ನ್ಯೂ ಕರ್ನಾಟಕ ರೈತ ಸಂಘ, ಸಿಪಿಐ(ಎಂಎಲ್) ಪ್ರತಿಭಟನೆ
ಲಿಂಗಸುಗೂರು : ಭತ್ತ, ಹತ್ತಿ, ಸಜ್ಜೆ, ಮೆಕ್ಕೆಜೋಳ, ತೊಗರಿ ಬೆಳೆಗಳ ಬೆಲೆ ಕುಸಿದಿದ್ದು, ಇದರಿಂದ ರೈತರು ಸಂಕಷ್ಟದಲ್ಲಿದ್ದು ಕೂಡಲೇ ( Start a purchase center ) ಖರೀದಿ ಕೇಂದ್ರ ತೆರೆದು ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಿ, ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿ ನ್ಯೂ ಕರ್ನಾಟಕ ರೈತ ಸಂಘ ಹಾಗೂ ಸಿಪಿಐ(ಎಂಎಲ್) ಮಾಸ್ ಲೈನ್ ಸಂಘಟನೆಗಳ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಎಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತ ಕಟಾವು ಪ್ರಾರಂಭಗೊಂಡಿದೆ. ಸರ್ಕಾರ ಅತ್ಯಂತ ತೀವ್ರ ಗತಿಯಲ್ಲಿ ಭತ್ತ ಹಾಗು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ವರ್ಷ ರೈತರ ಭತ್ತ, ತೊಗರಿ ಖಾಲಿಯಾದ ಮೇಲೆ ಖರೀದಿ ಕೇಂದ್ರ ತೆರೆದು ವರ್ತಕರಿಗೆ ಹಾಗು ದಲ್ಲಾಳಿಗಳಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ಈ ರೈತ ವಿರೋಧಿ ಧೋರಣೆಗಳಿಗೆ ಹಾಗೂ ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರಿಗೆ ನಷ್ಟವುಂಟು ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಖರೀದಿ ಕೇಂದ್ರದ ಬಗ್ಗೆ ಮಾತನಾಡದ ಸಚಿವರು :
ಇದೇ ನವೆಂಬರ್ 04 ರಂದು ರಾಯಚೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಭತ್ತ ತೊಗರಿ ಖರೀದಿ ಕೇಂದ್ರ ತೆರೆಯುವ ಬಗ್ಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಶರಣಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ್ ಮಾತನಾಡದಿರುವುದು ಅತ್ಯಂತ ನೋವಿನ ಸಂಗತಿ. ಸದ್ಯದಲ್ಲಿ ಭತ್ತ, ಸಜ್ಜೆ, ಹತ್ತಿ, ಮೆಕ್ಕೆ ಜೋಳ ಖರೀದಿ ಕೇಂದ್ರದ ಅಗತ್ಯವಿದ್ದರು ಸಹ ಯಾವ ಕಾರಣದಿಂದ ಮಾತನಾಡಲಿಲ್ಲ..? ಅವರ ಈ ಧೋರಣೆ ಅರ್ಥವಾಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ರೂ.2,300 ಇದ್ದರೂ ಕೂಡ ದಲ್ಲಾಳಿಗಳು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದು. ಕೇಂದ್ರ ಕೃಷಿ ಮಂತ್ರಿ ಶಿವರಾಜ್ ಚೌವ್ಹಾಣ್‌ಗೆ ಪತ್ರ ಬರೆದು ಕರ್ನಾಟಕದಲ್ಲಿ ಬೆಳೆದ ಎಲ್ಲಾ ಭತ್ತ, ತೊಗರಿ ಇತರೆ ಕೃಷಿ ಉತ್ಪನ್ನಗಳನ್ನು ಯಾವುದೇ ನಿರ್ಬಂಧವಿಲ್ಲದೆ, ಖರೀದಿಸಲು ಒತ್ತಾಯಿಸಬೇಕು. ಸರ್ಕಾರ ತಕ್ಷಣವೇ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬಾರದಿದ್ದರೆ, ನೀರಾವರಿ ಪ್ರದೇಶದಲ್ಲೂ ಕೂಡ ರೈತರ ಆತ್ಮಹತ್ಯೆಗಳು ಸಂಭವಿಸುವ ಸಾಧ್ಯತೆ ಇದೆ. ಯಾಕೆಂದರೆ ಭತ್ತ, ತೊಗರಿ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ ಎಂದು ಆಗ್ರಹಿಸಿದರು.
ರಸ ಗೊಬ್ಬರ ಕೊರತೆಯಿಂದ ಹಿಂಗಾರು ಜೋಳ ಬಿತ್ತನೆ ಮಾಡಿದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಗೊಬ್ಬರ ಕಂಪನಿಗಳಿಗೆ ಕೊಡಬೇಕಾದ ಸಬ್ಸಿಡಿ ಬಾಕಿ ಹಣವನ್ನು ಉಳಿಸಿಕೊಂಡಿರುವುದರಿಂದ ಕಂಪನಿಗಳು ಈ ರಸಗೊಬ್ಬರವನ್ನು ಸರಬರಾಜು ಮಾಡುತ್ತಿಲ್ಲವೆಂದು ಗೊತ್ತಾಗಿದೆ.
