ಸರಕಾರಿ ವಕೀಲರ ನೇಮಕಾತಿಯಲ್ಲಿ ಮೀಸಲಾತಿ
ಲಿಂಗಸುಗೂರು : ಸರಕಾರಿ ವಕೀಲರ ನೇಮಕಾತಿಯಲ್ಲಿ ಶೇ.24ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸಿಕೊಳ್ಳಲು ಆದೇಶ ಹೊರಡಿಸಿದ್ದರಿಂದ ಎಸ್‍ಸ್ಸಿ, ಎಸ್ಟಿ ವಕೀಲರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ.
ಕಾನೂನು ಇಲಾಖೆ ಸರಕಾರಿ ವಕೀಲರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಪಂಗಡದ ವಕೀಲರನ್ನು ನೇಮಕಾತಿ ಮಾಡಲು ಮೀಸಲಾತಿ ಜಾರಿಗೊಳಿಸುವಂತೆ ಕೂಗು ಬಹುದಿನಗಳಿಂದ ಇತ್ತು ಅದನ್ನು ಸರಕಾರ ಈಡೇರಿಸಿದೆ.
2023ರಲ್ಲಿ ಕಾನೂನು ಇಲಾಖೆಗೆ ಪ್ರಸ್ತಾವನೆ :
ಸರಕಾರಿ ವಕೀಲರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು 2023 ಜೂನ್ 1ರಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ನಿಗಮದ ಅಧಿಕಾರಿಗಳ ಸಭೆ ನಡೆಸಿ, ಸರ್ಕಾರಿ ವಕೀಲರನ್ನು ನೇಮಿಸುವಾಗ ಕನಿಷ್ಠ ಶೇ.24 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸಿಕೊಳ್ಳಲು ಕಾನೂನು ಇಲಾಖೆಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿ ಸಭಾ ನಡವಳಿಯಲ್ಲಿ ಕ್ರಮವಹಿಸಲು ನಿರ್ದೇಶನ ನೀಡಿದ್ದರಿಂದ ಅದರಂತೆ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಕನಿಷ್ಠ ಶೇ.24 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರನ್ನು ನೇಮಿಸುವಂತೆ ಶೇ.24 ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರಾತಿನಿಧ್ಯತೆ ನೀಡಬಹುದೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆಯನ್ನು ಕಾನೂನು ಇಲಾಖೆಗೆ ಕಳುಹಿಸಲಾಗಿತ್ತು.
ಕಾನೂನು ಇಲಾಖೆ ಟಿಪ್ಪಣಿ :
ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಅನುಸೂಚಿತ ಜಾತಿಗಳಿಗೆ ಶೇಕಡ 17ರಷ್ಟು ಮತ್ತು ಅನುಸೂಚಿತ ಪಂಗಡಗಳಿಗೆ ಶೇಕಡ 7ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ. ಆ ಕಾರಣದಿಂದ ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅಧ್ಯಾದೇಶದಲ್ಲಿ ಹೇಳಿರುವಂತೆ ಒಟ್ಟು ಶೇಕಡ 24ರಷ್ಟು ಮೀಸಲಾತಿಯನ್ನು ಕಲ್ಪಿಸಬಹುದಾಗಿದೆ ಕಾನೂನು ಇಲಾಖೆಯ ಟಿಪ್ಪಣಿಯಲ್ಲಿ ಅಭಿಪ್ರಾಯ ನೀಡಲಾಗಿದೆ.
ಮೀಸಲಾತಿ ಜಾರಿಗೊಳಿಸಿ ಆದೇಶ :
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ವಕೀಲರನ್ನು ನೇಮಿಸುವ ಸಂದರ್ಭದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಯನ್ನು ಪರಿಶಿಷ್ಟ ಜಾತಿ ವಕೀಲರಿಗೆ ಶೇ17 ಮತ್ತು ಪರಿಶಿಷ್ಟ ಪಂಗಡಗಳ ವಕೀಲರಿಗೆ ಶೇ.7 ಸೇರಿ ಒಟ್ಟು ಶೇ.24 ರಷ್ಟು ಮೀಸಲಾತಿಯನ್ನು ಕಲ್ಪಿಸಿ ರಾಜ್ಯಾಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಕಲಾವತಿ ಎಸ್.ವಿ ಅವರು ನವೆಂಬರ್ 30ರಂದು ಆದೇಶ ಹೊರಡಿಸಿದ್ದಾರೆ.