50 ಬಿಇಒ,48 ಎಡಿಗಳಿಗೆ ಶೋಕಾಸ್ ನೋಟಿಸ್
ಲಿಂಗಸುಗೂರು : 2024-25 ನೇ ಸಾಲಿನಲ್ಲಿ ಪಿ ಎಂ ಪೋಷಣ್ ಯೋಜನೆಯಡಿ ರಾಜ್ಯ ಸರ್ಕಾರದ ಮತ್ತು ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಆರ್ಥಿಕ ಅನುದಾನದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಾರದಲ್ಲಿ 06 ದಿನಗಳಂದು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಣೆ ಮಾಡದ ರಾಜ್ಯದ 50 ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ 48 ಪಿಎಂ ಪೋಷಣ್ ಸಹಾಯಕ ನಿರ್ದೇಶಕರಿಗೆ ಶಿಕ್ಷಣ ಇಲಾಖೆ (Show Cause Notice )ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ರಾಜ್ಯದಲ್ಲಿ ವಾರದ ಎಲ್ಲಾ 06 ದಿನಗಳಿಗೆ ಪ್ರತಿ ವಿದ್ಯಾರ್ಥಿಗೆ ಮೊಟ್ಟೆ ವಿತರಣೆಗೆ 2024 ಸೆ.25ರಂದು ಸರ್ಕಾರವು ಅಧಿಕೃತ ಚಾಲನೆಯನ್ನು ನೀಡಿರುತ್ತದೆ. ರಾಜ್ಯ ಸರ್ಕಾರದ ಒಂದು ಪ್ರತಿಷ್ಟಿತ ಕಾರ್ಯಕ್ರಮವಾಗಿದ್ದು ಮಕ್ಕಳಲ್ಲಿರುವ ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹು ಪೋಷಕಾಂಶಗಳ ನ್ಯೂನತೆಯನ್ನು ನಿವಾರಿಸಲು, ಮಕ್ಕಳ ದೈಹಿಕ ಆರೋಗ್ಯಯುತ ಬೆಳವಣಿಗೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮ ಸರ್ಕಾರಿ ಹಾಗೂ ಅನುಧಾನಿತ ಶಾಲೆಗಳಲ್ಲಿ ಅನುಷ್ಠಾನಗೊಳಿಸಿರುತ್ತದೆ. ಇದರ ಪೂರ್ಣ ಪ್ರಮಾಣದ ಪ್ರಯೋಜನವನ್ನು ಶಾಲಾ ಮಕ್ಕಳು ಪಡೆಯುವಂತಾಗಬೇಕೆಂಬುದು ಸರ್ಕಾರದ ಆಶಯವಾಗಿರುತ್ತದೆ. ಇದಕ್ಕೆ ಬೆಂಬಲವಾಗಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕಿನ ಅನುಷ್ಠಾನಾಧಿಕಾರಿಗಳು, ಶಾಲಾ ಮುಖ್ಯಸ್ಥರು ಸದರಿ ಕಾರ್ಯಕ್ರಮದ ಅನುಷ್ಠಾನದ ಉದ್ದೇಶವನ್ನು ಸಮರ್ವಕವಾಗಿ ಮನವರಿಕೆಮಾಡಿಕೊಂಡು ಯಾವುದೇ ಆರೋಪಗಳಿಗೆ ಅವಕಾಶ ಮಾಡಿಕೊಡದೆ ಅತ್ಯಂತ ಕಾಳಜಿಯಿಂದ ಯಶಸ್ವಿಯಾಗಿ ಗುರಿ ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಎಪಿಎಫ್ ತಂಡದಿಂದ ಮೌಲ್ಯಮಾಪನ ಅಧ್ಯಯನ :
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸದರಿ ಕಾರ್ಯಕ್ರಮದ ಅನುಷ್ಟಾನದ ಕ್ರಮಗಳ ಬಗ್ಗೆ ಅಜೀಂ ಪ್ರೇಮಜಿ ಫೌಂಡೇಶನ್ ಫಾರ್ ಡೆವಲಪಮೆಂಟ್ (ಎಪಿಎಫ್) ಸಂಸ್ಥೆಯ ಪರಿಶೀಲನಾ ತಂಡವು ಶಾಲಾ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ರಾಜ್ಯದಲ್ಲಿ Random ಆಗಿ 04 ವಿಭಾಗಗಳು ಸೇರಿದಂತೆ ಒಟ್ಟು 357 ಶಾಲೆಗಳಿಗೆ ಭೇಟಿ ನೀಡಿ ಪೈಲಟ್ ಕಾರ್ಯಕ್ರಮದ ಮೌಲ್ಯಮಾಪನದ ಅಧ್ಯಯನ ಕಾರ್ಯವನ್ನು ಕೈಗೊಂಡು ಅದಕ್ಕೆ ವರದಿ ಸಿದ್ಧಪಡಿಸಿ 2024 ಅಕ್ಟೋಬರ್ 15ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮೌಲ್ಯಮಾಪನ ಅಧ್ಯಯನ ವರದಿ ಸಲ್ಲಿಸಿದ್ದಾರೆ.