ಅತ್ಯಂತ ತೀವ್ರ ಗತಿಯಲ್ಲಿ ಗ್ರಾಮ ಪಂಚಾಯತಿಗೊಂದು ಭತ್ತ, ತೊಗರಿ ಕೇಂದ್ರ ತೆರೆಯಬೇಕು ಮತ್ತು ಖರೀದಿ ಮಾಡಿದ ಒಂದು ತಿಂಗಳೊಳಗಡೆ ರೈತರ ಖಾತೆಗೆ ಹಣ ಜಮಾ ಮಾಡಬೇಕು.ರೈತರು ಬೆಳೆದ ಎಲ್ಲಾ ಭತ್ತ, ತೊಗರಿ ಇತರೆ ಕೃಷಿ ಉತ್ಪನ್ನಗಳಿಗೆ ಲಿಮಿಟೇಷನ್ ಮಾಡದೆ ಎಲ್ಲಾವನ್ನು ಖರೀದಿಸಬೇಕು. (Start a purchase center ) ಅತಿವೃಷ್ಟಿಯಿಂದ ರೈತರು ಬೆಳೆದ ಸಜ್ಜೆ, ಸೂರ್ಯಕಾಂತಿ, ತೊಗರೆ, ಭತ್ತ, ಮೆಕ್ಕೆಜೋಳ ಇತರ ಕೃಷಿ ಉತ್ಪನ್ನಗಳು ನಷ್ಟ ಹೊಂದಿರುತ್ತವೆ. ಸರ್ಕಾರ ನಷ್ಟ ಹೊಂದಿದ ಪ್ರತಿ ರೈತ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಸ್ಥಳೀಯ ದಲ್ಲಾಳಿಗಳು ಮತ್ತು ವರ್ತಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ರೈತರ ಉತ್ಪನ್ನಗಳು ಗುಣಮಟ್ಟ ಸರಿಯಿಲ್ಲವೆಂದು ಖರೀದಿ ತಿರಸ್ಕರಿಸಲಾಗುತ್ತದೆ.
ರೈತ ಸಂಘಟನೆ ಮುಖಂಡರು ಮತ್ತು ಕಂದಾಯ ಅಧಿಕಾರಿಗಳು ರೈತ ತಜ್ಞರ ಉಸ್ತುವಾರಿ ಸಮಿತಿ ರಚನೆ ಮಾಡಬೇಕು. ಕಳೆದ ವರ್ಷ ಹಿಂಗಾರು ಜೋಳ ಖರೀದಿಯಲ್ಲಿ ರೈತರಿಗೆ ಮತ್ತು ಸರ್ಕಾರಕ್ಕೆ ವಂಚನೆ ಮಾಡಿದ ಆಹಾರ ನಾಗರೀಕ ಸರಬರಾಜು ಇಲಾಖೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಕ್ರಮ ಜರುಗಿಸಬೇಕು. ಈ ಕುರಿತು ಸೂಕ್ತ ತನಿಖೆ ನಡೆಸಬೇಕು.ರಸಗೊಬ್ಬರ ಕೊರತೆಯಿಂದ ಹಿಂಗಾರು ಜೋಳ ಮತ್ತು ಭತ್ತದ ಬೆಳೆಗೆ ತೊಂದರೆಯಾಗುತ್ತದೆ. ಕೇಂದ್ರ ಸರ್ಕಾರ ಗೊಬ್ಬರ ಕಂಪನಿಗಳಿಗೆ ಕೊಡಬೇಕಾದ ಸಬ್ಸಿಡಿ ಹಣ ಕೊಡಲು ರಾಜ್ಯ ಸರ್ಕಾರ ಒತ್ತಡ ಹಾಕಬೇಕೆಂದು ಆಗ್ರಹಿಸಿದರು.
ಈ ವೇಳೆ ಕೆ ಆರ್ ಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶೇಖರಯ್ಯ ಗೆಜ್ಜೆಲಗಟ್ಟಾ, ಸಿಪಿಐ(ಎಂಎಲ್) ಮಾಸ್‌ಲೈನ್ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಯರದಿಹಾಳ, ತಾಲೂಕ ಅಧ್ಯಕ್ಷ ಗೌಸಖಾನ ಗುಂತಗೋಳ, ಆದಪ್ಪ ಗುರುಗುಂಟಾ, ಚೆನ್ನಬಸವ ಕೊಠಾ, ಯಲ್ಲಪ್ಪ ರಾಯದುರ್ಗ, ನಿಂಗಪ್ಪ ಟಣಮಣಕಲ್, ಚಂದಸಾಬ, ಆದಪ್ಪ, ಶರಣೋಜಿ ಪವಾರ್, ಶಿವು ಕೆಂಪು ಸೇರಿದಂತೆ ಅನೇಕರಿದ್ದರು.