ಮಾಜಿ ಸೈನಿಕರಿಗೆ ಹಾಗೂ ರೈತರಿಗೆ ಗೌರವ :
ಲಿಂಗಸುಗೂರು : ದೇಶದ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆಂದರೆ ಅದರ ಹಿಂದೆ ದೇಶದ ಗಡಿ ಕಾಯುವ (Soldiers work )ಸೈನಿಕರ ಶ್ರಮವಿದೆ ಎಂದು ಯರಡೋಣಾ ಸಿದ್ಧರಾಮೇಶ್ವರ ಗುರುಮಠದ ಪೀಠಾಧಿಪತಿ ಮುರುಘೇಂದ್ರ ಶಿವಯೋಗಿಗಳು ಹೇಳಿದರು.
ಪಟ್ಟಣದ ಎಪಿಎಂಸಿಯಲ್ಲಿ ಅಮರೇಶ್ವರ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘ ಹಾಗೂ ಎಪಿಎಂಸಿ ಗಜಾನನ ಸಮಿತಿ ಹಮ್ಮಿಕೊಂಡಿದ್ದ ಗಣೇಶ ಹಬ್ಬದ ಅಂಗವಾಗಿ ಮಾಜಿ ಸೈನಿಕರಿಗೆ ಹಾಗೂ ರೈತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೈನಿಕರು ಗಡಿಯಲ್ಲಿ ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ದೇಶ ಕಾಯುತ್ತಾ ಜನರಿಗೆ ರಕ್ಷಣೆ ನೀಡುತ್ತಿದ್ದಾರೆ. ಯುವಕರು ದೇಶಪ್ರೇಮ ಬೆಳೆಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು.
ಆದರ್ಶಪ್ರಾಯವಾಗಬೇಕು :
ಸೈನಿಕರ ಸೇವೆ ಸ್ಮರಿಸುವುದು ಪ್ರತಿಯೊಬ್ಬರು ಕರ್ತವ್ಯವಾಗಿದೆ. ಅದೇ ದೇಶಕ್ಕೆ ಅನ್ನ ನೀಡುವ ರೈತರು ಇಲ್ಲದಿದ್ದರೆ ಜೀವನವೇ ಇಲ್ಲ,ಈಗಾಗಿ ರೈತರು ಹಾಗೂ ಸೈನಿಕರು ದೇಶದ ಎರಡು ಕಣ್ಣುಗಳು ಇದ್ದಂತೆ ಎಂದರು. ದೇಶದ ಸಂಸ್ಕೃತಿ ಹೆಮ್ಮೆಯ ಪ್ರತೀಕವಾಗಿದೆ. ಜಗತ್ತಿಗೆ ಸಂಸ್ಕೃತಿ ಮಹತ್ವ ಸಾರಿದ ದೇಶವಾಗಿದೆ. ಹಿರಿಯರಿಗೆ ಗೌರವ ನೀಡುವುದನ್ನು ಹಾಗೂ ತಂದೆ-ತಾಯಿಯನ್ನು ಪೂಜಿಸುವ ಸಂಸ್ಕೃತಿ ಇಂದಿನ ಯುವ ಪೀಳಿಗೆಗೆ ಅಗತ್ಯವಾಗಿದೆ. ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೋಜು ಮಸ್ತಿವಾಗಬಾರದು. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಬೇಕು ಎಂದರು.
ಈ ವೇಳೆ ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ, ಅಮರೇಶ್ವರ ಗಂಜ್ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಶಂಕರಗೌಡ ಅಮರಾವತಿ, ಗೌರವಾಧ್ಯಕ್ಷ ಮಹಾಂತೇಶ ನರಕಲದನ್ನಿ ಸೇರಿದಂತೆ ಅನೇಕರಿದ್ದರು.