ಅಧ್ಯಯನದಲ್ಲಿ ಕಂಡ ಕರ್ತವ್ಯ ಲೋಪ :
ರಾಜ್ಯದ 357 ಶಾಲೆಗಳ ಪೈಕಿ 66 ಶಾಲೆಗಳಲ್ಲಿ ಪೂರಕ ಪೌಷ್ಟಿಕ ಆಹಾರವಾಗಿ ವಿತರಿಸಬೇಕಾಗಿದ್ದ ಮೊಟ್ಟೆಯನ್ನು ಇದುವರೆವಿಗೂ ವಿತರಣೆ ಮಾಡಿಲ್ಲ, ಈ ಶಾಲೆಗಳಲ್ಲಿ ಶೇಕಡ 30 ರಷ್ಟು ವಿದ್ಯಾರ್ಥಿಗಳು ಮೊಟ್ಟೆ ಸೇವಿಸಲು ತಮ್ಮ ಒಪ್ಪಿಗೆಯನ್ನು ನೀಡಿದ್ದರೂ ಸಹ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಿರುವುದಿಲ್ಲ, ಬದಲಾಗಿ ಈ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ಮತ್ತು ಬಾಳೆ ಹಣ್ಣನ್ನು ವಿತರಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಮೊಟ್ಟೆಯನ್ನು ವಿತರಿಸದೇ ಕೇವಲ ಶೇಂಗಾ ಚಿಕ್ಕಿ ಇಲ್ಲವೇ ಬಾಳೆಹಣ್ಣನ್ನು ಮಾತ್ರ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಿರುತ್ತಾರೆ. ಮೊಟ್ಟೆ ಸ್ವೀಕರಿಸುವ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಇದ್ದರೂ ಸಹ ಇವರಿಗೆ ಮೊಟ್ಟೆ ವಿತರಣೆ ಮಾಡಿರುವುದಿಲ್ಲ ಎಂಬುದು ಅಧ್ಯಯನದ ಮೂಲಕ ಕಂಡುಬಂದಿದೆ.
