suddiduniya.com

Sports Club :ಹಾಳಾಯಿತು ಬ್ರಿಟಿಷರು ಕಟ್ಟಿಸಿದ್ದ ಸ್ಪೋರ್ಟ್ಸ್ ಕ್ಲಬ್

Sports Club

ಲಿಂಗಸುಗೂರು : ಬ್ರಿಟಿಷರ ಆಡಳಿತದಲ್ಲಿನ ಅಧಿಕಾರಿಗಳ ಮನರಂಜನೆಗಾಗಿ ಕರಡಕಲ್ ಕೆರೆ ತಟದಲ್ಲಿ ಎತ್ತರದ ಪ್ರದೇಶದಲ್ಲಿ ಸುಂದರವಾಗಿ ನಿರ್ಮಿಸಿದ ಅಧಿಕಾರಿಗಳ ಸ್ಪೋರ್ಟ್ಸ್ ಕ್ಲಬ್‍ (Sports Club )ಇಂದು ನಿರ್ವಹಣೆ ಕೊರತೆಯಿಂದಾಗಿ ಹಾಳಾಗಿದೆ.

ಕ್ರಿ.ಶ.  1724 ರಿಂದ 1948 ವರೆಗೆ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಲಿಂಗಸೂಗೂರಿನಲ್ಲಿ ಹೈದರಾಬಾದ್ ನಿಜಾಮರು, ಬ್ರಿಟಿಷರೊಂದಿಗೆ ಸಂದಾನ ಮಾಡಿಕೊಂಡು ಸಂಸ್ಥಾನಗಳ ಆಡಳಿತ ನಡೆಸುತ್ತಿದ್ದರು. ಇದು ಅಂದು ‘ಛಾವಣಿ’ ಎಂದು ಕರೆಯಲ್ಪಟ್ಟಿತ್ತು. ಛಾವಣಿಯೆಂದರೆ ಮಿಲಿಟರಿ ಏರಿಯಾ, ಸೈನಿಕರ ತಾಣವಾಗಿಸಿಕೊಂಡಿದ್ದರು.

ಬ್ರಿಟಿಷರ ಆಡಳಿತದಲ್ಲಿ ಈಗಿನ ಲಿಂಗಸುಗೂರು ಅಂದು ಛಾವಣಿ ಎಂದು ಕರೆಯಲಾಗುತ್ತಿದ್ದರು. ಬ್ರಿಟಿಷರ ತಮ್ಮ ಆಡಳಿತದಲ್ಲಿ ನಿರ್ಮಾಣ ಮಾಡಿದ ಲಿಂಗಸೂಗೂರಿನ ೧೦೧ ಬಾಗಿಲುಗಳ ಬಂಗಲೆ ಬೃಹತ್ ಕಟ್ಟಡಗಳ ಸಮುಚ್ಚಯವಾಗಿದೆ. 22 ಅಡಿ ಎತ್ತರ ಇರುವ ಈ ಕಟ್ಟಣವನ್ನು ಇಂದು ಸಹಾಯಕ ಆಯುಕ್ತರ ಕಚೇರಿಯನ್ನಾಗಿ ಉಪಯೋಗಿಸಲಾಗುತ್ತಿದೆ. ಲಿಂಗಸೂಗೂರಿನಲ್ಲಿರುವ ಪ್ರಮುಖ ಕಟ್ಟಡಗಳೆಂದರೆ ವಿ.ಸಿ.ಬಿ.ಹಳೇ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ನಿರೀಕ್ಷಣ ಮಂದಿರ, ಕೆರೆಯ ದಂಡೆಯ ಮೇಲಿರುವ ಅಧಿಕಾರಿಗಳ ಕ್ಲಬ್‌,  ಡಿವೈಎಸ್ಪಿ ಕಚೇರಿ, ಕಾರಗೃಹ ಸೇರಿದಂತೆ ಅನೇಕ ಕಟ್ಟಡಗಳು ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿತ್ತು, ಆದರೆ ಡಿವೈಎಸ್ಪಿ, ಹಳೆ ವಿಸಿಬಿ ಕಾಲೇಜಿನ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಬಿಇಒ ಕಚೇರಿ ಹಾಗೂ ಪ್ರವಾಸಿಮಂದಿರ ಕಟ್ಟಡಗಳು ಬಳಕೆಯಿಲ್ಲದೆ ಪಾಳುಬಿದ್ದಿವೆ. ಗಾರೆ ಇಟ್ಟಿಗೆಗಳಿಂದ ನಿರ್ಮಿಸಿದ ಈ ಕಟ್ಟಡಗಳು ಬೇಸಿಗೆಯಲ್ಲಿ ತಂಪಾಗಿರುತ್ತವೆ. ಈ ಕಟ್ಟಡದ ಬಾಗಿಲುಗಳಿಗೆ ಬರ್ಮಾದೇಶದ ತೇಗವನ್ನು ಬಳಸಲಾಗಿದೆ. ಅಂದಿನ ಆಡಳಿತದಲ್ಲಿ ನಿರ್ಮಿಸಿದ ಕಟ್ಟಡಗಳಲ್ಲಿ ಕೆಲವು ಇಂದಿಗೂ ಗಟ್ಟಿಮುಟ್ಟಾಗಿವೆ. ಆದರೆ ನಿರ್ವಹಣೆ ಕೊರತೆಯಿಂದಾಗಿ ಇನ್ನೂ ಕೆಲವು ಶಿಥಿಲಾವಸ್ಥೆ ತಲುಪಿವೆ. ಆ ಸಾಲಿಗೆ  ಸ್ಪೋರ್ಟ್ಸ್ ಕ್ಲಬ್‌ ಕೂಡಾ ಸೇರುತ್ತಿದೆ.

