ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಶಿಕ್ಷಕರ ದಿನಾಚರಣೆ
ಲಿಂಗಸುಗೂರು : ಯಾವುದೇ ಹುದ್ದೆಗಳು ಸಿಗಲಿಲ್ಲ ಎಂದು ಕೊನೆಗೆ ಶಿಕ್ಷಕರ ಹುದ್ದೆ ಆಯ್ಕೆ ಮಾಡುವವರು ಶಿಕ್ಷಕ ವೃತ್ತಿಯನ್ನು ಕೀಳಾಗಿ ಕಾಣಬಾರದು, ಈ ಜಗತ್ತಿನಲ್ಲಿ ಎಲ್ಲಾ ಹುದ್ದೆಗಳನ್ನು ಸೃಷ್ಠಿಸುವ ಶಿಕ್ಷಕ ವೃತ್ತಿ ಅದು ಶ್ರೇಷ್ಠ ವೃತ್ತಿಯಾಗಿದೆ ಎಂದು ನಂದವಾಡಗಿ ಮಹಾಂತೇಶ್ವರ ಮಠದ ಶ್ರೀಗಳಾದ ಡಾ.ಅಭಿನವ ಚೆನ್ನಬಸವ ಶಿವಾಚಾರ್ಯರು ಹೇಳಿದರು.
ಪಟ್ಟಣದ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ತಾಲೂಕು ಘಟಕ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಕರು ಮನುಷ್ಯನ ಬದುಕನ್ನು ಸುಂದರವಾಗಿ ಕೆತ್ತನೆ ಮಾಡುವ ಶಿಲ್ಪಿಗಳಾಗಿದ್ದಾರೆ. ಮಠಾಧೀಶರು ಭಕ್ತಿ ಮಾರ್ಗದರ್ಶನ ನೀಡಿದರೆ ಶಿಕ್ಷಕರು ಲೌಕಿಕ ಮಾರ್ಗದರ್ಶನ ನೀಡುತ್ತಾರೆ. ಇತ್ತೀಚಿನ ಶಾಲೆಗಳಲ್ಲಿ ಕ್ರೀಡೆಗಳೇ ಕಡಿಮೆಯಾಗಿವೆ. ಆಟದೊಂದಿಗೆ ಪಾಠ ಇರಬೇಕು. ಶಿಕ್ಷಕರು ಈಗಿನ ಶಿಕ್ಷಣ ವ್ಯವಸ್ಥೆ ತಕ್ಕಂತೆ ಬದಲಾವಣೆಯಾಗಬೇಕು. ಅಂಕಗಳ ಹಿಂದೆ ಬಿದ್ದಿರುವ ಪಾಲಕರ ಮನಸ್ಥಿತಿ ಬದಲಾವಣೆ ಮಾಡಬೇಕಾಗಿದೆ. ಶಿಕ್ಷಕ ವೃತ್ತಿ
ಅಂಕಗಳು ಉದ್ಯೋಗಕ್ಕಾಗಿ ಬೇಕು ಆದರೆ ಜ್ಞಾನಕ್ಕಾಗಿ ಅಲ್ಲ, ಶಿಕ್ಷಕರನ್ನು ಇಡೀ ಜಗತ್ತೇ ನಂಬಿದೆ ಆದರೆ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದ ಕೆಲಸವಾಗಿದೆ ಕರೊನಾ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಮಸ್ಯೆಗಳಿಂದಾಗಿ ಮುಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆ ನಡೆಸುವುದು ಕಷ್ಟದ ಕೆಲಸ :
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಟಿ.ಬಸವರಾಜ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳಿಗೂಂದು ಕಾನೂನು ನಮ್ಮ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳಿಗೊಂದು ಕಾನೂನು ಆಗಿದೆ. ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ತೆಗೆದುಕೊಳ್ಳುವ ಫೀಗಿಂತ ಅತ್ಯಂತ ಕಡಿಮೆ ಫೀಗೆ ಇಲ್ಲಿ ಶಿಕ್ಷಣ ನೀಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆ ನಡೆಸುವವರನ್ನು ದರೋಡೆಕೋರು, ಕಳ್ಳರು ಸುಳ್ಳರು ಎಂಬ ದೃಷ್ಠಿಯಲ್ಲಿ ಸಮಾಜ ಕಾಣುತ್ತಿರುವುದು ನಮಗೆ ನೋವಿನ ಸಂಗತಿಯಾಗಿದೆ. ಸರ್ಕಾರದ ನೀತಿಗಳಿಂದಾಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ಕಷ್ಟವಾಗುತ್ತಿದೆ. ಪ್ರತಿದಿನ ಶಾಲೆಗಳಲ್ಲಿ ಸಾಕಷ್ಟು ದೂರುಗಳು ಇದ್ದೇ ಇರುತ್ತೆ ಅವುಗಳನ್ನು ಮೆಟ್ಟಿನಿಂತ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಆಗದೇ ಮಾರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು. ಶಿಕ್ಷಕ ವೃತ್ತಿ
ಈ ಸಮಾರಂಭದಲ್ಲಿ ದೇವರಭೂಪುರ ತೋಪಿನಕಟ್ಟಿ ಮಠದ ಅಭಿನವ ಗಜದಂಡ ಶಿವಾಚಾರ್ಯರು ಮಾತನಾಡಿ, ಇಂದಿನ ಮಕ್ಕಳಿಗೆ ಬುದ್ದಿಗಿಂತ ಹೃದಯಕ್ಕೆ ಕೆಲಸ ಹಚ್ಚಬೇಕಾಗಿದೆ. ಸಂಕುಚಿತ ಮನೋಭಾವ ಬೆಳೆಸಿಕೊಂಡು ಚಿಕ್ಕ ವಿಷಯಗಳಿಗೆ ಜುಗುಪ್ಸೆಗೊಳ್ಳತ್ತಿರುವುದು ಆತಂಕಕಾರಿ ವಿಷಯವಾಗಿದೆ. ಶೈಕ್ಷಣಿಕ ಬದುಕು ರೂಪಿಸಿಕೊಳ್ಳಲು ಅತ್ಯುನ್ನತ ಸಾಧಕರಾದವರ ಕುರಿತು ಅರಿತು ಭವಿಷ್ಯದ ಬಗ್ಗೆ ಚಿಂತಿಸಬೇಕು.ಮಕ್ಕಳಿಗೆ ಶಿಕ್ಷಣ ಮನೋಬಲ ಹಾಗೂ ಆತ್ಮ ಬಲ ಹೆಚ್ಚಾಗಿ ಕಲಿಸಬೇಕಾಗಿದೆ. ಮೊಬೈಲ್ ಗೀಳುಗಿಂತ ಪುಸ್ತಕದ ಗೀಳು ಹೆಚ್ಚಾಗಿ ಕಾಣಬೇಕಾಗಿದೆ. ಇಂದಿನ ಮಕ್ಕಳಿಗೆ ಸಂಬಂಧಗಳ ಮಹತ್ವವೇ ಅರಿಯದಾಗಿದೆ ಈಗಾಗಿ ಶಿಕ್ಷಣ ಜೊತೆ ಸಂಸ್ಕಾರ ಕಲಿಸಬೇಕಾಗಿದೆ ಎಂದರು.
ಸನ್ಮಾನ :
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಶಿವರಾಜ ಕೆಂಭಾವಿ, ರಾಘವೇಂದ್ರ ಭಜಂತ್ರಿ, ಶ್ರೀನಿವಾಸ ಮಧುಶ್ರೀ, ಶಿವರಾಜ, ಮಂಜುನಾಥ ಗಡದ್ ಇವರನ್ನು ಸನ್ಮಾನಿಸಲಾಯಿತು. ಖಾಸಗಿ ಶಾಲಾ ಶಿಕ್ಷಕರನ್ನು ಗುರುತಿಸಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ವಿಜಯಮಹಾಂತೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಬಾಬುರೆಡ್ಡಿ ಮುನ್ನೂರು, ಬಿಇಒ ಹುಂಬಣ್ಣ ರಾಠೋಡ್, ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ, ಒಕ್ಕೂಟದ ತಾಲೂಕಾಧ್ಯಕ್ಷ ಮಂಜುನಾಥಸ್ವಾಮಿ ತೋರಣದಿನ್ನಿ, ಒಕ್ಕೂಟದ ಪದಾಧಿಕಾರಿಗಳಾದ ನರಸಪ್ಪ ಯಾದವ್, ಸಂಜೀವಕುಮಾರ ಕಂದಗಲ್, ಕೇವಶರೆಡ್ಡಿ, ಆದಯ್ಯಸ್ವಾಮಿ ದಳಪತಿ, ಹೆಚ್.ಶರ್ಫದ್ದೀನ್, ಶಿವಕುಮಾರ, ಪ್ರಕಾಶ ಪಾಟೀಲ್, ಶಂಕರಲಿಂಗಯ್ಯತಾತ, ನರೇಂದ್ರ ನಾಥ ಸೇರಿದಂತೆ ಅನೇಕರಿದ್ದರು.