ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹ
ಲಿಂಗಸುಗೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಂಸತ್ತಿನಲ್ಲಿ ಅವಮಾನ ಮಾಡಿದ ಕೇಂದ್ರ ಸಚಿವ ಅಮಿತ್ ಶಾ (Amit shah )ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಮುಖಂಡರು ಎಸಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣದ ಕುರಿತ ಎರಡು ದಿನಗಳ ಚರ್ಚೆಯನ್ನು ಮುಕ್ತಾಯಗೊಳಿಸಿ ಡಿ.17 ಸಂಸತ್ತಿನಲ್ಲಿ ಮಾತನಾಡಿದ ಅಮಿತ್ ಶಾ, “ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಈಗ ಫ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮದವರೆಗೂ ಸ್ವರ್ಗ ಸಿಗುತಿತ್ತು” ಎಂದು ವ್ಯಂಗ್ಯವಾಗಿ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತೇವೆ.
ಲೋಕಸಭಾ ಸದಸ್ಯತ್ವ ಸ್ಥಾನ ರದ್ದುಗೊಳಿಸಿ :
ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಿಂದಲೇ ದೇಶದ ಜನಸಾಮಾನ್ಯನು ಕೂಡ ಪ್ರಧಾನಿಯಾಗಬಹುದು. ಅಂತಹ ಸಂವಿಧಾನದಿಂದಲೇ ರಾಜಕೀಯ ಅಧಿಕಾರವನ್ನು ಅನುಭವಿಸುತ್ತಿರುವ ಕೇಂದ್ರ ಗೃಹ ಸಚಿವರು, ಗೃಹ ಸಚಿವರಾಗಿ ಉಳಿಯಲು ಹೊಂದುವ ಅರ್ಹತೆ ಇಲ್ಲ, ಬಾಬಾ ಸಾಹೇಬರ ಹೆಸರು ಕೇಳಿದರೆ ಕೆರಳುವಷ್ಟು ದ್ವೇಷ ಬಿಜೆಪಿ ನಾಯಕರಿಗಿದೆ. ಕೂಡಲೇ ಅಮಿತ್ ಶಾ (Amit shah) ದೇಶದ ಜನರ ಕ್ಷಮೆ ಯಾಚಿಸಬೇಕು ರಾಷ್ಟ್ರಪತಿಗಳು ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ದಲಿತ ಸಂಘಟನೆಗಳು ಆಗ್ರಹಿಸಿವೆ.
ದಲಿತ ಸಂಘಟನೆಗಳ ಸಂಯುಕ್ತ ವೇದಿಕೆ ಮುಖಂಡರಾದ ಲಿಂಗಪ್ಪ ಪರಂಗಿ, ಹನುಮಂತಪ್ಪ ಕುಣಿಕೆಲ್ಲೂರು, ಮೋಹನಗೋಸ್ಲೆ, ಹುಲಗಪ್ಪ ಕೆಸರಟ್ಟಿ, ದಸಂಸ ವಿಭಾಗೀಯ ಅಧ್ಯಕ್ಷ ಬಸವರಾಜ ಸಾಸಲಮರಿ,ತಾಲೂಕಾಧ್ಯಕ್ಷ ಬಸವರಾಜ ಕುಣೆಕಲ್ಲೂರ, ಹುಲಗಪ್ಪ ಕುಣಿಕೆಲ್ಲೂರು, ಗಣೇಶ ಮ್ಯಾಗೇರಿ, ದುರಗಪ್ಪ ಡಬ್ಬರಮಡಗು,ದುರಗಪ್ಪ ಅಗ್ರಹಾರ, ಶಿವಪ್ಪ ಆನೆಹೊಸೂರು, ಬಸವರಾಜ ಆನೆಹೊಸೂರು, ಚಂದ್ರಶೇಖರ ಗೋರೆಬಾಳ, ಮೌನೇಶ ಗೋರೆಬಾಳ, ಈರಪ್ಪ ಕುಣಿಕೆಲ್ಲೂರ, ಮೌನೇಶ ಐದನಾಳ, ಬಾಳಪ್ಪ ಗೊರಬಾಳ,ಹುಲಗಪ್ಪ ಜೂಲಗುಡ್ಡ, ಹನುಮಂತಪ್ಪ ಬೋವಿ ಮಿಟ್ಟಕೆಲ್ಲೂರ ಹಾಗೂ ಇನ್ನಿತರಿದ್ದರು.