Sports Club

ಪಟ್ಟಣದ ಕರಡಕಲ್ ಕೆರೆ ತಟದಲ್ಲಿರುವ ಅಧಿಕಾರಿಗಳ ಸ್ಪೋರ್ಟ್ಸ್ ಕ್ಲಬ್‌ ಕಟ್ಟಡಕ್ಕೆ ಸುಮಾರು 135ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಸುಮಾರು 315 ಎಕರೆ ವಿಶಾಲವಾದ ಕರಡಕಲ್ ಕೆರೆ ದಡದಲ್ಲಿ ಬ್ರಿಟಿಷ್‌ ಅಧಿಕಾರಿಗಳು ತಮಗೆ ವಿಶ್ರಾಂತಿಗಾಗಿ ಹಾಗೂ ಮನರಂಜನೆಗಾಗಿ ಸ್ಪೋರ್ಟ್ಸ್ ಕ್ಲಬ್‌ನಿರ್ಮಿಸಿದ್ದರು. ಶತಮಾನ ಕಂಡಿದ್ದರೂ ಗಟ್ಟಿಮುಟ್ಟಾದ ಸ್ಪೋರ್ಟ್ಸ್ ಕ್ಲಬ್‍ಇಂದು ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದು ಹಾಳಾಗಿದೆ.

Sports Club

ಅಧಿಕಾರಿಗಳ ಕ್ಲಬ್ ಈಗಲೂ ಇದನ್ನು ಸ್ಪೋರ್ಟ್ಸ್ ಕ್ಲಬ್‌ನ್ನಾಗಿ ಬಳಕೆ ಮಾಡಲಾಗುತ್ತಿದೆ. ಇದರ ಆವರಣದಲ್ಲಿ ಟೆನ್ನಿಸ್‌ಕೋರ್ಟ್‌ಇದ್ದು ಪಟ್ಟಣದ ಗಣ್ಯರು, ಕೆಲ ಅಧಿಕಾರಿಗಳು ಇಲ್ಲಿ ನಿತ್ಯವೂ ಟೆನ್ನಿಸ್‌ಆಡುತ್ತಾರೆ. ಗತಕಾಲದ ವೈಭವವನ್ನು ಸಾರಿ ಹೇಳುತ್ತಿರುವ ಕ್ಲಬ್‌ನ ಕಟ್ಟಡದ ಎಡಭಾಗದ ಕೊಠಡಿಯ ಗೋಡೆ, ಛತ್ತು ಸಂಪೂರ್ಣ ಬಿರುಕು ಬಿಟ್ಟಿದ್ದರಿಂದ ಇದನ್ನು ದುರಸ್ಥಿ ಮಾಡಲು ಹಿಂದಿನ ಶಾಸಕ ಡಿ.ಎಸ್.ಹೂಲಗೇರಿ ಅವರು 10 ಲಕ್ಷ ರೂಪಾಯಿ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಿಗೊಳಿಸಿ ಹಳೆಯ ಕೊಠಡಿ ನೆಲಸಮ ಮಾಡಿ ಓಪನ್ ಛತ್ ಹಾಕಲಾಗಿದೆ ಆದರೆ ಗುತ್ತಿಗೆದಾರರಿಗೆ ಬಿಲ್‍ಹಾಗಿಲ್ಲ ಎಂಬ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ ಎನ್ನಲಾಗಿದೆ. ಇನ್ನುಳಿದ ಕೊಠಡಿಗಳ ಬಾಗಿಲು,ಕಿಟಕಿಗಳು ಕಿತ್ತಿಹೋಗಿವೆ. ಇಡೀ ಸ್ಪೋರ್ಟ್ಸ್ ಕ್ಲಬ್‍ನ ಕಟ್ಟಡ ಸಂಪೂರ್ಣ ಹಾಳಾಗಿ ಭೂತ ಬಂಗಲೆ ರೀತಿಯಲ್ಲಿ ಆಗಿದೆ. ರಾತ್ರಿವೇಳೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಕಟ್ಟಡದ ಕಾಂಪೌಂಡ್‌ಗೋಡೆ ಕೂಡಾ ಅಲ್ಲಲ್ಲಿ ಕುಸಿದಿದೆ. ಐತಿಹಾಸಿಕ ಕಟ್ಟಡ ಇಂದು ನಿರ್ವಹಣೆ ಕೊರತೆಯಿಂದಾಗಿ ಅವಸಾನದಂಚಿಗೆ ತಲುಪಿದೆ.