ಮೊಟ್ಟೆ ವಿತರಣೆಗೆ ಹಿಂದೇಟು :
ಎಪಿಎಫ್ ಸಂಸ್ಥೆ ಭೇಟಿ ನೀಡಿದ 367 ಶಾಲೆಗಳಲ್ಲಿ ಶೇಕಡ 64 ಪ್ರಮಾಣದಷ್ಟು ಮೊಟ್ಟೆಯನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಇರುತ್ತಾರೆ. ಅದರೂ ಸಹ ಹಲವು ಶಾಲೆಗಳಲ್ಲಿ ಇವರಿಗೆ ಮೊಟ್ಟೆ ವಿತರಣೆ ಮಾಡುತ್ತಿರುವುದಿಲ್ಲ. ಪರ್ಯಾಯವಾಗಿ ಶೇಂಗಾ ಚಿಕ್ಕಿ ಹಾಗೂ ಬಾಳೆ ಹಣ್ಣನ್ನು ಮಾತ್ರ ವಿತರಿಸುತ್ತಿದ್ದಾರೆ. ಮೊಟ್ಟೆಯನ್ನು ಸ್ವೀಕರಿಸದೇ ಇರುವ ವಿದ್ಯಾರ್ಥಿಗಳಿಗೆ ಬಾಳೆಹಣ್ಣನ್ನು ಮೊದಲ ಆದ್ಯತೆಯಾಗಿ ವಿತರಿಸಬೇಕಿರುತ್ತದೆ. ಆದರೆ ಹಾಗೇ ವಿತರಿಸದೇ ಬರೀ ಶೇಂಗಾ ಚಿಕ್ಕಿಯನ್ನೇ ವಿತರಿಸುತ್ತಿರುವುದು ಕಂಡು ಬಂದಿರುತ್ತದೆ. ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಶೇಂಗಾ ಚಿಕ್ಕಿಯು ತೂಕದಲ್ಲಿ ನಿಗಧಿಪಡಿಸಿರುವ ಪ್ರಮಾಣದಲ್ಲಿ ಇರದೇ ಇರುವುದು ಕಂಡುಬಂದಿರುತ್ತದೆ. ನಿಗಧಿಪಡಿಸಿರುವ ಶೇಂಗಾ ಚಿಕ್ಕಿಯ ವಿತರಣೆಯ ಪ್ರಮಾಣವು ಒಬ್ಬ ವಿದ್ಯಾರ್ಥಿಗೆ ಒಂದು ಬಿಲ್ಲೆಯಂತೆ ಕನಿಷ್ಠ 35 ಗ್ರಾಂ ನಿಂದ 40 ಗ್ರಾಂ ತೂಕ ಪ್ರಮಾಣವಿರಬೇಕಾಗಿದ್ದು, ತೂಕದ ಪ್ರಮಾಣದಲ್ಲಿ 30 ಗ್ರಾಂ ಗಿಂತ ಕಡಿಮೆ ಇರುವುದು ಕಂಡುಬಂದಿರುತ್ತದೆ.
ಕರ್ತವ್ಯದಲ್ಲಿ ಬಿಇಒ ನಿರ್ಲಕ್ಷ್ಯತೆ ವಿರುದ್ಧ ಇಲಾಖೆ ಗರಂ :
ಎಪಿಎಫ್ ಸಂಸ್ಥೆಯ ವರದಿಯ ಅಂಶಗಳನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿರುತ್ತದೆ. ಆನ್‌ಲೈನ್ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಸುತ್ತೋಲೆ ಹಾಗೂ ತರಬೇತಿಗಳಲ್ಲಿ ಮೊಟ್ಟೆ ಸೇವನೆ ಮಾಡುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಾಗಿ ಮೊಟ್ಟೆಯನ್ನೇ ವಿತರಿಸುವಂತೆ ಕಡ್ಡಾಯ ನಿರ್ದೇಶನ ನೀಡಲಾಗಿರುತ್ತದೆ. ಅದಾಗ್ಯೂ ಸಹ ಮೊಟ್ಟೆಯನ್ನು ವಿತರಿಸದೇ ಮೊಟ್ಟೆ ಸೇವಿಸುವ ಮಕ್ಕಳನ್ನು ಮೊಟ್ಟೆ ಸೇವನೆಯಿಂದ ವಂಚಿತರನ್ನಾಗಿ ಮಾಡಿರುವುದು ವಿಷಾದದ ಸಂಗತಿಯಾಗಿರುತ್ತದೆ. ಇದರ ಪರಿಣಾಮದಿಂದಾಗಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶ ಈಡೇರಿಕೆಯಾಗದೆ ಇರುವುದು ಕಂಡುಬಂದಿರುತ್ತದೆ. ಈ ಕಾರ್ಯಕ್ರಮದ ಪೂರ್ಣ ಜವಾಬ್ದಾರಿಯನ್ನು ತಾಲ್ಲೂಕು ಹಂತದ ಅನುಷ್ಠಾನಾಧಿಕಾರಿಗಳಾದ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಮತ್ತು ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕರುಗಳಿಗೆ ನೀಡಲಾಗಿರುತ್ತದೆ. ಆದರೆ ಈ ಜವಾಬ್ದಾರಿಯನ್ನು ಸಮಪರ್ಕವಾಗಿ ನಿರ್ವಹಿಸದೇ ಕರ್ತವ್ಯದಲ್ಲಿ ಉದಾಸೀನತೆ ಮತ್ತು ಕರ್ತವ್ಯ ನಿರ್ಲಕ್ಷ್ಯತೆ ತೋರಿರುವುದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ.
