ಸಾರಿಗೆ ಘಟಕದ ಅಧಿಕಾರಿಗಳ ವಿರುದ್ಧ ಆಕ್ರೋಶ :
ಲಿಂಗಸುಗೂರು : ಅನೇಕ ದಿನಗಳಿಂದ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಮನವಿ ಮಾಡಿದರೂ ಮನವಿಗೆ ಸ್ಪಂದಿಸದ ಸಾರಿಗೆ ಘಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿದ್ಯಾರ್ಥಿಗಳು ಬಸ್ ತಡೆದು (Student protest) ಪ್ರತಿಭಟಿಸಿದ ಘಟನೆ ಲಿಂಗಸುಗೂರು ತಾಲೂಕಿನ ಜಾಗಿರನಂದಿಹಾಳ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಲಿಂಗಸುಗೂರು ನಿಂದ ಜಾಗಿರನಂದಿಹಾಳ ಗ್ರಾಮಕ್ಕೆ ಬೆಳಿಗ್ಗೆ 9 ಗಂಟೆ ಮತ್ತು ಸಂಜೆ 4.30ಕ್ಕೆ ಬಸ್ ಗಳನ್ನು ಓಡಿಸಲಾಗುತ್ತೆ, ಆದರೆ ಸಮಯ ಮೀರಿ ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಬಸ್ ಓಡಿಸುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೂ ಪೆಟ್ಟು :
ಜಾಗಿರನಂದಿಹಾಳ ಗ್ರಾಮದಿಂದ 60ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಬ್ಯಾಸಕ್ಕಾಗಿ ಲಿಂಗಸುಗೂರು ಪಟ್ಟಣದಲ್ಲಿ ವಿವಿಧ ಶಾಲಾ-ಕಾಲೇಜುಗಳಿಗೆ ಪ್ರತಿನಿತ್ಯವೂ ತೆರಳುತ್ತಿದ್ದು ಆದರೆ ನಿಗದಿತ ಸಮಯ ಮೀರಿ ಬಸ್ ಗಳು ಓಡಿಸುತ್ತಿದ್ದರಿಂದ ವಿದ್ಯಾರ್ಥಿಗಳು ತಡವಾಗಿ ಶಾಲಾ-ಕಾಲೇಜಿಗಳಿಗೆ ಹೋಗುವಂತಾಗಿದೆ, ವಾಪಸ್ಸು ಊರಿಗೆ ಬರಬೇಕಾದರೆ ಸಂಜೆ 7 ಗಂಟೆವರಿಗೆ ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಊರಿಗೆ ತಲುಪಲು ರಾತ್ರಿ ಎಂಟು ಗಂಟೆಯಾಗುತ್ತೆ, ತಡವಾಗಿ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಿದಂತಾಗುತ್ತಿದೆ. ದಿನಂಪ್ರತಿ ಬಸ್‍ಗೆ ಕಾಯುವಂತಾದರೆ ಇನ್ನೂ ಶಿಕ್ಷಣದತ್ತ ಗಮನಹರಿಸುವುದು ಯಾವಾಗ ಎನ್ನುವ ಪ್ರಶ್ನೆ ವಿದ್ಯಾರ್ಥಿಗಳ ಪಾಲಕರಲ್ಲಿ ಮೂಡಿದೆ.
ಮನವಿಗೆ ಕ್ಯಾರೆ ಎನ್ನದ ಸಾರಿಗೆ ಅಧಿಕಾರಿಗಳು :
ಜಾಗಿರನಂದಿಹಾಳ ಗ್ರಾಮಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಅನೇಕ ತಿಂಗಳಿಂದ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಲಿಖಿತ ಮನವಿ ಮೂಲಕ ಹಾಗೂ ಮೌಖಿಕವಾಗಿ ಮನವಿ ಮಾಡಿದರೂ ಕೂಡಾ ಸಮಯಕ್ಕೆ ಸರಿಯಾಗಿ ಬಸ್ ಓಡುತ್ತಿಲ್ಲ, ಆದ್ಯಾಗೂ ನಿನ್ನೆ ಮತ್ತು ಮೊನ್ನೆ ಕೂಡಾ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ, ಆದರೂ ಹಳೆಯ ಚಾಳಿಯಂತೆ ಲೇಟಾಗಿ ಬಸ್ ಬರುತ್ತಿದ್ದರಿಂದ ಇಂದು ಬೆಳಿಗ್ಗೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ( Student protest )ಬಸ್ ತಡೆದು ಸಾರಿಗೆ ಘಟಕದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
“ ಜಾಗಿರನಂದಿಹಾಳ ಗ್ರಾಮಕ್ಕೆ ಬಸ್ಗಳು ತಡವಾಗಿ ಬರುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ. ಸಾರಿಗೆ ಘಟಕ ನಿಗದಿತ ಪಡಿಸಿದ ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಸಾಕಷ್ಟು ಭಾರಿ ಮನವಿ ಮಾಡಿದರೂ ಸಾರಿಗೆ ಘಟಕದ ವ್ಯವಸ್ಥಾಪಕರು ನಮ್ಮ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ಮಾಡಿದ್ದರಿಂದ ಇಂದು ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಿದ್ದೇವೆ, ಸ್ಥಳಕ್ಕೆ ಸಾರಿಗೆ ಘಟಕದ ವ್ಯವಸ್ಥಾಪಕರು ಬರೋವರಿಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಗ್ರಾಮದ ಯುವ ಮುಖಂಡ ಗದ್ದನೆಗೌಡ ಪಾಟೀಲ್ ತಿಳಿಸಿದ್ದಾರೆ.