Sports Club

ಈ ಹಿಂದೆ ಇಲ್ಲಿ ಸಹಾಯಕ ಆಯುಕ್ತರಾಗಿದ್ದ ಭರತ್‌ಲಾಲ್ ಮೀನಾ ಹಾಗೂ ಡಿವೈಎಸ್ಪಿಯಾಗಿದ್ದ ನಾಯಕ್‌ ಅವರು ಆಸಕ್ತಿ ತೋರಿ ಇದನ್ನು ದುರಸ್ತಿ ಮಾಡಿಸಿ ನಿರ್ವಹಣೆ ಮಾಡಿದ್ದರು. ಇದಕ್ಕಾಗಿ ಎರಡು ಬ್ಲಾಕ್‌ಗಳಿಗೆ ಅವರಿಬ್ಬರ ಹೆಸರಿಡಲಾಗಿದೆ. ಸದ್ಯ ಈ ಎರಡು ಬ್ಲಾಕ್ ಗಳು ಹಾಳಾಗಿ ದುಸ್ಥಿತಿ ತಲುಪಿವೆ.

ಕ್ಲಬ್‌ ಆವರಣದ ಟೆನ್ನಿಸ್‌ ಕೋರ್ಟ್‌ನಲ್ಲಿ ನಿತ್ಯ ಬೆಳಗ್ಗೆ ಪಟ್ಟಣದ ಗಣ್ಯರು, ಅಧಿಕಾರಿಗಳು ಟೆನ್ನಿಸ್‌ಆಡುತ್ತಾರೆ. ಅವರೆಲ್ಲರೂ ಪ್ರಯತ್ನಪಟ್ಟು ಪುರಸಭೆಯಿಂದ ಅನುದಾನ ಪಡೆದು ಟೆನ್ನಿಸ್‌ಕೋರ್ಟ್‌ಅಭಿವೃದ್ಧಿಪಡಿಸಿದ್ದಾರೆ. ಆದರೆ ಕ್ಲಬ್ ನ ದುರಸ್ಥಿ ಮಾಡಿಸಲು ಪ್ರಯತ್ನ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

Sports Club

ವಿಶಾಲವಾದ ಕರಡಕಲ್ ಕೆರೆಯಲ್ಲಿ ಯಾವಾಗಲೂ ನೀರಿನಿಂದ ಭರ್ತಿಯಾಗಿರುತ್ತಿದೆ. ಸಂಜೆ ವೇಳೆ ಕ್ಲಬ್‌ನಲ್ಲಿ ನಿಂತು ಕೆರೆ ವೀಕ್ಷಣೆ ಮಾಡುವುದೇ ಅದ್ಭುತ ಅನುಭವವಾಗಿದೆ. ಸ್ಪೋರ್ಟ್ ಕ್ಲಬ್‌ ಅಭಿವೃದ್ಧಿಪಡಿಸಿದರೆ ಪಟ್ಟಣದಲ್ಲಿ ಸುಂದರ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವೇ ಇಲ್ಲದಂತಾಗಿದೆ.

 ಇತಿಹಾಸ ಹೊಂದಿದ ಕಟ್ಟಡಗಳನ್ನು ಸಂರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಇತಿಹಾಸದ ಬಗ್ಗೆ ತಿಳಿಸುವ ಹಿನ್ನಲೆಯಲ್ಲಿ ಸ್ಪೋರ್ಟ್ಸ್ ಕ್ಲಬ್‍ಕಟ್ಟಡವನ್ನು ಸಂರಕ್ಷಣೆ ಮಾಡಬೇಕಾಗಿದೆ. ಕಂದಾಯ ಇಲಾಖೆಗೆ ಸೇರಿದ ಕಟ್ಟಡ ಹಾಗೂ ಜಾಗವನ್ನು ಕಂದಾಯ ಇಲಾಖೆ ಅಭಿವೃದ್ಧಿಗೆ ಮುಂದಾಗಬೇಕೆಂದು ಇತಿಹಾಸ ಪ್ರೇಮಿಗಳು ಆಗ್ರಹಿಸಿದ್ದಾರೆ.

Suddiduniya.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!