ಶಿಸ್ತು ಕ್ರಮಕ್ಕೆ ಎಚ್ಚರಿಕೆ :
ತಾಲ್ಲೂಕು ಹಂತದ ಕಾರ್ಯಕ್ರಮದ ಅನುಷ್ಠಾನಾಧಿಕಾರಿಗಳಾದ ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಪಿ.ಎಂ.ಪೋಷಣ್ ಸಹಾಯಕ ನಿರ್ದೇಶಕರುಗಳಾದ ತಾವುಗಳು ತಮ್ಮ ವ್ಯಾಪ್ತಿಯಲ್ಲಿರುವ ಒಟ್ಟು 66 ಶಾಲೆಗಳಲ್ಲಿ ಯಾವುದೇ ಶಾಲೆಗಳಿಗೆ ಇದುವರೆಗೂ ಖುದ್ದಾಗಿ ಭೇಟಿ ಕೊಡದೇ ಇರುವುದು. ಪೂರಕ ಪೌಷ್ಠಿಕ ಆಹಾರವಾದ ಮೊಟ್ಟೆ ವಿತರಣೆಯ ಬಗ್ಗೆ ಖಾತರಿಪಡಿಸಿಕೊಳ್ಳದೇ ಇರುವುದು ನಿಮ್ಮ ಬೇಜವಾಬ್ದಾರಿಯನ್ನು ಎತ್ತಿ ತೋರಿಸಿರುತ್ತದೆ. ಇಲಾಖೆಯಿಂದ ಮಾರ್ಗಸೂಚಿ ಸುತ್ತೋಲೆಯನ್ನು ನೀಡಿದ್ದರೂ ಸಹ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ, ಸೂಕ್ತ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳದೇ ಇರುವುದು ಸ್ಪಷ್ಟವಾಗಿ ಕಂಡುಬಂದಿರುತ್ತದೆ. ಈ ನಿಟ್ಟಿನಲ್ಲಿ ಇಲಾಖೆಯ ಪ್ರಮುಖ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸದೇ ಇರುವ ಬಗ್ಗೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕರ್ನಾಟಕ ರಾಜ್ಯ ನಾಗರೀಕ ಸೇವಾ (ನಡತೆ) ನಿಯಮ 2021ರ ಅಡಿಯಲ್ಲಿ ಶಿಸ್ತು ಕ್ರಮ ಏಕೆ ಜರುಗಿಸಬಾರದು ಎಂಬುದಕ್ಕೆ (Show Cause Notice )ನೋಟೀಸನ್ನು ಜಾರಿಗೊಳಿಸಲಾಗುತ್ತಿದ್ದು. ಈ ನೋಟೀಸು (Show Cause Notice ) ತಲುಪಿದ 7 ದಿನಗಳೊಳಗಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸಮಜಾಯಿಷಿಯನ್ನು ನೀಡಲು ತಿಳಿಸಿದೆ. ತಪ್ಪಿದ್ದಲ್ಲಿ ಈ ಕಾರ್ಯಕ್ರಮದ ವಿಫಲತೆಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು (Show Cause Notice) ನೋಟಿಸ್ ನಲ್ಲಿ ಎಚ್ಚರಿಸಿದ್ದಾರೆ.
ರಾಯಚೂರು ಜಿಲ್ಲೆಯ ನಾಲ್ಕು ಜನರಿಗೆ ನೋಟಿಸ್ :
ರಾಜ್ಯದ 50 ಬಿಇಒಗಳ ಪೈಕಿ ರಾಯಚೂರು ಜಿಲ್ಲೆಯ ದೇವದುರ್ಗ, ಮಾನವಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಪಿಎಂ ಪೋಷಣ್ ಸಹಾಯಕ ನಿರ್ದೇಶಕರಿಗೆ ಕಾರಣ ಕೇಳಿ (Show Cause Notice )ನೋಟಿಸ್ ಜಾರಿ ಮಾಡಲಾಗಿದೆ.