿ ಮುಖ್ಯವಾಗಿದೆ ಇವುಗಳನ್ನು ಯಾರೂ ಮರೆಯಬಾರದು, ವಿರೋಧ ರಹಿತ ಶೈವ ಅದು ವೀರಶೈವ ಧರ್ಮವಾಗಿದೆ. ಅವರ ಅವರ ಧರ್ಮಗಳು ಅವರಿಗೆ ಶ್ರೇಷ್ಠವಾಗಿದ್ದರೂ ಸಾರ್ವತ್ರಿಕ ಬದುಕಿನಲ್ಲಿ ಸಾಮಾಜಿಕ ಚಿಂತನೆ, ರಾಷ್ಟ್ರ ಪ್ರಜ್ಞೆ ಇಲ್ಲದಿದ್ದರೆ ಜೀವ ಜಗತ್ತು ತಲ್ಲಣಗೊಳ್ಳುತ್ತಿದೆ ಎಂದರು.
ಧರ್ಮ ಪರಿಪಾಲನೆಯಿಂದ ಜೀವನದಲ್ಲಿ ಶ್ರೇಯಸ್ಸು :
ಭೌತಿಕ ಬದುಕಿನಲ್ಲಿ ಸುಖ ದು:ಖ ಮತ್ತು ನೋವು ನಲಿವು ಬರುವುದು ಸಹಜ. ಆಧ್ಯಾತ್ಮಿಕ ಸನ್ಮಾರ್ಗದಲ್ಲಿ ಶಾಂತಿ ಸಂತೃಪ್ತಿ ಕಾಣಲು ಸಾಧ್ಯ. ಸತ್ಯ ಶುದ್ಧವಾದ ಧರ್ಮಾಚರಣೆಯಿಂದ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯವಾಗುತ್ತಿದೆ. ಭಗವಂತನಿತ್ತ ಅಮೂಲ್ಯ ಕೊಡುಗೆಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಬದುಕು ಕೊಟ್ಟ ಭಗವಂತನನ್ನು ಎಷ್ಟು ಸ್ಮರಿಸಿದರೂ ಕಡಿಮೆಯೇ ಆಗಿದೆ. ಜೀವನ ಜಂಜಡಗಳಿಂದ ಮುಕ್ತನಾಗಿ ಆತ್ಮ ಜ್ಞಾನವನ್ನು ಪಡೆಯುವ ಗುರಿ ಮನುಷ್ಯನದಾಗಬೇಕು. ತಪಸ್ವಿಗಳ ಸ್ಥಾನಗಳಲ್ಲಿ ವೈರತ್ವ ಪ್ರಾಣಿ-ಜೀವಿಗಳೂ ಕೂಡಾ ಸಾಮರಸ್ಯದಿಂದ ಬಾಳಿದ್ದನ್ನು ಇತಿಹಾಸದ ಪುಟಗಳಿಂದ ತಿಳಿಯುತ್ತೇವೆ. ಆತ್ಮ ಸಾಕ್ಷಾತ್ಕಾರಕ್ಕಾಗಿ ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಬಹು ಮುಖ್ಯವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಸರ್ಜಾಪುರ ಕುಪ್ಪಿಗುಡ್ಡದ ಹನುಮಯ್ಯ ತಾತನವರು 175 ದಿನಗಳ ಮೌನ ತಪೋನುಷ್ಠಾನ ಕೈಗೊಂಡಿರುವುದು ಸಾಮಾನ್ಯವಾದುದಲ್ಲ. ಭಕ್ತರ ಕಲ್ಯಾಣವೇ ಅವರ ಅನುಷ್ಠಾನದ ಮೂಲ ಉದ್ದೇಶವೆಂದರು.
ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ ಮಾತನಾಡಿ,ಇವತ್ತಿನ ಪರಿಸ್ಥಿತಿಯಲ್ಲಿ ಧರ್ಮ ಅಂದಕಾರದಲ್ಲಿ ಅದನ್ನು ಜಾಗೃತಿಗೊಳಿಸಬೇಕಾಗಿದೆ. ರಂಭಾಪುರಿ ಜಗದ್ಗುರುಗಳು ಇಂತಹ ಅಂಧಕಾರದಲ್ಲಿರುವ ಧರ್ಮವನ್ನು ಜಾಗೃತಿಗೊಳಿಸಿ, ಧರ್ಮದ ಬಗ್ಗೆ ಸದಕಾಲ ಹಿತ ಚಿಂತನೆ ಮಾಡುತ್ತಾ ಬಂದಿದ್ದಾರೆ ಎಂದರು. ಪ್ರತಿ ನಿತ್ಯ ರಾಜ್ಯ ಹಾಗೂ ರಾಷ್ಟ್ರದಲ್ಲಿ ಸಂಚಾರ ಮಾಡಿ ಧರ್ಮ ಜಾಗೃತಿಗೊಳಿಸುವ ಕಾಯಕದಲ್ಲಿ ರಂಭಾಪುರಿ ಜಗದ್ಗುರುಗಳು (Rambhapuri peetha )ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಅದ್ಧೂರಿಯಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ :
ಸಮಾರಂಭಕ್ಕೂ ಮುನ್ನಾ ಸರ್ಜಾಪುರ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಉತ್ಸವ ಜರುಗಿತು.
ಸಮಾರಂಭದಲ್ಲಿ ನಂದವಾಡಗಿ ಮಹಾಂತ ಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಸಂತೆಕೆಲ್ಲೂರಿನ ಮಹಾಂತಿನಮಠದ ಮಹಾಂತಲಿಂಗ ಶಿವಾಚಾರ್ಯರು, ದೇವರ ಭೂಪುರ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು, ಮಸ್ಕಿ ರುದ್ರಮುನಿ ಶಿವಾಚಾರ್ಯರು. ಅಂಕುಶದೊಡ್ಡಿ ವಾಮದೇವ ಶಿವಾಚಾರ್ಯರು. ಮಿಟ್ಟಿಮಲ್ಕಾಪುರ ನಿಜಾನಂದ ಸ್ವಾಮಿಗಳು, ಮಾತಾ ನಂದಿಕೇಶ್ವರಿ ಅಮ್ಮನವರು, ಶಾಂಭವಿಮಠ, ಸೋಮಶೇಖರಯ್ಯ ಸ್ವಾಮೀಜಿ, ಹುನುಕುಂಟಿ ಶರಣಯ್ಯ ತಾತನವರು, ಹನುಮಯ್ಯ ತಾತನವರು,ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ ನಾಯಕ, ಭಗೀರಥ ಸಮಾಜದ ಅಧ್ಯಕ್ಷ ಶ್ರೀನಿವಾಸ ಅಮ್ಮಾಪುರ, ಬಿಜೆಪಿ ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರು, ಮಸ್ಕಿ ಬಿಜೆಪಿ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಗ್ರಾ.ಪಂ ಉಪಾಧ್ಯಕ್ಷೆ ರಂಗಮ್ಮ ಮಂಜುನಾಥ ನೆಲೊಗಿ, ಪಿಡಿಓ ಶೋಭಾರಾಣಿ ಭಾಗವಹಿಸಿದ್ದರು.